ಶ್ರೀಮದ್ಭಗವದ್ಗೀತಾ : 11
ಓಂ ಶ್ರೀಕೃಷ್ಣಾಯ ಪರಮಾತ್ಮನೇ ನಮಃ
ಮೊದಲನೆಯ ಅಧ್ಯಾಯ
1.ಅರ್ಜುನ ವಿಷಾದಯೋಗ
ಧೃತರಾಷ್ಟ್ರ ಉವಾಚ :
1.ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶೈವ ಕಿಮಕುರ್ವತ ಸಂಜಯ ?।।
ಧೃತರಾಷ್ಟ್ರ ಉವಾಚ = ಧೃತರಾಷ್ಟ್ರನು ಹೇಳಿದನು. ಸಂಜಯ = ಎಲೈ ಸಂಜಯನೆ!, ಧರ್ಮಕ್ಷೇತ್ರ = ಧರ್ಮಕ್ಷೇತ್ರವಾದ, ಕುರುಕ್ಷೇತ್ರ = ಕುರುಕ್ಷೇತ್ರದಲ್ಲಿ, ಸಮವೇತಾಃ = ಸೇರಿದವರೂ, ಯುಯುತ್ಸವಃ = ಯುದ್ಧವನ್ನು ಮಾಡಬಯಸಿದವರೂ ಆದ, ಮಾಮಕಾಃ = ನನ್ನವರೂ (ದುರ್ಯೋಧನನು ಮುಂತಾದವರು), ಪಾಣ್ಣವಾಃ- ಚ-ಏವ = ಪಾಂಡುಪುತ್ರರಾದ ಧರ್ಮರಾಜಾದಿಗಳೂ, ಕಿಮ್ = ಏನು, ಅಕುರ್ವತ = ಮಾಡಿದರು ?
ಧೃತರಾಷ್ಟ್ರನು ಹೇಳಿದನು :-
ಎಲೈ ಸಂಜಯನೆ! ಯುದ್ಧ ಮಾಡಲು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ ನನ್ನವರೂ, ಪಾಂಡವರೂ, ಏನು ಮಾಡಿದರು ?
ಸಂಜಯ ಉವಾಚ :
2.ದೃಷ್ಟಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ।।
ಸಂಜಯಃ = ಸಂಜಯನು, ಉವಾಚ = ಹೇಳಿದನು. ತದಾ = ಆಗ, ರಾಜಾ = ರಾಜನಾದ, ದುರ್ಯೋಧನಃ ತು = ದುರ್ಯೋಧನನಾದರೂ, ವ್ಯೂಢಂ = ವ್ಯೂಹಾತ್ಮಕವಾಗಿ ರಚಿಸಲ್ಪಟ್ಟಿರುವ, ಪಾಂಡವಾನೀಕಂ = ಪಾಂಡವರ ಸೈನ್ಯವನ್ನು, ದೃಷ್ಟಾ = ನೋಡಿ, ಆಚಾರ್ಯಂ = ತನಗೆ ಗುರುವಾದ ದ್ರೋಣಾಚಾರ್ಯನನ್ನು, ಉಪಸಂಗಮ್ಯ = ಸಮೀಪಿಸಿ, ವಚನಂ = ಮಾತನ್ನು, ಅಬ್ರವೀತ್ = ನುಡಿದನು.
ಸಂಜಯನು ಹೇಳಿದನು :-
ಆಗ ರಾಜನಾದ ದುರ್ಯೋಧನನು ಯುದ್ಧಕ್ಕೆ ಸಿದ್ಧವಾಗಿ ವ್ಯೂಹವನ್ನು ರಚಿಸಿಕೊಂಡು ನಿಂತಿರುವ ಪಾಂಡವಸೈನ್ಯವನ್ನು ಚೆನ್ನಾಗಿ ನೋಡಿ, ದ್ರೋಣಾಚಾರ್ಯನ ಬಳಿಗೆ ಹೋಗಿ ಹೀಗೆ ಹೇಳಿದನು.
3.ಪಶ್ಯತಾಂ ಪಾಂಡುಪುತ್ರಾಣಾಂ ಆಚಾರ್ಯ! ಮಹತೀಂ ಚಮೂಮ್.
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ||
ಆಚಾರ್ಯ = ಹೇ ಗುರುವೆ!, ತವ = ನಿಮ್ಮ, ಶಿಷ್ಯೇಣ = ಶಿಷ್ಯನೂ, ಧೀಮತಾ ಮೇಧಾವಿಯೂ ಆದ, ದ್ರುಪದಪುತ್ರೇಣ = ದ್ರುಪದಮಹಾರಾಜನ ಪುತ್ರನಾದ ದೃಷ್ಟದ್ಯುಮ್ನನಿಂದ, ವ್ಯೂಢಾಂ = ಯುದ್ಧ ಮಾಡಲು ವ್ಯೂಹರೂಪದಲ್ಲಿ ಸಿದ್ಧಪಡಿಸಲ್ಪಟ್ಟ, ಮಹತೀಂ = ದೊಡ್ಡದಾದ, ಪಾಂಡುಪುತ್ರಾಣಾಂ = ಪಾಂಡುರಾಜನ ಪುತ್ರರಾದ ಪಾಂಡವರ, ಏತಾಮ್ = ಈ, ಚಮೂಂ= ಸೇನೆಯನ್ನು, ಪಶ್ಯ = ನೋಡಿ.
ಹೇ ಗುರುವೆ! ನಿಮ್ಮ ಶಿಷ್ಯನೂ, ಮೇಧಾವಿಯೂ, ದ್ರುಪದಪುತ್ರನೂ ಆದ ಧೃಷ್ಟದ್ಯುಮ್ನನು ಪಾಂಡವರ ಸೇನಾಪತಿಯಾಗಿ ಇದ್ದುಕೊಂಡು, ಅವರ ಸೈನ್ಯವನ್ನು ವ್ಯೂಹಾತ್ಮಕವಾಗಿ ಏರ್ಪಡಿಸಿ, ಯುದ್ಧಕ್ಕೆ ಸಜ್ಜುಗೊಳಿಸಿ ನಿಲ್ಲಿಸಿದ್ದಾನೆ. ಅಂತಹ ಈ ವಿಸ್ತಾರವಾದ ಪಾಂಡವಸೈನ್ಯವನ್ನು ನೋಡಿ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