ಯು ಪಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 10 ಮಕ್ಕಳ ಸಾವು

Spread the love

ಝಾನ್ಸಿ/ಲಖನೌ:
ಉತ್ತರ ಪ್ರದೇಶದ ಝಾನ್ಸಿಯ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ನವಜಾತ ಶಿಶುಗಳು ಸಾವನ್ನಪ್ಪಿದ್ದರೆ ಕನಿಷ್ಠ 16 ಮಕ್ಕಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ರಾತ್ರಿ 10:45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವಿನಾಶ್ ಕುಮಾರ್ ಅವರು ಸಾವುನೋವುಗಳ ವಿವರವನ್ನು ಖಚಿತಪಡಿಸಿದ್ದಾರೆ.
ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು 44 ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ. ಆ ಕ್ಷಣದಲ್ಲಿ ಕನಿಷ್ಠ 54 ಮಕ್ಕಳನ್ನು NICU ಗೆ ದಾಖಲಿಸಲಾಗಿಸಲಾಗಿತ್ತು ಎಂದು ತಿಳಿದುಬಂದಿದೆ. 10 ಬಲಿಪಶುಗಳಾದ ಮಕ್ಕಳಲ್ಲಿ ಏಳು ಮಂದಿಯನ್ನು ಗುರುತಿಸಲಾಗಿದೆ, ಉಳಿದ ಮೂವರನ್ನು ಗುರುತಿಸಲು ಅಗತ್ಯವಿದ್ದರೆ ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಗೊಂಡ ಮಕ್ಕಳ ಪೋಷಕರಿಗೆ ಮಕ್ಕಳನ್ನು ಭೇಟಿಯಾಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ತಡೆ ನಡೆಸುವುದನ್ನು ತಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಂಬಂಧಿಕರು ಇದೀಗ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಶಿಶುಗಳ ಗುರುತಿನ ಬಗ್ಗೆ ಯಾವುದೇ ಗೊಂದಲವನ್ನು ತಪ್ಪಿಸಲು ಬೆಂಕಿಯಲ್ಲಿ ಗಾಯಗೊಂಡ ತಮ್ಮ ಮಕ್ಕಳನ್ನು ಭೇಟಿ ಮಾಡಲು ಪೋಷಕರಿಗೆ ಅವಕಾಶ ನೀಡಲಿಲ್ಲ ಎಂದು ಮೂಲಗಳು ಸೂಚಿಸುತ್ತವೆ.
ಆಕ್ಸಿಜನ್ ಕಾನ್ಸೆಂಟ್ರೇಟರ್ ಒಳಗೆ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.