ಶ್ರೀ ಮದ್ಭಗವದ್ಗೀತಾ : 7
ಆದರೂ ಸರಿಯೇ, ಇದು ಕೂಡಾ ಕಷ್ಟವಾಗಿಯೇ ಇರುವುದೆಂದು ಭಾವಿಸುವ ಸಾಮಾನ್ಯ ಸಾಧಕರಿಗೋಸ್ಕರ ಭಗವದ್ಗೀತೆಯನ್ನು ಪ್ರಪಂಚದಲ್ಲಿ ತಂದುಕೊಟ್ಟ ಮೊದಲನೆಯ ಆಚಾರ್ಯನಾದ ಸಂಜಯಸದ್ಗುರುವು 18ನೆಯ ಅಧ್ಯಾಯದ ತುಟ್ಟತುದಿಯ ಶ್ಲೋಕದಲ್ಲಿ ಭಗವದ್ಗೀತಾಸಾರವನ್ನು ತನ್ನದೇ
ಆದ ಶೈಲಿಯಲ್ಲಿ ಹೀಗೆ ಉಪದೇಶಿಸಿದ್ದಾನೆ :-
ಯತ್ರ ಯೋಗೇಶ್ವರಃ ಕೃಷ್ಣಃ ಯತ್ರ ಪಾರ್ಥೋ ಧನುರ್ಧರಃ|
ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ॥
(.. 18-78)
ಕಥಾಪಕ್ಷವು :
ಧೃತರಾಷ್ಟ್ರ ಮಹಾರಾಜನೆ! ಎಲ್ಲಾ ಯೋಗವಿದ್ಯೆಗಳಿಗೂ ಅಧಿಪತಿಯಾದ ಶ್ರೀಕೃಷ್ಣನು, ಕೈಯಲ್ಲಿ ಗಾಂಡೀವಧನುಸ್ಸನ್ನು ಧರಿಸಿರುವ ಅರ್ಜುನನು ಯಾವ ಪಕ್ಷದಲ್ಲಿ ಇರುವರೋ, ಆ ಪಕ್ಷದಲ್ಲಿ ರಾಜ್ಯಲಕ್ಷ್ಮಿಯೂ, ಯುದ್ಧವಿಜಯವೂ, ಉತ್ತರೋತ್ತರಾಭಿವೃದ್ಧಿಯೂ, ರಾಜನೀತಿಯೂ ಎಂಬುವು ಸುಸ್ಥಿರವಾಗಿ ಇರುತ್ತವೆ. ಇದು ನನ್ನ ನಿಶ್ಚಿತಾಭಿಪ್ರಾಯವು.
ತತ್ತ್ವಪಕ್ಷ :-
ಎಲೈ ಸಾಧಕನೆ! ಯಾವ ಹೃದಯದಲ್ಲಿ ಮಾಯಾಧಿಪತಿಯಾದ, ಅಂದರೆ, ಸಗುಣಬ್ರಹ್ಮನೇ ಪ್ರತಿನಿಧಿಯಾದ ನಾರಾಯಣಮಹರ್ಷಿ ಇರುವನೋ, ಆತನೊಂದಿಗೆ ಓಂಕಾರದ ಅನುಸಂಧಾನದಲ್ಲಿ ತತ್ಪರನಾದ ಜೀವನಿಗೆ ಪ್ರತಿನಿಧಿಯಾಗಿ ಇರುವ ನರಮಹರ್ಷಿ ಇರುವನೋ (ಅಂದರೆ ಜೀವೇಶ್ವರ ತತ್ತ್ವವಿಚಾರಣೆ ನಡೆಯುವುದೋ), ಆ ಹೃದಯದಲ್ಲಿ ಸಮಸ್ತ ವೇದಾರ್ಥಗಳು, ಅಷ್ಟಾದಶ ವಿದ್ಯೆಗಳು ಸ್ಪುರಿಸುತ್ತವೆ. ಅಣಿಮಾದಿ ಅಷ್ಟಸಿದ್ಧಿಗಳು ಲಭಿಸುತ್ತವೆ. ಸಗುಣಬ್ರಹ್ಮನ ಸನ್ನಿಧಿಯು ಸಿದ್ಧಿಸುತ್ತದೆ. ಜೀವತ್ವವನ್ನು ತೊಲಗಿಸಿ, ಪರಬ್ರಹ್ಮತ್ವವನ್ನು ಉಂಟುಮಾಡುವ ಶುದ್ಧಜ್ಞಾನವು ಕೂಡಾ ಪ್ರಕಾಶಿಸುತ್ತದೆ.)
