ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಆಧುನಿಕ ಕರ್ನಾಟಕದ ಮಹಾ ಶಿಲ್ಪಿ ಡಿ ಕೆ ಶಿವಕುಮಾರ್
ಮಂಡ್ಯ.- ಕರ್ನಾಟಕ ರಾಜ್ಯವನ್ನು ವಿವಿಧ ಆಯಾಮದಲ್ಲಿ ಅಭಿವೃದ್ಧಿ ಗೊಳಿಸಿದ ಆಧುನಿಕ ಕರ್ನಾಟಕದ ಮಹಾ ಶಿಲ್ಪಿ ಎಸ್ ಎಂ ಕೃಷ್ಣ ಅವರ ಕೊಡುಗೆ ಅಪಾರ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಅವರು ಇಂದು ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಂತ್ಯ ಸಂಸ್ಕಾರ ನಡೆಸುವ ಸಂಬAಧ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ನವ ಕರ್ನಾಟಕ ನಿರ್ಮಾಣದ ಕಾರಣಕರ್ತ ಹಾಗೂ ಜಿಲ್ಲೆಯ ಒಬ್ಬ ಧೀಮಂತ ಹಿರಿಯ ನಾಯಕನನ್ನು ಇಂದು ನಾವು ಕಳೆದುಕೊಂಡಿದ್ದೇವೆ. ಎಸ್ ಎಂ ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ, ವಿದೇಶಾಂಗ ಸಚಿವ, ಮಹಾರಾಷ್ಟ್ರದ ರಾಜ್ಯಪಾಲರು, ವಿಧಾನಸಭೆಯ ಸ್ಪೀಕರ್ ಹಾಗೂ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 1962 ರಲ್ಲಿ ಅವರು ವಿಧಾನ ಸಭೆಗೆ ಆಯ್ಕೆಯಾದವರು. ಸುಧೀರ್ಘ ರಾಜಕೀಯದಲ್ಲಿ ಸೋಲು, ಗೆಲುವನ್ನು ಕಂಡು ಎಲ್ಲಾ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅಮೆರಿಕಾದಲ್ಲಿ ವ್ಯಾಸಂಗ ಮಾಡಿದರೂ ಕೂಡ ಕರ್ನಾಟಕ ರಾಜ್ಯದ ಜನರಿಗೆ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದರು.
ರಾಜ್ಯದ ಮಕ್ಕಳ ಬಿಸಿಯೂಟದ ಕಾರ್ಯಕ್ರಮದಿಂದ ಹಿಡಿದು ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘ ತಂದವರು. ರೈತರ ಜೀವನದಲ್ಲಿ ಬದಲಾವಣೆ ತರಲು ಅಂದಿನ ಕಾಲದಲ್ಲಿ ರೈತರಿಗೆ ಕೇವಲ 5 ರೂ ಗೆ ಭೂಮಿ ಪಹಣಿ ಯೋಜನೆಯ ಬಾಂಡ್ ಅನ್ನು ನೀಡಿದ್ದು, ಎಲ್ಲಾ ರೈತರು ಇಂದು ಸ್ಮರಿಸುತ್ತಿದ್ದಾರೆ. ರಾಜ್ಯದಲ್ಲಿ ಶ್ರೀಗಂಧವನ್ನು ರೈತರು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಿದವರು, ಕಾವೇರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಕಾವೇರಿ ಜಲಾನಯನ ಪ್ರದೇಶಕ್ಕೆ ಹೊಸ ರೂಪ ತಂದವರು. ಕಾವೇರಿ ಗಲಾಟೆ ಹಾಗೂ ನಟ ಡಾ ರಾಜ್ ಕುಮಾರ್ ಅಪಹರಣ ವಿಷಯದಲ್ಲಿ ಅನೇಕ ಹೋರಾಟ ಮಾಡಿದ್ದಾರೆ.
