ಗೀತೆ – 23 : ಶ್ರೀ ಕೃಷ್ಣನು ಈ ನಿರ್ವೀರ್ಯತ್ವವು ತಕ್ಕದ್ದಲ್ಲ ಎನ್ನುತ್ತಾನೆ

Gita
Spread the love

ಶ್ರೀ ಮದ್ಭಗವದ್ಗೀತಾ 23

ಎರಡನೆಯ ಅಧ್ಯಾಯ

2.ಸಾಂಖ್ಯಯೋಗ

ಸಂಜಯ ಉವಾಚ:

1.ತಂ ತಥಾ ಕೃಪಯಾಽಽವಿಷ್ಟಂ ಅಶ್ರುಪೂರ್ಣಾ ಕುಲೇಕ್ಷಣಮ್ |
ವಿಷೀದಂತಮಿದಂ ವಾಕ್ಯಂ ಉವಾಚ ಮಧುಸೂದನಃ||

ಸಂಜಯಃ = ಸಂಜಯನು, ಉವಾಚ = ಹೇಳಿದನು. ತಥಾ = ಹಾಗೆ, ಕೃಪಯಾ = ಕನಿಕರದಿಂದ, ಆವಿಷ್ಟಂ = ಆವಹಿಸಲ್ಪಟ್ಟವನೂ, ಅಶ್ರುಪೂರ್ಣಾಕುಲೇಕ್ಷಣಂ = ಕಣ್ಣೀರು ತುಂಬಿ ವ್ಯಾಕುಲವಾದ ಕಣ್ಣುಗಳುಳ್ಳವನೂ, ವಿಷೀದಂತಂ = ದುಃಖಿಸುತ್ತಿರುವವನೂ ಆದ, ತಂ = ಆ ಅರ್ಜುನನ್ನು ಕುರಿತು, ಮಧುಸೂದನಃ = ಶ್ರೀಕೃಷ್ಣನು, ಇದಂ-ವಾಕ್ಯಂ = ಈ ಮಾತನ್ನು, ಉವಾಚ = ನುಡಿದನು.

ಸಂಜಯನು ಹೇಳಿದನು:-

ಬಂಧುಗಳ ಮೇಲಿನ ಕನಿಕರವೆಂಬ ಆವೇಶದಲ್ಲಿ ಬಿದ್ದು, ಕಣ್ಣೀರು ಸುರಿಸುತ್ತಾ, ದುಃಖಿಸುತ್ತಾ ಇದ್ದ ಅರ್ಜುನನ್ನು ಕುರಿತು ಶ್ರೀಕೃಷ್ಣನು ಇಂತೆಂದನು.

ಶ್ರೀ ಭಗವಾನುವಾಚ:

2.ಕುತಸ್ಮಾ ಕಲ್ಮಲ ಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಂ ಅಕೀರ್ತಿಕರಮರ್ಜುನ!!!

ಶ್ರೀಭಗವಾನ್ ಶೋಭಾಯುಕ್ತನಾದ (ಪೂಜ್ಯನಾದ) ಭಗವಂತನು, = ಉವಾಚ = ಹೇಳಿದನು. ಅರ್ಜುನ = ಎಲೈ ಅರ್ಜುನನೇ !, ಅನಾರ್ಯಜುಷ್ಟಂ = ಶಾಸ್ತ್ರಜ್ಞಾನವಿಲ್ಲದವರಿಂದ ಹೊಂದಲ್ಪಟ್ಟಿದ್ದೂ, ಅಸ್ವರ್ಗ್ಯಂ = ಸ್ವರ್ಗಕ್ಕೆ (ಶಾಶ್ವತ ಸುಖಕ್ಕೆ ) ಉಪಕರಿಸಲ್ಪಡದ್ದೂ, ಅಕೀರ್ತಿಕರಂ = ಕೆಟ್ಟ ಹೆಸರನ್ನು ಉಂಟುಮಾಡುವುದೂ, ಆದ, ಇದಂ = ಈ, ಕಶ್ಮಲಂ = ಮೋಹವು (ಬುದ್ಧಿಮಾಲಿನ್ಯವು), ವಿಷಮೇ = ಸಂಕಟ ಸಂದರ್ಭದಲ್ಲಿ, ಕುತಃ = ಎಲ್ಲಿಂದ (ಯಾವ ಕಾರಣದಿಂದ), ತ್ವಾ = ನಿನ್ನನ್ನು, ಸಮುಪಸ್ಥಿತಂ = ಸೇರಿತು?

