ಶ್ರೀ ಮದ್ಭಗವದ್ಗೀತಾ ಲಘುವ್ಯಾಖ್ಯಾನ – 2
ಈ ಐದು ಶ್ಲೋಕಗಳನ್ನೂ ಒಟ್ಟುಗೂಡಿಸಿ ಅತೀತವಾದ ಗೀತಾಸಾರವು ನಮಗೆ ಸಾಕ್ಷಾತ್ಕರಿಸುವುದು. ಆದ್ದರಿಂದ ಪಂಚಶ್ಲೋಕೀ ಭಗವದ್ಗೀತೆಯನ್ನು ನಾವೀಗ ಪರಿಶೀಲಿಸೋಣ.
ಪಂಚಶ್ಲೋಕೀ ಭಗವದ್ಗೀತೆ
1 . ತಸ್ಮಾದಸಕ್ತ ಸ್ಸತತಂ ಕಾರ್ಯಂ ಕರ್ಮ ಸಮಾಚರ |
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ಪೋತಿ ಪೂರುಷಃ|| (3-19)
2 . ಮತ್ಕರ್ಮಕೃನ್ಮತ್ಪರಮಃ ಮದ್ಭಕ್ತ ಸ್ವಂಗವರ್ಜಿತಃ | ನಿರ್ವೈರಸ್ಸರ್ವಭೂತೇಷು ಯಸ್ಸ ಮಾಮೇತಿ ಪಾಂಡವ!!! (11-55 )
3 . ಮನ್ಮನಾ ಭವ ಮದ್ಭಕ್ತಃ ಮದ್ಯಾಜೀ ಮಾಂ ನಮಸ್ಕುರು । ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ|| (18-62)
4 . ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯಃ ಮೋಕ್ಷಯಿಷ್ಯಾಮಿ ಮಾ ಶುಚಃ|| (18-66 )
5 . ಯತ್ರ ಯೋಗೇಶ್ವರಃ ಕೃಷ್ಣಃ ಯತ್ರ ಪಾರ್ಥೋ ಧನುರ್ಧರಃ| ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ|| (18 – 78)
ಗೀತೆಯು ಹೇಳುವ ಸಾರವೇನು ?
ಈ ಐದು ಶ್ಲೋಕಗಳನ್ನೂ ಸೇರಿಸಿದರೆ ಗೀತಾಸಾರವು ಹೇಗೆ ಆಗುತ್ತದೋ, ನಾವು ಈಗ ಸಂಗ್ರಹವಾಗಿ ಪರಿಶೀಲನೆ ಮಾಡೋಣ.
ತಮೋ-ರಜ-ಸ್ಸಗುಣ ಸಂಪನ್ನರಾದ ಜೀವಿಗಳ ಜೀವನಶೈಲಿಯನ್ನು ಪಾತ್ರೀಕರಿಸುವುದಕ್ಕೋಸ್ಕರವೇ ಭಗವದ್ಗೀತೆಯ ಪ್ರಥಮಾಧ್ಯಾಯವು ರೂಪುಗೊಂಡಿದೆ. ದ್ವಿತೀಯಾಧ್ಯಾಯದಲ್ಲಿ ಭಗವಂತನು ಪ್ರಚಂಡ ವೇಗದಿಂದ ಸರ್ವಸಿದ್ಧಾಂತ ಸಾರ ಪ್ರತಿಪಾದನೆಯನ್ನು ಮಾಡಿದ್ದಾನೆ. ಆ ಪ್ರತಿಪಾದನೆಯಲ್ಲಿ ಅರ್ಜುನನಿಗೆ ಎರಡೇ ಎರಡು ವಿಷಯಗಳು ಅರ್ಥವಾದವು –
1. ಸಾಂಖ್ಯಯೋಗಮಾರ್ಗವು, ಕರ್ಮಯೋಗಮಾರ್ಗವು ಎಂಬ ಎರಡು ಮಾರ್ಗಗಳಿವೆ.
2. ಅವುಗಳಲ್ಲಿ ಅರ್ಜುನನು ಕರ್ಮಯೋಗ ಮಾರ್ಗಕ್ಕೆ ಮಾತ್ರವೇ ಅರ್ಹನು – ಎಂದು.
ಅದಕ್ಕೆ ಮೀರಿದ ಸ್ಪಷ್ಟತೆ ಇಲ್ಲದಿರುವುದರಿಂದ ಅರ್ಜುನನು ತನ್ನ ಸಂದೇಹಕಲ್ಲೋಲವನ್ನು ಮತ್ತೆ ಮತ್ತೊಂದು ಸಾರಿ ಪರಮಾತ್ಮನ ಮುಂದೆ ಹರಡಿ ತೋರಿಸಿದನು. ಅದಕ್ಕಾಗಿಯೇ ಭಗವಂತನು ಮತ್ತೊಂದು ಸಲ ತನ್ನ ಉಪದೇಶವನ್ನು ಪ್ರಾರಂಭಿಸಿ, “ಆತ್ಮರತಿ, ಆತ್ಮತೃಪ್ತಿ, ಆತ್ಮ ಸಂತುಷ್ಟಿ” ಮೊದಲಾದ ಲಕ್ಷಣಗಳು ಸಹಜಸಿದ್ದವಾಗಿ ಇರುವವರಿಗೆ ಮಾತ್ರವೇ ಸಾಂಖ್ಯಯೋಗಮಾರ್ಗವು ಉಪಕರಿಸುವುದೆಂದೂ, ಉಳಿದವರಿಗೆ ಕರ್ಯಯೋಗಮಾರ್ಗವೇ ಶರಣ್ಯವೆಂದೂ, ಸಿದ್ಧಾಂತಸಾರವಾಗಿ ಹೀಗೆ ಉಪದೇಶಿಸಿದನು.