ಈ ಶ್ಲೋಕಕ್ಕೆ ಇರುವ ಎರಡು ತಾತ್ಪರ್ಯಗಳೂ ಸಾಧಕರಿಗೆ ಉಪಯೋಗವಾಗುವುವೆ. ಪ್ರಾಥಮಿಕಸ್ಥಾಯಿಯಲ್ಲಿರುವ ಭಕ್ತರು, ಪರಮಾತ್ಮನಿಗೆ ಪ್ರತಿನಿಧಿಗಳಾಗಿ ನರನಾರಾಯಣ ಸ್ವರೂಪರಾದ ಶ್ರೀಕೃಷ್ಣಾರ್ಜುನರನ್ನು ಉಪಾಸಿಸೆಂದು ಕಥಾಪಕ್ಷದ ತಾತ್ಪರ್ಯವು ಸೂಚಿಸುತ್ತಿದೆ.
ತತ್ತ್ವಪರವಾದ ತಾತ್ಪರ್ಯವು ಒಂದಷ್ಟು ಗಂಭೀರವಾಗಿ ಸಾಧನೆ ಮಾಡುವ ಸಾಧಕರಿಗೆ ಮಾರ್ಗಗಳನ್ನು ಸೂಚಿಸುತ್ತಿದೆ. ಇದರಲ್ಲಿಯೂ ಕೂಡಾ ಪರಿಮಿತ ಸ್ವರೂಪನಾದ ನರನಾರಾಯಣರ ಉಪಾಸನೆ ಇದೆ. ಆದರೆ ಇವರನ್ನು ವ್ಯಕ್ತಿಗಳಾಗಲ್ಲದೇ, ನರನಾರಾಯಣತತ್ತ್ವಗಳಿಗೆ ಪ್ರತಿನಿಧಿಗಳಾಗಿ ಸ್ವೀಕರಿಸಿ, ವಿಚಾರಣಾ ರೂಪವಾದ ಉಪಾಸನೆಯನ್ನು ಮಾಡೆಂದು ಈ ತಾತ್ಪರ್ಯವು ಮಾರ್ಗದರ್ಶನ ಮಾಡುತ್ತಿದೆ.
ಹಾಗಾಗಿ, ಭಗವಂತನು ಹೇಳಿದ ನಾಲ್ಕು ಸಂಗ್ರಹ ಸೂತ್ರಗಳಿಗೆ ಜೋಡಣೆಯಾಗಿ ಅವುಗಳಿಗೆ ರೂಪಾಂತರಭೂತವಾದ ಈ “ಯತ್ರ ಯೋಗೇಶ್ವರಃ ಕೃಷ್ಣಃ’ ಎಂಬ ಶ್ಲೋಕವು ಭಗವದ್ಗೀತೆಯ ಚರಮ ಶ್ಲೋಕವಾಗಿ ರಾರಾಜಿಸುತ್ತಿದೆ. ಅದಕ್ಕಾಗಿಯೇ, ಕೆಲವು ಸಂಪ್ರದಾಯದವರು ಭಗವದ್ಗೀತೆಯಲ್ಲಿನ “ಸರ್ವಧರ್ಮಾನ್ ಪರಿತ್ಯಜ್ಯ” ಎಂಬ ಶ್ಲೋಕವನ್ನೇ ಚರಮಶ್ಲೋಕವಾಗಿ ಭಾವನೆಮಾಡುತ್ತಾರೆ. ಇನ್ನು ಕೆಲವು ಸಂಪ್ರದಾಯದವರು “ಯತ್ರ ಯೋಗೇಶ್ವರಃ” ಎಂಬ ಶ್ಲೋಕವನ್ನು ಚರಮಶ್ಲೋಕವಾಗಿ ಭಾವನೆ ಮಾಡುತ್ತಾರೆ.
ಚರಮಶ್ಲೋಕವು ಯಾವುದೇ ಆದರೂ, ಭಾವನಾಸೋಪಾನ ಪರಂಪರೆಯು ಮಾತ್ರ ಒಂದೇ!
