ಶ್ರೀಮದ್ಭಗವದ್ಗೀತಾ : 19
34 . ಆಚಾರ್ಯಃ ಪಿತರಃ ಪುತ್ರಾಃ ತಥೈವ ಚ ಪಿತಾಮಹಾಃ ।
ಮಾತುಲಾ ಶ್ಯಶುರಾಃ ಪೌತ್ರಾಂ ಶ್ಯಾಲಾ ಸ್ಸಂಬಂಧಿನಸ್ತಥಾ ॥
ಆಚಾರ್ಯಾ: = ಗುರುಗಳು, ಪಿತರಃ = ತಂದೆಯ ವಾವೆಯವರು, ಪುತ್ರಾಃ = ಮಕ್ಕಳು, ತಥಾ-ಏವ = ಹಾಗೆಯೇ, ಪಿತಾಮಹಾಃ-ಚ = ತಾತಂದಿರು, ಮಾತುಲಾಃ = ಸೋದರಮಾವಂದಿರು, ಶ್ವಶುರಾಃ = ಹೆಣ್ಣುಕೊಟ್ಟ ಮಾವಂದಿರು, ಪೌತ್ರಾಃ = ಮುಮ್ಮಕ್ಕಳು, ಶ್ಯಾಲಾಃ = ಭಾವಮೈದುನರು, ತಥಾ = ಹಾಗೆಯೇ, ಸಂಬಂಧಿನಃ = ಇತರ ಬಂಧುಗಳು, ಯುದ್ದೇ = ಯುದ್ಧರಂಗದಲ್ಲಿ, ಅವಸ್ಥಿತಾಃ = ನಿಂತಿದ್ದಾರೆ (ಈ, ಕೊನೆಯ ಎರಡು ಪದಗಳನ್ನು ಹಿಂದಿನ ಶ್ಲೋಕದಿಂದ ತಂದು ಅನ್ವಯಿಸಲಾಗಿದೆ.
ಗುರುಗಳು, ತಂದೆಯ ವಾವೆಯವರು, ಮಕ್ಕಳು, ಅಜ್ಜಂದಿರು, ಸೋದರಮಾವಂದಿರು, ಮಾವಂದಿರು, ಮುಮ್ಮಕ್ಕಳು, ಭಾವಮೈದುನರು, ಇತರ ಬಂಧುಗಳು ಎಲ್ಲರೂ ಈ ಯುದ್ಧಭೂಮಿಯಲ್ಲಿ ಯುದ್ಧಕ್ಕೆ ಸಿದ್ಧವಾಗಿ ಕಾಣಿಸುತ್ತಿದ್ದಾರೆ.
35.ಏತಾನ್ನ ಹಂತುಮಿಚ್ಛಾಮಿ ಘ್ನತೋSಪಿ ಮಧುಸೂದನ।
ಅಪಿ ತ್ರೈಲೋಕ್ಯ ರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ।।
ಮಧುಸೂದನ = ಓ ಶ್ರೀಕೃಷ್ಣನೆ!, (ಅಹಂ = ನಾನು), ಘ್ನತಃ-ಅಪಿ = ಆಯುಧಗಳಿಂದ ಹೊಡೆಯಲ್ಪಟ್ಟವನಾಗಿಯೂ, (ನನ್ನನ್ನು ಇವರು ಸಂಹರಿಸುತ್ತಿದ್ದರೂ) ಏತಾನ್ = ಈ ಬಂಧುಗಳನ್ನು, ತೈಲೋಕ್ಯರಾಜ್ಯಸ್ಯ-ಹೇತೋಃ-ಅಪಿ = ಮೂರುಲೋಕದ ರಾಜ್ಯಭಾರಕ್ಕಾಗಿಯೂ ಸಹ, ಹಂತುಂ= ಆಯುಧಗಳಿಂದ ಹೊಡೆಯಲು, ಸಂಹರಿಸಲು, ನ-ಇಚ್ಚಾಮಿ = ಇಚ್ಛಿಸೆನು. ಮಹೀಕೃತೇ = ಇನ್ನು ಕೇವಲ ಈ ಭೂಸಾಮ್ರಾಜ್ಯಕ್ಕಾಗಿ (ಕೊಲ್ಲಲಾರನೆಂದು), ಕಿಂ-ನು = ಹೇಳಬೇಕೇ ?
ಓ ಶ್ರೀಕೃಷ್ಣ! ಇವರೆಲ್ಲರೂ ನನ್ನನ್ನು ಹೊಡೆದರೂ, ಸಾಯಿಸಿದರೂ ಸರಿ, ನಾನು ಇವರನ್ನು ಹೊಡೆಯೆನು, ಸಂಹರಿಸೆನು. ಮೂರು ಲೋಕದ ರಾಜ್ಯಾಧಿಪತ್ಯವು ಬರುವುದೆಂದು ಹೇಳಿದರೂ ಸರಿ, ಆ ಕೆಲಸವನ್ನು ಮಾಡಲಾರೆನು. ಇನ್ನು ಕೇವಲ ಭೂಖಂಡ ಸಾಮ್ರಾಜ್ಯಕ್ಕಾಗಿ ಆ ಕೆಲಸವನ್ನು ಮಾಡೆನೆಂದು ಪ್ರತ್ಯೇಕವಾಗಿ ಹೇಳಬೇಕೇ ?