ಉದ್ಯೋಗ ಸೌಧ, ವಿಕಾಸ ಸೌಧ ನಿರ್ಮಾಣ, ಬೆಂಗಳೂರು ಅಂತರ ರಾಷ್ಟೀಯ ವಿಮಾನ ನಿಲ್ದಾಣ (ಏರ್ಪೋರ್ಟ್) ನಿರ್ಮಾಣ, ಮೆಟ್ರೋ ಪ್ರಾರಂಭ, ಐಟಿ ಬಿಟಿಗೆ ಸಂಸ್ಥೆಗೆ ಹೊಸ ರೂಪ ಕೊಟ್ಟು, ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದರ ಜೊತೆಗೆ ವಿಶ್ವ ದರ್ಜೆಗೆ ತೆಗೆದುಕೊಂಡು ಹೋಗಲು ಸಹಕರಿಸಿದವರು. ಕರ್ನಾಟಕಕ್ಕೆ ಅವರ ಬದುಕು ದೊಡ್ಡ ಶಿಖರದಂತಿದೆ. ಎಲ್ಲಾ ಜನಾಂಗಕ್ಕೆ ಒಂದು ಬದುಕನ್ನು ಕಟ್ಟಿಕೊಟ್ಟಂತಹವರು. ವರ್ಣರಂಜಿತ ವ್ಯಕ್ತಿತ್ವವನ್ನು ಉಳ್ಳವರು. ರಾಜಕಾರಣದ ಆಡಳಿತಕ್ಕೆ ಹೊಸ ರೂಪವನ್ನು ಕೊಟ್ಟವರು ಎಂದರು.
ಎಸ್ ಎಂ ಕೃಷ್ಣ ಅವರು ಮಂಡ್ಯ ಜಿಲ್ಲೆಯ ರೈತರ ಹಾಗೂ ಸ್ವಾತಂತ್ರ ಹೋರಾಟಗಾರನ ಮಗನಾಗಿ ಜನಿಸಿ ಬಾಲ್ಯದಿಂದ ಇಲ್ಲಿಯವರೆಗೂ 92 ವರ್ಷದ ಬದುಕಿನಲ್ಲಿ ಅವರ ಸಾಧನೆ ದೊಡ್ಡ ಮಟ್ಟದ್ದಾಗಿದೆ. ನಮ್ಮ ಸರ್ಕಾರವು ಅವರಿಗೆ ಗೌರವಪೂರ್ವಕವಾಗಿ ಅವರ ಅಂತ್ಯ ಕ್ರಿಯೆಯನ್ನು ನೆರವೇರಿಸಲು ನಾಳೆ ರಾಜ್ಯದ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚಾರಣೆಯನ್ನು ನೆರವೇರಿಸುವ ಸಲುವಾಗಿ ಯಾವುದೇ ಸರ್ಕಾರಿ ಆಚರಣೆಗಳು ನಡೆಯುವಂತಿಲ್ಲ ಎಂದು ಆದೇಶವನ್ನು ಹೊರಡಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಳೆ ಬೆಳಿಗ್ಗೆ 8 ಗಂಟೆಗೆ ಅವರ ಮನೆಯಿಂದ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೊರಟು ಕೆಂಗೇರಿ -ಬಿಡದಿ- ರಾಮನಗರ -ಚನ್ನಪಟ್ಟಣದಲ್ಲಿ ಒಂದು ಸ್ಥಳದಲ್ಲಿ ನಿಲುಗಡೆ ಮಾಡಿ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ನಂತರ ಮದ್ದೂರು ತಾಲ್ಲೂಕಿನ ಮೈಸೂರು – ಬೆಂಗಳೂರು ಹೆದ್ಧಾರಿಯ ಸೋಮನಹಳ್ಳಿ ಕಾಫಿ ಡೇ ಹತ್ತಿರ ಎಸ್ ಎಂ ಕೃಷ್ಣ ಅವರಿಗೆ ಸೇರಿದ ಖಾಲಿ ಜಾಗದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಅಂತ್ಯ ಕ್ರಿಯೆಯನ್ನು ಸರ್ಕಾರದ ಗೌರವದೊಂದಿಗೆ ನೆರವೇರಿಸಲಾಗುವುದು