ತಸ್ಮಾದಸಕ್ತ ಸ್ಸತತಂ ಕಾರ್ಯಂ ಕರ್ಮ ಸಮಾಚರ।
ಅಸಕ್ಕೋ ಹ್ಯಾಚರನ್ ಕರ್ಮ ಪರಮಾಪ್ಪೋತಿ ಪೂರುಷಃ॥
(.. 3-19)
(ಅರ್ಜುನನೆ! ಆತ್ಮರತಿ ಮೊದಲಾದ ಲಕ್ಷಣಗಳು ಇರುವವನು ಮಾತ್ರವೇ ಜ್ಞಾನಯೋಗಿಯಾಗಬಲ್ಲನೆಂದೂ, ಅಂತಹವನಿಗೆ ಮಾತ್ರವೇ ಕರ್ಮಗಳಿಂದ ಪ್ರಯೋಜನವಿಲ್ಲವೆಂದೂ, ನಿನಗೆ ಸ್ಪಷ್ಟಪಡಿಸಿದ್ದೇನೆ. ಅಂತಹ ಜ್ಞಾನಯೋಗಿಯ ಲಕ್ಷಣಗಳು ನಿನ್ನಲ್ಲಿಲ್ಲ. ಆದ್ದರಿಂದ ನೀನು ಅವಿಚ್ಛಿನ್ನವಾಗಿ ಕರ್ಮ ಮಾಡುತ್ತಲೇ ಇರಬೇಕು. ಆದರೆ, ನೀನು ಎರಡು ಜಾಗ್ರತೆಗಳನ್ನು ತೆಗೆದುಕೊಳ್ಳಬೇಕು.
1. ವಿಧಿವಿಹಿತಗಳಾದ ಕರ್ಮಗಳನ್ನು ಮಾತ್ರವೇ ಮಾಡಬೇಕು.
2. ಅವುಗಳನ್ನು ಕೂಡಾ ಫಲಾಸಕ್ತಿ ರಹಿತವಾಗಿಯೂ, ಕರ್ತೃತ್ವಭಾವನಾರಹಿತವಾಗಿಯೂ ಮಾಡಬೇಕು. ( ಹಾಗೆ ಮಾಡಿದರೆ, ಯಾವ ಮನುಷ್ಯನಿಗಾದರೂ ಸರಿಯೇ, ಕ್ರಮವಾಗಿ ಚಿತ್ತಶುದ್ಧಿ ಲಭಿಸಿ ಅದರಿಂದ ಮೋಕ್ಷವು ಲಭಿಸಿಯೇ ತೀರುತ್ತದೆ.) ಇದರಲ್ಲಿ ನಾವು ಗಮನಿಸಬೇಕಾದ ವಿಷಯಗಳು ಮೂರು –
1. ಕರ್ತವ್ಯವಾದ ಕೆಲಸಗಳನ್ನು ಮಾತ್ರವೇ ಮಾಡಬೇಕು.
2. ಹಾಗೆ ಮಾಡುವಾಗ ಕರ್ತೃತ್ವಾಹಂಕಾರವಾಗಲೀ, ಫಲಾಕಾಂಕ್ಷೆಯಾಗಲೀ, ಇರಬಾರದು.
3. ಹೀಗೆ ಮಾಡಿದರೆ ಪರಿಪೂರ್ಣಮೋಕ್ಷವು ಕ್ರಮಕ್ರಮವಾಗಿ ತನ್ನಷ್ಟಕ್ಕೆ ತಾನೇ ಉಂಟಾಗುತ್ತದೆ – ಎಂದು.
ಈ ಉಪಾಯವು ಚೆನ್ನಾಗಿ ಏನೋ ಇರುವುದು. ಆದರೆ ಕೆಲಸಗಳನ್ನು ಮಾಡುವಾಗ ಕರ್ತೃತ್ವಬುದ್ದಿ ಇಲ್ಲದೇ, ಇರುವುದು ಹೇಗೆ ? ಫಲಾಕಾಂಕ್ಷೆ ಇಲ್ಲದೇ ಹೋದರೆ, ಕರ್ಮಗಳ ಮೇಲೆ ಆಸಕ್ತಿ ಏಕೆ ಇರುತ್ತದೆ? ಆದ್ದರಿಂದ ಸಾಮಾನ್ಯ ಮಾನವನಿಗೆ ಈ ವಿಧವಾದ ಷರತ್ತುಗಳಲ್ಲಿ ಕರ್ತವ್ಯ ನಿರ್ವಹಣೆಯನ್ನು ಮಾಡುವುದು ಬಹಳ ಕಷ್ಟ.
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