ಅವತಾರಿಕೆ :
“ಕೌರವರು ನಿಮ್ಮ ವಿಷಯದಲ್ಲಿ ಘೋರವಾದ ಅಪಚಾರಗಳನ್ನು ಮಾಡಿರುವರಲ್ಲವೆ, ಅವರ ಮೇಲೆ ಕನಿಕರ ತೋರಿಸುವುದೇನು ?” ಎಂದು ಶ್ರೀ ಕೃಷ್ಣನು ಕೇಳಬಹುದೆಂದು ಆಲೋಚಿಸಿ, ಅರ್ಜುನನು ತಾನೇ ಮಾಧಾನವನ್ನು ಹೇಳುತ್ತಿದ್ದಾನೆ –
36.ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿ ಸ್ಪ್ಯಾಜ್ಜನಾರ್ದನ।
ಪಾಪಮೇವಾಶ್ರಯೇದಸ್ಮಾನ್ ಹತೈ ತಾನಾತತಾಯಿನಃ||
ಜನಾರ್ದನ = ಓ ಶ್ರೀಕೃಷ್ಣನೆ!, ಧಾರ್ತರಾಷ್ಟ್ರಾನ್ = ಧೃತರಾಷ್ಟ್ರನ ಪುತ್ರರನ್ನು, ನಿಹತ್ಯ= ಸಂಹರಿಸಿ (ಸಂಹರಿಸಿದರೆ), ನಃ = ನಮಗೆ, ಕಾ = ಏನು, ಪ್ರೀತಿಃ = ಸಂತೋಷವು, ಸ್ಯಾತ್ = ಉಂಟಾಗುವುದು ? ಏತಾನ್ = ಈ, ಆತತಾಯಿನಃ = ದುರ್ಮಾರ್ಗರನ್ನು, ಹತ್ವಾ = ಕೊಂದು (ಕೊಂದರೆ), ಅಸ್ಮಾನ್= ನಮ್ಮನ್ನು, ಪಾಪಂ- ಏವ = ಪಾಪವೇ, ಆಶ್ರಯೇತ್ = ಸುತ್ತಿಕೊಳ್ಳುವುದು.
ಜನಾರ್ದನನೆ! ನಮ್ಮ ದೊಡ್ಡಪ್ಪನ ಮಕ್ಕಳಾದ ದುರ್ಯೋಧನಾದಿಗಳನ್ನು ಕೊಂದರೆ ಮಾತ್ರ, ನಮಗಾಗುವ ಆನಂದವಾದರೂ ಏನಿರುವುದು? ಇವರು ದುರ್ಮಾರ್ಗರೆಂಬ ಮಾತು ಸತ್ಯವೇ. ಆದರೂ ಇವರನ್ನು ಕೊಂದರೆ ನಮಗೆ ಪಾಪವೇ ಸುತ್ತಿಕೊಳ್ಳುವುದು. ಏಕೆಂದರೆ, ಇವರೊಂದಿಗೆ ಅಮಾಯಕರಾದ ಇತರ ಬಂಧುಗಳನ್ನೂ ಕೂಡ ಕೊಲ್ಲಬೇಕಾಗಿಬರುವುದಲ್ಲವೆ! ಅಷ್ಟು ಮಾತ್ರವಲ್ಲದೆ, ಇವರು ಎಷ್ಟು ದುರ್ಮಾರ್ಗರಾದರೂ ನನ್ನ ಸೋದರರಲ್ಲವೆ!
37.ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ ಸ್ವಬಾಂಧವಾನ್ ।
ಸ್ವಜನಂ ಹಿ ಕಥಂ ಹತ್ವಾ ಸುಖಿನ ಸ್ಯಾಮ ಮಾಧವ||
ತಸ್ಮಾತ್ = ಆದ್ದರಿಂದ, ವಯಂ = ನಾವು, ಸ್ವಬಾಂಧವಾನ್ = ನಮಗೆ ಬಂಧುಗಳಾಗಿರುವ, ಧಾರ್ತರಾಷ್ಟ್ರಾನ್ = ಧೃತರಾಷ್ಟ್ರನ ಮಕ್ಕಳನ್ನು, ಹಂತುಂ = ಕೊಲ್ಲಲು, ನ-ಅರ್ಹಾಃ = ಅರ್ಹರಲ್ಲ. ಮಾಧವ = ಓ ಶ್ರೀಕೃಷ್ಣನೆ!, ಸ್ವಜನಂ = ಸ್ವಜನರನ್ನು, ಹತ್ವಾ = ಕೊಂದು, ಕಥಂ = ಹೇಗೆ, ಸುಖಿನಃ = ನಾವು ಸುಖಿಗಳು, ಸ್ಯಾಮ = ಆಗುತ್ತೇವೆ?
ಓ ಮಾಧವನೆ! ನಮ್ಮೆದುರಿಗಿರುವವರು ದೊಡ್ಡಪ್ಪನ ಮಕ್ಕಳು. ನಮ್ಮ ಸ್ವಂತ ಬಂಧುಗಳು. ಅವರನ್ನು ನಾವು ಹೇಗೆ ಕೊಲ್ಲುವುದು ? ಕೊಂದು ಸುಖವಾಗಿರುವುದಾದರೂ ಹೇಗೆ ?
ಅವತಾರಿಕೆ :
“ದುರ್ಯೋಧನನಿಗೆ ಇಲ್ಲದ ಚಿಂತೆ ನಿನಗೇಕಯ್ಯಾ? ಈ ಯುದ್ಧವನ್ನು ನಮ್ಮ ನೆತ್ತಿಗೆ ಹಚ್ಚಿದ್ದು ಆತನೇ ತಾನೆ ?” ಎಂದು ಶ್ರೀಕೃಷ್ಣನು ಕೇಳಬಹುದೆಂದು ಊಹಿಸಿಕೊಂಡು, ಅರ್ಜುನನು ತಾನೇ ಸಮಾಧಾನವನ್ನು ಹೇಳುತ್ತಿದ್ದಾನೆ –