ಗೀತೆಯು ಹೇಳುವ ಸಾರವೇನು ?
ಅನಾದಿಕಾಲದಿಂದಲೂ ಪ್ರಚಲಿತ ಮಾನವ ಮೇಧಾವಿಗಳ, ಆಧ್ಯಾತ್ಮಿಕಾನುಭವಗಳ ರಿಕಾರ್ಡುಗಳೇ ಉಪನಿಷತ್ತುಗಳು. ಆದ್ದರಿಂದಲೇ ಅವು ವೇದಗಳಿಗೆ ಸಾರಗಳೆಂದೂ, ವೇದಗಳ ಶಿರಸ್ಸುಗಳೆಂದೂ ಕೀರ್ತಿಯನ್ನು ಪಡೆದುಕೊಂಡಿವೆ. ಆ ಉಪನಿಷತ್ತುಗಳಿಗೆ ಮೂಲಸ್ತಂಭಗಳಾದ ತಾತ್ತ್ವಿಕಸೂತ್ರಗಳ ಪುನರ್ನಿರ್ಮಾಣಕ್ಕೋಸ್ಕರವೇ ಭಗವದ್ಗೀತಾ ಆವಿರ್ಭವಿಸಿರುವುದು.
ಕಲಿಯುಗವು ಸಮೀಪಿಸುತ್ತಿರುವುದರಿಂದ, ಮುಂಬರುವ ಕಲಿಜೀವಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ತತ್ತ್ವಸೂತ್ರಗಳನ್ನು ಪುನರ್ನಿರ್ಮಿಸಬೇಕಾದ ಅವಶ್ಯಕತೆ ಬಂದಿದೆಯಂದು, ಇತ್ತ ವೇದವ್ಯಾಸ ಮಹರ್ಷಿಯೂ ಗುರುತಿಸಿದನು. ಅತ್ತ ಶ್ರೀಕೃಷ್ಣ ಭಗವಂತನು ಕೂಡಾ ಗುರುತಿಸಿದನು.
ಆದರೆ, ಈ ಕೆಲಸವು ತನಗೆ ಮೀರಿದ್ದಾದ್ದರಿಂದ ವೇದವ್ಯಾಸ ಮಹರ್ಷಿಯು ಬ್ರಹ್ಮಸೂತ್ರಗಳೆಂಬ ಹೆಸರಿನಿಂದ ಉಪನಿಷತ್ತುಗಳ ಮೇಲೆ ವ್ಯಾಖ್ಯಾನವನ್ನು ಮಾಡಿ ಸುಮ್ಮನಾಗಿಬಿಟ್ಟನು.
ಜಗದ್ಗುರುವಾದ ಶ್ರೀಕೃಷ್ಣ ಭಗವಂತನು ಒಂದಾನೊಂದು ಮಾರ್ಗಶಿರ ಶುದ್ಧ ಏಕಾದಶಿಯಂದು ಮಹಾಭಾರತ ಯುದ್ಧಭೂಮಿಯಲ್ಲಿ, ಅರ್ಜುನನನ್ನು ನಿಮಿತ್ತವಾಗಿ ಇಟ್ಟುಕೊಂಡು ಮುಂಬರುವ ಕಲಿಯುಗಕ್ಕೆ ಲೌಕಿಕ, ಪಾರಲೌಕಿಕ, ಪಾರಮಾರ್ಥಿಕ ದಿಶಾನಿರ್ದೇಶಕ್ಕಾಗಿ ಉಪನಿಷತ್ಸೂತ್ರ ಪುನರ್ನಿರ್ಮಾಣವನ್ನು ಸ್ವಯಂ ತಾನೇ ಮಾಡಿದನು.
ಆ ಕಾಲಕ್ಕೆ ಕಲಿಯುಗವು ಇನ್ನೂ ಪ್ರವೇಶಿಸದಿದ್ದರೂ ಅರ್ಜುನನನ್ನು ತಾತ್ಕಾಲಿಕವಾಗಿ ಶೋಕಮೋಹಗಳು ಆವೇಶಿಸಿದವು. ಅಂದರೆ ರಜಸ್ತಮೋಗುಣಗಳು ಆಕ್ರಮಿಸಿದವು. ಅದರಿಂದ ಆತನ ಸಹಜಗುಣವಾದ ಅರ್ಜುನತ್ವವು (ಸತ್ಯ ಗುಣವು) ತಾತ್ಕಾಲಿಕವಾಗಿ ಮರೆಯಾಯಿತು. ಅದಕ್ಕಾಗಿಯೇ ಆತನು ಕಲಿ ಜೀವಿಗಳಿಗೆ ಪ್ರತಿನಿಧಿಯಾಗಿ ನಿಂತನು.
