ವಿಶೇಷಚೇತನರ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ.

Spread the love

*ಹೂಟಗಳ್ಳಿ ಶಾಲೆಯಲ್ಲಿ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟನೆ*

*ಸಾಮಾನ್ಯ ಮಕ್ಕಳಂತೆ ವಿಶೇಷಚೇತನ ಮಕ್ಕಳನ್ನು ಕಾಣಬೇಕಿದೆ*:

– *ಜಿ.ಟಿ.ದೇವೇಗೌಡ*

ಸಾಮಾನ್ಯ ಮಕ್ಕಳಂತೆ ವಿಶೇಷಚೇತನ ಮಕ್ಕಳನ್ನು ಕಾಣಬೇಕು. ಅಂಗವೈಕಲ್ಯತೆಯಿಂದ ಬಳಲುವ ಮಕ್ಕಳನ್ನು ತಾತ್ಸಾರ ಮನೋಭಾವದಿಂದ ನೋಡದೆ ಸರಿಸಮಾನವಾಗಿ ಕಂಡು ಅವಕಾಶ ಒದಗಿಸಿದರೆ ಖಂಡಿತ ಎಲ್ಲರಂತೆ ಸಮಾಜದಲ್ಲಿ ಬದುಕಬಲ್ಲರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಹೂಟಗಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಹಾಗೂ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆರು ವರ್ಷದ ಮೇಲ್ಪಟ್ಟ ೧೫ ವರ್ಷದೊಳಗಿನ ಅಂಗವಿಕಲತೆಯುಳ್ಳ ಮಕ್ಕಳಿಗೆ ವೈದ್ಯಕೀತ ತಪಾಸಣಾ ಶಿಬಿರವನ್ನು ಅಲೀಂ ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ. ಕಣ್ಣು,ಕಿವಿ, ಕಾಲು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳನ್ನು ವೈದ್ಯರು ತಪಾಸಣೆ ನಡೆಸಲಿದ್ದಾರೆ. ಹೂಟಗಳ್ಳಿ ಶಾಲೆಯಲ್ಲಿ ಆರಂಭವಾಗಿರುವ ಈ ಶಿಬಿರವನ್ನು ಡಿಸೆಂಬರ್ ೩೧ರವರೆಗೆ ನಡೆಸಲು ತೀರ್ಮಾನ ಮಾಡಿದ್ದಾರೆ.ಶಿಕ್ಷಕರು, ಪೋಷಕರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಶಿಕ್ಷಕರು ತಂತಮ್ಮ ಶಾಲೆಯ ಮಕ್ಕಳಿಗೆ ತಿಳಿವಳಿಕೆ ಮೂಡಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಅನೇಕರಿಗೆ ಕಿವಿ,ಕಣ್ಣಿನ ಸಮಸ್ಯೆ ಇರುತ್ತದೆ. ಆದರೆ, ಅದನ್ನು ಗುರುತಿಸಲು ಸಾಧ್ಯವಾಗಿರಲ್ಲ. ಆಸ್ಪತ್ರೆಗೆ ತೋರಿಸಲು ಹಣವಿಲ್ಲವೆಂದು ಕೈ ಚೆಲ್ಲಿ ಕೂರುವ ಪೋಷಕರು ಯಾವುದೇ ಆತುರ ಮಾಡಿಕೊಳ್ಳದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ಸಲಹೆನೀಡಿದರು.

ವಿಶೇಷಚೇತನರ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಸಾಮಾನ್ಯ ಮಕ್ಕಳಂತೆ ಈ ಮಕ್ಕಳನ್ನು ಸರಿಸಮಾನವಾಗಿ ಕಂಡು ಪ್ರೋತ್ಸಾಹ ನೀಡಬೇಕು. ಹುಟ್ಟು-ಸಾವು ಯಾವ ರೀತಿ ಇರುತ್ತದೋ ಅದೇ ರೀತಿ ಕೆಲವು ಮಕ್ಕಳಿಗೆ ಹುಟ್ಟಿನಿಂದ ಬರುವ ಸಮಸ್ಯೆಗೆ ದೂಷಣೆ ಮಾಡದೆ ದೇವರು ಕೊಟ್ಟ ಮಗು ಎನ್ನುವಂತೆ ನೋಡಿ ಬೆಳೆಸಬೇಕು. ನಾವು ಅವರನ್ನು ನಿರ್ಲಕ್ಷ್ಯ ಮಾಡುವ ಬದಲಿಗೆ ಅವಕಾಶ ಕೊಡಬೇಕು ಎಂದರು. ದೃಷ್ಟಿಹೀನತೆ,ಬಲಹೀನತೆ ಮಕ್ಕಳೆಂದು ನೋಡದೆ ಪುಣ್ಯದ ಕೆಲಸವಾಗಿ ಕಾಣಬೇಕು. ಈ ವಿಚಾರದಲ್ಲಿ ಅಲೀಂ ಸಂಸ್ಥೆಯ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಸಾಧನಾ ಸಲಕರಣೆಗಳನ್ನು ವಿತರಿಸುತ್ತಿದ್ದಾರೆ. ಪ್ರತಿ ಮಗುವಿಗೆ ಅಗತ್ಯವಿರುವ ಸಲಕರಣೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಡಿಡಿಪಿಐ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಹೂಟಗಳ್ಳಿ ಮುಖಂಡರಾದ ಸುರೇಶ್,ಲೋಕೇಶ್, ಮಹದೇವು,ಮಹೇಶ್, ಸಿದ್ದರಾಜು ಮತ್ತಿತರರು ಹಾಜರಿದ್ದರು.

ಮೈಸೂರಿನ ಹೂಟಗಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಹಾಗೂ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭವನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.ಡಿಡಿಪಿಐ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಹೂಟಗಳ್ಳಿ ಮುಖಂಡರಾದ ಸುರೇಶ್,ಲೋಕೇಶ್, ಮಹದೇವು,ಮಹೇಶ್, ಸಿದ್ದರಾಜು ಮತ್ತಿತರರು ಹಾಜರಿದ್ದರು.