ಕವನ ಸಂಗ್ರಹ : ಸ್ತ್ರೀ ಬುದ್ದಳಾಗುವುದು ಬೇಡ

Ashalatha
Spread the love

“ಸ್ತ್ರೀ ಬುದ್ಧಳಾಗುವುದು ಬೇಡ ”

ಸ್ತ್ರೀ ಬುದ್ಧಳಾಗುವುದು ಬೇಡ
ಅವಳ ಸ್ತ್ರೀತನವ ಶೋಷಣೆಯ
ದಳ್ಳುರಿಯಲ್ಲಿ ದಹಿಸದಿರಿ
ಅವಳ ಸುಕೋಮಲತ್ವವ, ಮೃದು ಮಾಧುರ್ಯತನವ ಸಮಾಜದ ದಾವಗ್ನಿಗೆ ಆಹುತಿ ಕೊಡದಿರಿ ||1||

ಸ್ತ್ರೀ ಬುದ್ಧಳಾಗುವುದು ಬೇಡ
ಮಕ್ಕಳಿಗೆ ಮಾತೆಯಾಗಿ ಅಕ್ಕರೆಯ ಸತಿಯಾಗಿ, ಸಮಾಜವನ್ನು ತಿದ್ದಿ, ತೀಡುವ ಗುರುವಾಗಲು ಬಿಡಿ
ಮಾನಿನಿ ಸರ್ವ ಸಂಗ ಪರಿ ತ್ಯಾಗಿಯಾಗಿ ಹೊರಟರೆ ಜಾರಿಣಿ ಎಂಬ ಹಣೆ ಪಟ್ಟ ಕಟ್ಟುವರು
ಗಂಡು ಬೀರಿ, ಪುರುಷ ದ್ವೇಷಿ ಎಂಬ ಬಿರುದುಬಾವಲಿಗಳ ನೀಡುವರು ||2||

ಸ್ತ್ರೀ ಬುದ್ಧಳಾಗುವುದು ಬೇಡ
ನಮ್ಮ ದೇಶ ಸ್ವತಂತ್ರ ಗೊಂಡು ಅರ್ಧ ಶತಮಾನಕ್ಕೂ ಅಧಿಕವಾದರೂ ಅವಳು
ಮಾತ್ರ ಅತಂತ್ರ ಸ್ಥಿತಿಯಲ್ಲಿ ಬದುಕ ನಡೆಸಿರುವಳು
ತನ್ನ ಇಡೀ ಬದುಕನ್ನು ಸಂಸಾರಕ್ಕಾಗಿ ಗಂಧದ ಕೊರಡಿನಂತೆ ತೇಯ್ದರು
ಮೂಕ ವೇದನೆಯ ಅನುಭವಿಸುತ್ತಿರುವಳು ||3||

ಸ್ತ್ರೀ ಬುದ್ದಳಾಗುವುದು ಬೇಡ
ಅವಳನ್ನು ಸಂಕೋಲೆಗಳ ಸರಪಳಿಯಿಂದ ಬಂಧಿಸದೆ,
ಹೆಣ್ಣಿಗೊಂದು ನೀತಿ, ಗಂಡಿಗೊಂದು ನೀತಿಯ ಸೃಷ್ಟಿಸದೆ
ಸ್ತ್ರೀ ಪುರುಷರೀರ್ವರೂ ಈ ಬುವಿಯಲ್ಲಿ ಸಮಾನವಾಗಿ ಬದುಕುವ ಅವಕಾಶವ ಕಲ್ಪಿಸಿ ಮೂರುದಿನದ ಬದುಕೆಂಬ ಸಂತೆಯಲ್ಲಿ ನೆಮ್ಮದಿಯಿಂದ, ನಿಶ್ಚಿoತೆ ಯಿಂದ ಬದುಕಲು ಬಿಡಿ ||4 ||

ರಚನೆ : ಎಂ. ಎಸ್. ಆಶಾಲತಾ
ಶಿವೆ ಸುತೆ (ಚನ್ನಪಟ್ಟಣ )
ಶಾಖಾ ವ್ಯವಸ್ಥಾಪಕರು
ಎಂ. ಡಿ. ಸಿ. ಸಿ. ಬ್ಯಾಂಕ್
ಕೆ. ಹೊನ್ನಲಗೆರೆ (ಮದ್ದೂರು )