ಗೀತೆ : 3 – ಪರಮಾತ್ಮನಲ್ಲಿ ಪ್ರವೇಶಿಸಲು ಬೇಕಾಗಿರುವ ಐದು ಲಕ್ಷಣಗಳು

Gitacharya
Spread the love

ಶ್ರೀ ಮದ್ಭಗವದ್ಗೀತಾ : 3

ಭಗವಂತನಿಗೆ ಕೂಡಾ ಈ ಮಾತು ಗೊತ್ತಿದೆ. ಆದ್ದರಿಂದಲೇ ಇದಕ್ಕೆ ತಕ್ಕ ಉಪಾಯವನ್ನು 11ನೆಯ ಅಧ್ಯಾಯದ ಕೊನೆಯಲ್ಲಿ ಆತನೇ ಹೀಗೆ ಉಪದೇಶಿದ್ದಾನೆ –

ಮತ್ಕರ್ಮಕೃನ್ಮತ್ಪರಮಃ ಮದ್ಭಕ್ತ ಸ್ಸಂಗವರ್ಜಿತಃ |
ನಿರ್ವೈರಸ್ಸರ್ವಭೂತೇಷು ಯಸ್ಸ ಮಾಮೇತಿ ಪಾಂಡವ!!!
(.. 11-55)