ಗೀತೆಯು ಹೇಳುವ ಸಾರವೇನು ?
ಈ ಕಾರಣದಿಂದಲೇ ಎರಡನೆಯ ಅಧ್ಯಾಯದಲ್ಲಿ ಭಗವಂತನು ಮಾಡಿದ ಸೂತ್ರ ಪ್ರಾಯೋಪದೇಶವು ಆ ಮೇಧಾವಿಯ ಮಸ್ತಿಷ್ಕವನ್ನು ಮೀರಿ ಹರಿದುಬಿಟ್ಟಿತು.
ಅದಕ್ಕಾಗಿಯೇ ಭಗವಂತನು ತನ್ನ ಸೂತ್ರಗಳಿಗೆ ತಾನೇ ವ್ಯಾಖ್ಯಾನ ಮಾಡಿಕೊಳ್ಳುವ ವೇದಪದ್ಧತಿಯನ್ನೇ ಅನುಸರಿಸುತ್ತಾ, ಮತ್ತೊಂದು 16 ಅಧ್ಯಾಯಗಳಷ್ಟು ಸ್ವೀಯಸೂತ್ರಗಳಿಗೆ ಸ್ವೀಯ ವ್ಯಾಖ್ಯಾನವನ್ನು ಮಾಡಿದನು. ಅವೆಲ್ಲವನ್ನೂ ಒಗ್ಗೂಡಿಸಿದರೆ, ಇಂದು ನಮಗೆ ಲಭಿಸುತ್ತಿರುವ 700 ಶ್ಲೋಕಗಳ ಭಗವದ್ಗೀತಾ ಗ್ರಂಥವು ತಯಾರಾಗುತ್ತಿದೆ.
ಕಲಿ ಮಾನವರು ಮೇಧಾ ಪ್ರಧಾನರಾದ್ದರಿಂದ ಸ್ಪಷ್ಟವಾಗಿರುವ ವಾಕ್ಯಗಳ ಮೇಲೆ ಕೂಡಾ ಹೊಸ ಪ್ರಶ್ನೆಗಳನ್ನು ಎಬ್ಬಿಸಿ, ಹೊಸ ಹೊಸ ವ್ಯಾಖ್ಯಾನಗಳಿಗೆ, ವಿವಾದಗಳಿಗೆ, ಅವಕಾಶವನ್ನು ಕಲ್ಪಿಸಿದರು. “ಭಗವದ್ಗೀತೆಯ ನಿಜವಾದ ತಾತ್ಪರ್ಯವೇನು ?” ಎನ್ನುತ್ತಾ ಬಗೆಬಗೆಯಾದ ಚರ್ಚೆಗಳನ್ನು ಹೇರಳವಾಗಿ ಮಾಡಿದರು.
ಅಂತಹ ಚರ್ಚೆಗಳ ಗೊಂದಲವನ್ನು ಪ್ರಶಾಂತಪಡಿಸಿ, ವಿಷಯವಿವರಣೆ ಮಾಡಲು ಪೂರ್ವಾಚಾರ್ಯರು ಬಹಳಷ್ಟುಮಂದಿ ಕೃಷಿ ಮಾಡಿದ್ದಾರೆ. ಆ ಕೃಷಿಗಳ ಸಾರಾಂಶವನ್ನು ಇಂದಿಗೆ ತಕ್ಕ ಶೈಲಿಯಲ್ಲಿ ಮಾನವಜಾತಿಯ ಮುಂದೆ ವಿಸ್ತರಿಸಿ ಪ್ರಸ್ತರಿಸಲು ಈ ವ್ಯಾಖ್ಯಾನವನ್ನು ಭಕ್ತರಮುಂದೆ ಇಡಲಾಗುತ್ತಿದೆ.
