ಗೀತೆ – 21 : ವಂಶದಲ್ಲಿ ಅಧರ್ಮ ಪ್ರವೇಶಿಸ ಬಾರದು

Gita
Spread the love

ಶ್ರೀ ಮದ್ಭಗವದ್ಗೀತಾ : 21

41.ಅಧರ್ಮಾಭಿಭವಾತ್ ಕೃಷ್ಣ ! ಪ್ರದುಷ್ಯಂತಿ ಕುಲಸ್ತ್ರಿಯಃ।
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ! ಜಾಯತೇ ವರ್ಣಸಂಕರಃ॥

ಕೃಷ್ಣ = ಓ ಶ್ರೀಕೃಷ್ಣನೆ!, ಅಧರ್ಮಾಭಿಭವಾತ್ = ಕುಲವನ್ನು ಅಧರ್ಮವು ಆಕ್ರಮಿಸುವುದರಿಂದ, ಕುಲಸ್ತ್ರೀಯಃ = ಕುಲಸ್ತ್ರೀಯರು, ಪ್ರದುಷ್ಯಂತಿ = ಕೆಡುತ್ತಾರೆ. ವಾರ್ಷ್ಣೇಯ = ವೃಷ್ಟಿವಂಶದಲ್ಲಿ ಜನಿಸಿದ ಶ್ರೀಕೃಷ್ಣನೆ!, ಸ್ತ್ರೀಷು = ಹೆಂಗಸರು, ದುಷ್ಟಾಸು = ಶೀಲ ಕೆಟ್ಟವರಾದರೆ, ವರ್ಣಸಂಕರಃ = ವರ್ಣವ್ಯವಸ್ಥೆಯ ಸಾಂಕರ್ಯವು, ಜಾಯತೇ = ಆಗುತ್ತದೆ.

ಓ ಶ್ರೀಕೃಷ್ಣನೆ! ವಂಶದೊಳಗೆ ಅಧರ್ಮವು ಪ್ರವೇಶಿಸಿದರೆ, ಮೊದಲನೆಯದಾಗಿ ಸ್ತ್ರೀಯರು ಕೆಡುತ್ತಾರೆ. ಅವರು ಕೆಟ್ಟರೆ, ತತ್ ಕ್ಷಣವೇ ವರ್ಣಗಳಲ್ಲಿ ಕಲಬೆರಕೆಯುಂಟಾಗುವುದು.

42.ಸಂಕರೋ ನರಕಾಯೈವ ಕುಲಘಾನಾಂ ಕುಲಸ್ಯ ಚ।
ಪತಂತಿ ಪಿತರೋ ಹ್ಯೇಷಾಂ ಲುಪ್ತ ಪಿಂಡೋದಕ ಕ್ರಿಯಾಃ॥

ಸಂಕರಃ = ವರ್ಣಗಳ ಕಲಬೆರಕೆಯು, ಕುಲಜ್ಞಾನಾಂ ಕುಲವನ್ನು = ನಾಶಮಾಡಿದವರಿಗೂ, ಕುಲಸ್ಯ-ಚ = ಕುಲಕ್ಕೂ, ನರಕಾಯ-ಏವ = ನರಕವನ್ನುಂಟುಮಾಡುವುದಕ್ಕಾಗಿಯೇ ಆಗಿದೆ. ಹಿ = ಏಕೆಂದರೆ, ಏಷಾಂ = ಈ ವಂಶದವರ, ಪಿತರಃ = ಪಿತೃಗಳು (ಹಿಂದಿನ ತಲೆಮಾರಿನವರು), ಲುಪ್ತಪಿಂಡೋದಕ- ಕ್ರಿಯಾಃ = ಪಿಂಡಪ್ರದಾನ ತಿಲತರ್ಪಣಾದಿ ರೂಪವಾದ ಪಿತೃಕರ್ಮಗಳು ಇಲ್ಲದವರಾಗಿ, ಪತಂತಿ = ನರಕದಲ್ಲಿ ಬಿದ್ದು ಹೋಗುವರು.

