ಸಂಪಾದಕೀಯ : ರಾಜಕೀಯ – ಭರವಸೆಯ ರಾಜಕಾರಣಿ ಇಲ್ಲವೋ ಅಥವಾ ಚಿವುಟುತ್ತಿದ್ದಾರೋ ?

Spread the love

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಪ್ರಚಾರವು ಬರದಿಂದ ಸಾಗುತ್ತಿದೆ . ಆದರೆ ಚುನಾವಣೆ ಆರಂಭವಾಗುವ ಮುನ್ನ ಅಭ್ಯರ್ಥಿಯನ್ನು ಆರಿಸುವುದು ಎರೆಡೂ ದೊಡ್ಡ ಪಕ್ಷಗಳಿಗೂ ಸವಾಲಾಗಿತ್ತು. ಹೇಳಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷ. ಆದರೆ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆರಿಸಲು ಎರೆಡು ಪಕ್ಷಗಳು ಒಂದೇ ಅಭ್ಯರ್ಥಿಗೆ ಹಗ್ಗ ಜಗ್ಗಾಟ ನಡೆಸುವಂತಾಯಿತು.
ಲಕ್ಷಕ್ಕಿಂತಲೂ ಮೀರಿ ಇರುವ ಮತದಾರರ ಕ್ಷೇತ್ರದಲ್ಲಿ ಒಬ್ಬರೇ ಒಬ್ಬ ಅಭ್ಯರ್ಥಿ ಸಿಗುವುದು ಇಷ್ಟೊಂದು ಕಷ್ಟ ಕರ ಸಂಗತಿ ಎನ್ನುವುದು ವಿಪರ್ಯಾಸ. ಚನ್ನಪಟ್ಟಣ ಚುನಾವಣಾ ಅಭ್ಯರ್ಥಿಯನ್ನು ಆರಿಸಲು ಕಡೆಯ ಕ್ಷಣದವರೆಗೂ ಎರಡು ಪಕ್ಷಗಳೂ ಗೌಪ್ಯತೆ ಕಾಪಾಡಿಕೊಂಡು ಬಂದರು. ಕಾರಣ ಅಭ್ಯರ್ಥಿಯನ್ನು ಘಂಟಾಘೋಷವಾಗಿ ಹೇಳಲಾರದ ಸ್ಥಿತಿಯಲ್ಲಿದ್ದವು.
ಒಂದು ಪಕ್ಷ ಹತ್ತಾರು ವರ್ಷ ದೇಶವನ್ನು ಆಳಿಕೊಂಡು ಬಂದಿರುವ ಪಕ್ಷ, ಮತ್ತೊಂದು ಪಕ್ಷ 10 ವರ್ಷದಿಂದ ದೇಶವನ್ನು ಆಳುತ್ತಿರುವ ಪಕ್ಷ. ಇಂತಹ ಪಕ್ಷಕ್ಕೆ ಮುಂದಿನ ಐದು ವರ್ಷದಲ್ಲಿ ತಮ್ಮ ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಆರಿಸಲು ಈ ಸ್ಥಿತಿಯಾದರೆ ಹೇಗೆ.
ಒಬ್ಬರು ನಾಯಕರ ಹಿಂದೆ ನೂರಾರು ಕಾರ್ಯಕರ್ತರು ಓಡಾಡುತ್ತಿರುತ್ತಾರೆ. ಅಂತಹವರಲ್ಲಿ ಒಬ್ಬರೂ ಭರವಸೆ ಮೂಡಿಸುವಂಥ ರಾಜಕಾರಣಿಗಳು ಇಲ್ಲವಾ ? ಅಥವಾ ಯುವಜನತೆಯು ನಿಜವಾಗಿಯೂ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರ ಎನ್ನುವುದು ಪ್ರಶ್ನೆಯಾಗಿದೆ. ಅಥವಾ ತಮ್ಮ ವಂಶ ಪಾರಂಪರ್ಯ ಮುಂದುವರಿಯಲು ಅಂತಹ ಎಲ್ಲಾ ಯೋಗ್ಯತೆ ಇರುವ ರಾಜಕಾರಣಿಗಳನ್ನು ಚಿಗುರಿನಲ್ಲೇ ಚಿಗುಟಿ ಹಾಕುತ್ತಿದೆಯಾ ಪಕ್ಷಗಳು ಎಂದು ಅನಿಸುತ್ತದೆ. ಅಥವಾ ರಾಷ್ಟ್ರೀಯ ಪಕ್ಷಗಳಲ್ಲಿ ಯುವಕರನ್ನು ಅಥವಾ ಕಾರ್ಯಕರ್ತರನ್ನು ಬೆಳಸಿಲ್ಲವೋ ?
10, 20, 30 ವರ್ಷಗಳ ತನಕ ಒಬ್ಬರೇ ನಾಯಕರು ಮುನ್ನಡೆಸುತ್ತಾ ಮತ್ತೆ ಅವರ ಜಾಗಕ್ಕೆ ಮತ್ತೊಬ್ಬರನ್ನು ತಯಾರಿ ನಡೆಸುವುದರಲ್ಲೂ ಸೋಲುತ್ತಿದೆ ರಾಜಕೀಯ ಪಕ್ಷಗಳು. ಕಡೆಗೆ ತಮ್ಮ ವಂಶದವರನ್ನೇ ಆರಿಸುತ್ತಿದೆ. ಹೀಗಾದರೆ ಮುಂದೆ ದೇಶವನ್ನು ಆಳುವ ಚಾಕಚಕ್ಯತೆ , ಕ್ಷಮತೆ ಹೊಂದಿದವರು ಮುಂದೆ ಬರುವುದಾದರು ಹೇಗೆ ?