ದ್ವೈತಾದ್ವೈತ, ವಿಶಿಷ್ಟಾದ್ವೈತಾದಿ ಸಿದ್ಧಾಂತಗಳಲ್ಲಿ ಯಾವ ಸಿದ್ಧಾಂತವನ್ನು ಅನುಸರಿಸುವವರೇ ಆದರೂ ಸರಿಯೇ ಇಂದ್ರಿಯಜಯವು, ಏಕಾಗ್ರತೆಯು, ವೈರಾಗ್ಯವು ಎಂಬ ಸೋಪಾನಗಳಲ್ಲಿ ವಿನಾಯಿತಿಯಾಗಲೀ, ಅಭಿಪ್ರಾಯಭೇದಗಳಾಗಲೀ ಇಲ್ಲ! ಸಾಧನೆಯ ಪ್ರಾರಂಭ ಮಧ್ಯಮ ಸ್ಥಾಯಿಗಳಲ್ಲಿ ಇರುವವರಿಗೆ ಅಂತಿಮ ಸಿದ್ಧಾಂತ ಚರ್ಚೆಯಿಂದ ಪ್ರಯೋಜನವು ಹೆಚ್ಚಾಗಿ ಇಲ್ಲ !!
ಯಾರ ಅನುಭವವು ಅವರದು. ಆದ್ದರಿಂದ ನಮ್ಮ ಅನುಭವವನ್ನು ಪುರಸ್ಕರಿಸಿಕೊಂಡು ನಾವು ಈ ಭಗವದ್ಗೀತಾ ಪ್ರಸ್ಥಾನಗ್ರಂಥಕ್ಕೆ ಬಹುತೇಕ ಶಂಕರ ಭಗವತ್ಪಾದರ ಮಾರ್ಗದಲ್ಲಿಯೇ ವ್ಯಾಖ್ಯಾನವನ್ನು ಮಾಡುತ್ತಾ ಹೋಗಿದ್ದೇವೆ. ನಿಮ್ಮ ಅನುಭೂತಿಯು ನಿಮ್ಮದು. ಅನುಭೂತಿಯವರೆಗೂ ಬಂದದ್ದಾದರೆ ಆಗ ಮಾತನಾಡಬೇಕು ಎನಿಸಿದರೆ, ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡುತ್ತಾರೆ. ಅನುಭೂತಿಗೆ ದೂರದಲ್ಲಿ ಇರುವವರು, ಇತರ ಚರ್ಚೆಗಳನ್ನು ಬಿಟ್ಟು ತಮ್ಮ ಸಿದ್ಧಾಂತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈಗ ನಾವು ಹೇಳಿಕೊಂಡ ಪಂಚಶ್ಲೋಕೀ ಭಗವದ್ಗೀತಾ ಸೋಪಾನ ಕ್ರಮದಲ್ಲಿ ಸಾಧನೆಮಾಡಿಕೊಳ್ಳುತ್ತಾ, ಮುಂದಕ್ಕೆ ಸಾಗುತ್ತಾರೆ.
ಹಾಗಾದರೂ, ಭಗವದ್ಗೀತೆಯು ನಮಗೆ ಏನು ಹೇಳುತ್ತಿರುವುದೋ, ಸ್ವಲ್ಪವಾದರೂ ಗೊತ್ತಿರಬೇಕು. ಮೂಲ ಭಗವದ್ಗೀತೆಯಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಒಂದು ಶ್ಲೋಕಕ್ಕೂ, ಮತ್ತೊಂದು ಶ್ಲೋಕಕ್ಕೂ ನಡುವೆ ಇರುವ ಸಂಬಂಧವು ನಮಗೆ ಸ್ಪಷ್ಟವಾಗಿ ಕಾಣಿಸದು. ಶ್ಲೋಕಗಳಿಗೆ ಯಥಾತಥವಾಗಿ ರಚಿಸಿದ ತಾತ್ಪರ್ಯಗಳನ್ನು ಓದಿದರೂ ಕೂಡಾ ಅದು ಸ್ಪಷ್ಟವಾಗಿ ಕಾಣಿಸದು. ಅದಕ್ಕಾಗಿಯೇ ಒಂದಷ್ಟು ವಿಪುಲವಾದ ವಿವರಣಾತ್ಮಕವಾದ ತಾತ್ಪರ್ಯಗಳೊಂದಿಗೆ ಸೇರಿಸಿ, ಭಗವದ್ಗೀತಾ ಶ್ಲೋಕಗಳನ್ನು ಈ ಸಂಪುಟಿಯು ನಿಮಗೆ ಕೊಡುತ್ತಿದೆ.