ವರ್ಣಸಂಕರವು ಉಂಟಾದರೆ, ಅದಕ್ಕೆ ಕಾರಕರಾದ ವಂಶನಾಯಕರು ಯಾರಿರುವರೋ ಅವರು, ಅವರ ವಂಶಗಳು ಕೂಡಾ ನರಕದಲ್ಲಿ ಬಿದ್ದುಬಿಡುವರು. ಏಕೆಂದರೆ, ಈ ವಂಶಗಳಲ್ಲಿ ಪಿತೃದೇವತೆಗಳಿಗೆ ಪಿಂಡಪ್ರದಾನ ಮಾಡುವವರು, ಜಲ ತಿಲ ತರ್ಪಣ ಮಾಡುವವರು ಇಲ್ಲದೇ ಹೋಗುವರು. ಆದ್ದರಿಂದ, ವರಸೆಯಾಗಿ ಆ ವಂಶದಲ್ಲಿನ ಪ್ರಜೆಗಳೆಲ್ಲರೂ ನರಕಕ್ಕೆ ಹೋಗುವರು. ಹಾಗೆ ಹಿಂದಿನ ತಲೆಮಾರಿನ ಪಿತೃಗಳೆಲ್ಲರೂ ನರಕದ ಪಾಲಾದರೆ, ಆ ವಂಶದಲ್ಲಿ ಹುಟ್ಟಲಿರುವ ಪ್ರಜೆಗಳನ್ನು ಆಶೀರ್ವದಿಸುತ್ತಾ, ಅವರ ಹಿತಾ ಹಿತವನ್ನು ಊರ್ಧ್ವಲೋಕದಿಂದ ನೋಡಬಲ್ಲ ಪುಣ್ಯಾತ್ಮರಾದ ಪಿತೃದೇವತೆಗಳೇ ಉಳಿಯದೆ ಹೋಗುವರು. ಅದರಿಂದ ಆ ವಂಶಗಳಲ್ಲಿ ಮುಂದೆ ಹುಟ್ಟಲಿರುವವರು ಇನ್ನಷ್ಟು ಪಾಪಾತ್ಮರಾಗುವರು.

43.ದೋಷರೇತೈಃ ಕುಲಘ್ನಾನಾಂ ವರ್ಣಸಂಕರ ಕಾರಕೈಃ।
ಉತ್ಸದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ||

ವರ್ಣಸಂಕರಕಾರಕ್ಕೆ: = ವರ್ಣಸಂಕರವನ್ನುಂಟುಮಾಡುವ, ಏತೈಃ = ಈ ಕುಲಜ್ಞಾನಾಂ-ದೋಷ್ಯೆಃ = ವಂಶನಾಶಕರ ದೋಷಗಳಿಂದ, ಶಾಶ್ವತಾಃ = ಅನಾದಿಯಾಗಿ ಬರುತ್ತಿರುವ, ಜಾತಿಧರ್ಮಾಃ = ಜಾತಿಧರ್ಮಗಳು, ಕುಲಧರ್ಮಾಃ -ಚ = ಹಾಗೂ ಕುಲಧರ್ಮಗಳೂ, ಉತ್ಸಾದ್ಯಂತೇ = ನಿರ್ಮೂಲಿಸಲ್ಪಡುವುವು.

ವಂಶವಿನಾಶವನ್ನುಂಟುಮಾಡುವವರು ಎಸಗುವ ಕೆಟ್ಟಕೆಲಸಗಳೆಲ್ಲಾ ವರ್ಣಸಾಂಕರ್ಯಕ್ಕೆ ದಾರಿ ಮಾಡಿಕೊಡುತ್ತವೆ. ಅಂತಹ ದುರಾತ್ಮರ ದುಶ್ಚರ್ಯೆಗಳಿಂದ ಸನಾತನವಾಗಿ ಬರುತ್ತಿರುವ ಜಾತಿಧರ್ಮಗಳು, ವಂಶಧರ್ಮಗಳು ಕೂಡ ಬುಡದ ಸಮೇತ ಉರುಳಿಹೋಗುತ್ತವೆ.

44.ಉತ್ಪನ್ನ ಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ!!
ನರಕೇ ನಿಯತಂ ವಾಸಃ ಭವತೀತ್ಯನುಶುಶ್ರುಮ|

ಜನಾರ್ದನ = ಓ ಶ್ರೀಕೃಷ್ಣನೆ!, ಉತ್ಪನ್ನಕುಲಧರ್ಮಾಣಾಂ = ನಷ್ಟವಾದ ವಂಶಧರ್ಮಗಳುಳ್ಳ, ಮನುಷ್ಯಾಣಾಂ = ಮನುಜರಿಗೆ, ನರಕೇ = ನರಕದಲ್ಲಿ, ವಾಸಃ = ನಿವಾಸವು, ನಿಯತಂ = ತಪ್ಪದೇ, ಭವತಿ = ಆಗುವುದು, ಇತಿ = ಎಂದುಲ್ಲ ಅನುಶುಶ್ರುಮ = ನಾವು ಕೇಳುತ್ತಿದ್ದೇವೆ.

ಓ ಜನಾರ್ಧನನೆ ! ವಂಶಧರ್ಮಗಳು ನಶಿಸಿಹೋದ ವಂಶಗಳಲ್ಲಿ ಹುಟ್ಟಿದ ಮನುಜರಿಗೆ ಶಾಶ್ವತವಾಗಿ ನರಕವಾಸವು ತಪ್ಪದ್ದಲ್ಲ ಎಂದು ಧರ್ಮಶಾಸ್ತ್ರಜ್ಞರು ಹೇಳಿರುವುದನ್ನು ಕೇಳುತ್ತಿದ್ದೇವೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