ಭಗವದ್ಗೀತೆಯ ಮುನ್ನ ಶ್ರೀಕೃಷ್ಣ ಭಗವಂತನು ತನ್ನ ಉಪದೇಶಗಳನ್ನು ಹೆಚ್ಚಾಗಿ ತನ್ನ ಮುರಳೀ ಗಾನದ ಮುಖಾಂತರವೇ ನಿರ್ವಹಿಸಿದನು. ಅಂದರೆ, ಆತನು ಮುರಳೀಗಾನ ಮಾಡಿದರೆ ಸಾಕು, ಬೇರೆ ವಿವರಣೆಗಳಿಂದ ಕೆಲಸವಿಲ್ಲದೆ ಶೋತೃಗಳಾದ ಸಾಧಕರ ಸಂದೇಹಗಳು ತಣ್ಣಗಾಗಿ, ತತ್ತ್ವವು ಅರಳುತ್ತಿತ್ತು. ಮುರಳೀ ಶಬ್ದ ತರಂಗಗಳನ್ನು ಎಲ್ಲಾ ಕಾಲ ಇರುವಂತೆ ಮಾಡುವುದು ಸಾಧ್ಯವಾಗದ ಕಾರಣ, ಆ ಮುರಳೀಧರನು ಶಬ್ದಮುರಳಿಯನ್ನು ಸ್ವೀಕರಿಸಿ ಭಗವದ್ಗೀತಾ ಗಾನಮಾಡಿದನು.
ಸಂಗೀತಗಾನದಲ್ಲಿ ‘ಸ್ವರಪ್ರಸ್ತಾರಗಳು’ ಎಂದಿರುತ್ತವೆ. ಇವುಗಳಲ್ಲಿ ಪ್ರಧಾನಕೃತಿಗೆ ಮೂಲಭೂತವಾದ ರಾಗವನ್ನು ಆಧಾರವಾಗಿ ಮಾಡಿಕೊಂಡು, ಸ್ವರಾಕ್ಷರಗಳ ಪ್ರಸ್ತಾರಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಹಾಗಾಗಿಯೇ, ಇದಕ್ಕೆ ಸ್ವರಪ್ರಸ್ತಾರವು ಎಂದು ಹೆಸರು. ಹಾಗೂ ಈ ಭಗವದ್ಗೀತೆಯಲ್ಲಿನ ತತ್ತ್ವಸೂತ್ರಗಳ ವಿಶೇಷವನ್ನು ಈ ರೀತಿಯಲ್ಲೇ ಹೃದಯಾಹ್ಲಾದಕರವಾಗಿ ವಿಸ್ತರಿಸಿಕೊಳ್ಳುತ್ತಾ, ಪ್ರಸ್ತರಿಸಿಕೊಳ್ಳುತ್ತಾ ಹೋಗಿದ್ದೇವೆ. ಆದ್ದರಿಂದ ಈ ವ್ಯಾಖ್ಯೆಗೆ “ಗೀತಾಸ್ವರಪ್ರಸ್ತಾರವು” ಎಂಬ ನಾಮಧೇಯವು ಸಾರ್ಥಕವಾಗುತ್ತಿದೆ. ಈ ವಿಸ್ತರಣೆಯು ಎಲ್ಲಾ ಮೇಧಾವಿಗಳಿಗೋಸ್ಕರ ಆಗಿದೆ. ಸಾಧಕರಿಗೆ ಬೇಕಾದ್ದು ಮೇಧಾಪರ ಚರ್ಚೆಯಲ್ಲ. ಮೇಧಾವಿಗಳಿಗೆ ಕೂಡ ಕೊನೆಗೆ ಉಳಿಯುವುದು ಚರ್ಚೆಯಲ್ಲ. ಕರ್ತವ್ಯ ಸಾರಾಂಶವೇ ಉಳಿದು ನಿಲ್ಲುತ್ತವೆ. ಅದಕ್ಕಾಗಿಯೇ, ಶ್ರೀಕೃಷ್ಣ ಭಗವಂತನು ಭಗವದ್ಗೀತೆಯಲ್ಲಿ ಕನಿಷ್ಠ ನಾಲ್ಕು ಕಡೆ ತನ್ನ ಚರ್ಚಾಸಾರಾಂಶವನ್ನು ತಾನೇ ಸಂಗ್ರಹೀಕರಿಸಿದ್ದಾನೆ. ಭಗವದ್ಗೀತೆಯ ಪ್ರಥಮಾಚಾರ್ಯನಾದ ಸಂಜಯ ಸದ್ಗುರುದೇವನು ಈ ನಾಲ್ಕು ಸೂತ್ರಗಳ ಸಾರವನ್ನು ತನ್ನದೇ ಆದ ಶೈಲಿಯಲ್ಲಿ ಹಾಗೂ ಪುನರುದ್ಘಾಟನೆ ಮಾಡಿದ್ದಾನೆ.
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