ಕೂಲಂಕಷವಾದ ಚರ್ಚೆಗಳೊಂದಿಗೆ ಕೂಡಿದ ವ್ಯಾಖ್ಯಾನವನ್ನು ನಿಮ್ಮ ಸ್ವಾಮೀಜಿ ನಿಮಗೋಸ್ಕರ “ಗೀತಾ ಸ್ವರಪ್ರಸ್ತಾರ ವ್ಯಾಖ್ಯ” ಎಂಬ ಹೆಸರಿನಿಂದ ಈಗಾಗಲೇ ಪ್ರಕಟಿಸಿದ್ದಾರೆ. ಅದಕ್ಕೆ ಅಕ್ಷರಸೇವೆಯನ್ನು ಮಾಡಿದ ಭಕ್ತನು ಕುಪ್ಪಾಕೃಷ್ಣಮೂರ್ತಿಯೇ, ಈ ಸಂಗ್ರಹ ಸಂಪುಟವನ್ನು ಕೂಡಾ ನಮ್ಮ ಆಜ್ಞೆ ಮೇರೆಗೆ ನಿಮಗೋಸ್ಕರ ಸಿದ್ಧಮಾಡಿದ್ದಾರೆ.
ಇದರಲ್ಲಿರುವ ಪ್ರತಿಪದಾರ್ಥಗಳೂ ನಿಮಗೆ ಶ್ಲೋಕದಲ್ಲಿರುವ ಅರ್ಥವನ್ನು ಯಥಾತಥವಾಗಿ ಪ್ರದರ್ಶಿಸುತ್ತವೆ. ತಾತ್ಪರ್ಯಗಳು ಅವುಗಳ ಮೇಲಿನ ವಿವರಣೆಗಳನ್ನು ನಿಮಗೆ ಕೊಡುತ್ತವೆ. ತುಂಬಾ ಅವಶ್ಯಕತೆ ಇದ್ದ ಕಡೆ ಅವತಾರಿಕೆಗಳು, ವಿವರಣೆಗಳು ಕೂಡಾ ಇವೆ.
ಗೀತಾಸ್ವರಪ್ರಸ್ತಾರ ವ್ಯಾಖ್ಯೆಯೆಂಬ ಬೃಹದ್ಗ್ರಂಥವನ್ನು ಅಧ್ಯಯನ ಮಾಡುವ ಅವಕಾಶವಿಲ್ಲದಿರುವವರಿಗೋಸ್ಕರ ಈ “ಲಘುವ್ಯಾಖ್ಯಾನ” ಗ್ರಂಥವು ದತ್ತಪ್ರಸಾದವಾಗಿ ನಿಮ್ಮ ಕೈಗಳಿಗೆ ತಲುಪುತ್ತಿದೆ. ಆಲಯದಲ್ಲಿನ ಪ್ರಸಾದದಂತೆಯೇ ಇದನ್ನು ಕೂಡಾ ನೀವು ನಿಮ್ಮ ಕಣ್ಣುಗಳಿಗೆ, ಹೃದಯಕ್ಕೆ ಒತ್ತಿಕೊಳ್ಳುತ್ತಾ, ಭಗವತ್ತತ್ತ್ವದೊಳಗೆ ಪ್ರವೇಶಮಾಡಿರಿ.
ನಿಮಗೆ ನಿತ್ಯಸಹಾಯಕಾರಿಣಿಯಾಗಿ ದತ್ತ ಸತ್ಕೃಪೆಯು ನಿಮ್ಮ ಹಿಂದೆ ಇರುವುದೆಂದು ಮರೆಯಬೇಡಿ. ದತ್ತಸ್ವಾಮಿಯ ಪ್ರಣಾಳಿಕೆಯ ಭಾಗವಾಗಿ ವಿಸ್ತರಿಸಿರುವ ಈ ಗೀತಾ ಜ್ಞಾನಯಜ್ಞದಲ್ಲಿ ನೀವು ಕೂಡಾ ಭಾಗವಹಿಸಿ! ನಿಮ್ಮ ಮಕ್ಕಳನ್ನು ಕೂಡಾ ಭಾಗವಹಿಸುವಂತೆ ಮಾಡಿ!!
ನಿಮಗೆ, ನಿಮ್ಮ ಕುಟುಂಬಗಳಿಗೆ ದತ್ತರಕ್ಷೆಯು ಸುಸ್ಥಿರವಾಗಿ ಇರಲಿ!!!
ಜಯಗುರುದತ್ತ.
ನಿಮ್ಮ
ಸ್ವಾಮೀಜಿ
( ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