ಶ್ರೀ ಭಗವಂತನಿಂತೆಂದನು:-
ಎಲೈ ಅರ್ಜುನನೇ! ಇಂಥ ಈ ವಿಷಮಕಾಲದಲ್ಲಿ ನಿನಗೆ ಈ ತರಹದ ಮನಸ್ಸಿನ ಮಾಲಿನ್ಯವು ಎಲ್ಲಿಂದ ಬಂದಿತು? ಯಾಕೆ ಬಂದಿತು? ನಾನು ಏಕೆ ಹೀಗೆ ಕೇಳುತ್ತಿದ್ದೇನೆಂದರೆ, ಇಂತಹ ಮಾನಸಿಕ ಮಾಲಿನ್ಯವು ಶಾಸ್ತ್ರ ಜ್ಞಾನವಿಲ್ಲದವರಿಗೆ ಮಾತ್ರವೇ ಹಿಡಿದುಕೊಳ್ಳುತ್ತದೆ. ಅಷ್ಟುಮಾತ್ರವಲ್ಲದೆ, ನೀನು ಹೇಳಿದ ಶ್ರೇಯಸ್ಸಿಗೆ (ಮೋಕ್ಷಕ್ಕೆ) ಇದು ಅನುಕೂಲವಾದದ್ದಲ್ಲ. ನಿನಗೆ ಕೀರ್ತಿಕರವೂ ಅಲ್ಲ.

3.ಕೈಬ್ಯಂ ಮಾ ಸ್ಮ ಗಮಃ ಪಾರ್ಥ! ನೈತಮ್ಮಯ್ಯುಪಪದ್ಯತೇ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ||

ಪಾರ್ಥ = ಎಲೈ ಅರ್ಜುನನೇ!, ಕ್ಲೈಬ್ಯಂ= ನಪುಂಸಕತ್ವವನ್ನು (ಅಧೈರ್ಯವನ್ನು) ಮಾ-ಸ್ಮ-ಗಮಃ = ಹೊಂದಬೇಡ, ತ್ವಯಿ = ನಿನಗೆ, ಏತತ್ ಈ ಹೇಡಿತನವು, ನ-ಉಪಪದ್ಯತೇ = ತಕ್ಕುದಲ್ಲ. ಪರಂತಪ = ಶತ್ರುಗಳನ್ನು ತಪಿಸುವ ಪರಾಕ್ರಮವುಳ್ಳವನೇ!, ಕ್ಷುದ್ರಂ = ನೀಚವಾದ, ಹೃದಯದೌರ್ಬಲ್ಯಂ = ಮಾನಸಿಕ ದೌರ್ಬಲ್ಯವನ್ನು, ತ್ವಕ್ತ್ವಾ = ಬಿಟ್ಟು, ಉತ್ತಿಷ್ಠ = ಎದ್ದು ನಿಲ್ಲು.

ಎಲೈ ಅರ್ಜುನನೇ! ಈ ನಿರ್ವೀರ್ಯತ್ವವು ನಿನಗೆ ತಕ್ಕದ್ದಲ್ಲ. ಎಲೈ ಶತ್ರು ಸಂಹಾರಕನೇ! ನಿನಗೆ ಈಗ ಉಂಟಾಗಿರುವುದು ಕರುಣೆಯಲ್ಲ. ಇದು ನೀಚವಾದ ಹೃದಯ ದೌರ್ಬಲ್ಯ. ಇದನ್ನು ಒದರಿಬಿಡು. ಏಳು. ಎದ್ದು ನಿಲ್ಲು. (ಪೂರ್ವಶ್ಲೋಕದಲ್ಲಿ ಭಗವಂತನು ಅರ್ಜುನನ ಆಲೋಚನೆಗಳ ಬಗ್ಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದಮೇಲೆ, ಈ ಶ್ಲೋಕದಲ್ಲಿ ಅರ್ಜುನನನ್ನು ತೀವ್ರವಾಗಿ ತೆಗಳುತ್ತಿದ್ದಾನೆ.)

ಅವತಾರಿಕೆ :
ಭಗವಂತನಿಂದ ಪ್ರಶಂಸೆಯು ಬರದೆ, ತೀವ್ರವಾದ ಬೈಗುಳದ ಮಳೆಯು ಮೇಲೆ ಬೀಳುತ್ತಿದ್ದಂತೆಯೇ, ಅರ್ಜುನನು ಸ್ವಲ್ಪ ಸಂಶಯಿಸಿದನು. ಆದರೆ, ಆತನಲ್ಲಿ ಪ್ರವೇಶಿಸಿದ ತಮೋಗುಣವು ತನ್ನ ಹಿಡಿತವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವ ಸ್ವಭಾವವುಳ್ಳದ್ದಲ್ಲ. ಆದ್ದರಿಂದ ಅರ್ಜುನನು ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸ್ವಲ್ಪ ಪ್ರಯತ್ನಿಸುತ್ತಾ, ಕೊನೆಗೆ ತನ್ನ ಮನಸ್ಸಿನಲ್ಲಿರುವ ಧರ್ಮಸಂದೇಹಗಳ ಕಲ್ಲೋಲವನ್ನು ಹೊರಹಾಕಲಿದ್ದಾನೆ. ಮೊದಲ ಎರಡು ಶ್ಲೋಕಗಳಲ್ಲಿ ಆತ್ಮಸಮರ್ಥನೆಗಾಗಿ ಪ್ರಯತ್ನಿಸಿ, ಆನಂತರದ ಎರಡು ಶ್ಲೋಕಗಳಲ್ಲಿ ಶಿಷ್ಯನಾಗಿ ಗುರುಶರಣಾಗತಿಯನ್ನು ಮಾಡುತ್ತಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