ಅರ್ಜುನನೆ! ಪರಮಾತ್ಮನಾದ ನನ್ನೊಳಗೆ ಪರಿಪೂರ್ಣವಾಗಿ ಪ್ರವೇಶಿಸ ಬೇಕಾದರೆ, ಐದು ಲಕ್ಷಣಗಳು ಇರಬೇಕು
1 . ಆತನು ಯಾವ ಕೆಲಸ ಮಾಡಿದರೂ ಪರಮಾತ್ಮನಿಗೋಸ್ಕರವೇ ಮಾಡಬೇಕು.
2 . ಬದುಕಿರುವಾಗಲೇ ಅಲ್ಲ, ಮರಣಿಸಿದ ಮೇಲೂ ಕೂಡಾ ಆತನು, ಪಡೆಯಬೇಕಾದ ಕೊನೆಯ ಗಮ್ಯವು ಪರಮಾತ್ಮನು ಮಾತ್ರವೇ ಆಗಿರಬೇಕು.
3 . ಪರಮಾತ್ಮನ ಮೇಲೆ ಅವ್ಯಾಜವಾದ ಪ್ರೀತಿಯಿಂದ ಸಂಕೀರ್ತನೆ ಪೂಜನಾದಿ ರೂಪವಾದ ಆಚರಣಾತ್ಮಭಕ್ತಿಯನ್ನು ಹೊಂದಿ ಇರಬೇಕು.
ಈ ಮೂರೂ ಆತನ ಆಧ್ಯಾತ್ಮಿಕ ಜೀವನ ಲಕ್ಷಣಗಳು.
4 . ಎಷ್ಟು ಘೋರವಾದ ಅಪಕಾರವಾದರೂ ಕೂಡಾ ಆತನಿಗೆ ಯಾವ ಜೀವಿಯ ಮೇಲೂ ವೈರವು ಇರಬಾರದು.
5 . ಲೌಕಿಕವಾದ ಯಾವ ಪದಾರ್ಥದ ಮೇಲಾಗಲೀ, ಯಾವ ಜೀವಿಯ ಮೇಲಾಗಲೀ, ಮಮತ್ವಾದಿರೂಪವಾದ ಸ್ನೇಹವು ಆತನಿಗೆ ಇರಬಾರದು.
ಈ ಎರಡೂ ಆತನ ಜೀವನ ಶೈಲಿಯ ಲಕ್ಷಣಗಳು.
(ಹೀಗೆ ಆಧ್ಯಾತ್ಮಿಕ ಜೀವನವನ್ನೂ, ನಿತ್ಯ ಜೀವನವನ್ನೂ, ವಿಕೋನ್ಮುಖವಾಗಿ ಕ್ರಮಬದ್ಧಮಾಡಿಕೊಂಡ ಸಾಧಕನು, ಪರಮಾತ್ಮನಾದ ನನ್ನನ್ನು ಪರಿಪೂರ್ಣವಾಗಿ ಪಡೆಯುತ್ತಾನೆ.)
ಇದು ಗೀತಾಸಾರ ಸರ್ವಸ್ವವಾದ ಶ್ಲೋಕಗಳಲ್ಲಿ ಒಂದೆಂದು ವ್ಯಾಖ್ಯಾತೃಗಳು ಎಷ್ಟೋ ಮಂದಿ ಕೀರ್ತಿಸಿದ್ದಾರೆ. ಕರ್ಮಗಳನ್ನು ಮಾಡುವಾಗ ಹಿಂದಿನ ಶ್ಲೋಕದಲ್ಲಿ ನಾವು ಹೇಳಿಕೊಂಡ ಅಸಕ್ತತ್ವವನ್ನು ಸಾಧಿಸಲು ಭಗವಂತನು ಐದು ಸೋಪಾನಗಳ ಉಪಾಯವನ್ನು ಇದರಲ್ಲಿ ಹೇಳುತ್ತಿದ್ದಾನೆ.
ಆ ಸೋಪಾನಗಳು ಹೀಗಿವೆ –
1 . ಮತ್ಕರ್ಮಕೃತ್ :-
ಸೈನಿಕನು ದೇಶಕ್ಕಾಗಿ ಯುದ್ಧಮಾಡಿದ ಹಾಗೆ ಸಾಧಕನು ಪರಮಾತ್ಮನಿಗೋಸ್ಕರ ಮಾತ್ರವೇ ಕೆಲಸಗಳನ್ನು ಮಾಡಬೇಕು.
2 . ಮತ್ಪರಮಃ :-
ಸೈನಿಕನಿಗೆ ದೇಶವೇ ಪರಮಲಕ್ಷ್ಯವಾದ ಹಾಗೆ ಸಾಧಕನಿಗೆ ಪರಮಾತ್ಮನೇ ಪರಮ ಚರಮ ಲಕ್ಷ್ಯವಾಗಬೇಕು.
3 . ಮದ್ಭಕ್ತಃ :-
ಕೆಲಸಗಳನ್ನು ಮಾಡುವಾಗ ಭಯದಿಂದಲೋ, ಅತ್ಯಾಸೆಯಿಂದಲೋ, ಮತ್ತು ಯಾವುದರಿಂದಲೋ ಅಲ್ಲದೆ, ಸೈನಿಕನು ದೇಶದ ಮೇಲಿನ ಪ್ರೀತಿಯಿಂದ ಯುದ್ಧ ಮಾಡಿದ ಹಾಗೆ ಸಾಧಕನು ಪರಮಾತ್ಮನ ಮೇಲಿನ ಪ್ರೀತಿಯಿಂದ ಸತ್ಕರ್ಮಗಳನ್ನು ಮಾಡಬೇಕು.
4 . ಸಂಗವರ್ಜಿತಃ :
ಯುದ್ಧಮಾಡುವ ಸೈನಿಕನಿಗೆ ತನ್ನ ದೇಶವು ಬಿಟ್ಟರೆ, ಮತ್ಯಾರೂ ಸ್ನೇಹಿತರಲ್ಲ. ಹಾಗೆಯೇ ಸಾಧಕನಿಗೆ ಪರಮಾತ್ಮನೊಬ್ಬನು ಬಿಟ್ಟರೆ, ಭಾರ್ಯಾಪುತ್ರಾದಿಗಳು ಸೇರಿದಂತೆ, ಮತ್ಯಾರೊಂದಿಗೂ ಅಂತರ್ಗತವಾದ ಸ್ನೇಹವಿರಬಾರದು. ಹಾಗೆಂದು ಹೇಳಿ ಅವರನ್ನು ಕುರಿತ ತನ್ನ ಕರ್ತವ್ಯಗಳನ್ನು ನಿರ್ವಹಿಸದೇ ಇರಬಾರದು.
5 . ನಿರ್ವೈರಃ :-
ನಿಜವಾದ ಸೈನಿಕನಿಗೆ ತಾನು ಆಯ್ದುಕೊಳ್ಳುವ ಶತ್ರುಗಳು ಕೂಡಾ ಇರರು. ಸೈನ್ಯಾಧಿಕಾರಿಯು ಸುಡಲು ಹೇಳಿದರೆ ಆತನು ಸುಡುತ್ತಾನೆ. ನಿಲ್ಲು ಎಂದರೆ ನಿಲ್ಲುತ್ತಾನೆ. ಹಾಗೆಯೇ ಸಾಧಕನು ಪರಮಾತ್ಮನನ್ನು ಬಿಟ್ಟು ಮತ್ತೊಬ್ಬರನ್ನು ಪ್ರೀತಿಸನು. ಆದರೆ, ಮತ್ತೊಬ್ಬರನ್ನು ದ್ವೇಷಿಸನು ಕೂಡ.
ಸಾಮಾನ್ಯವಾಗಿ ಒಬ್ಬರನ್ನು ವಿಶೇಷವಾಗಿ ಪ್ರೀತಿಸುವಾಗ, ಮತ್ತೊಬ್ಬರನ್ನು ದ್ವೇಷಿಸದೇ ತಪ್ಪದು. ಆದರೆ, ನಿಬದ್ಧತೆಯುಳ್ಳ ಸೈನಿಕನಿಗೆ ಈ ಎರಡೂ ಇರುವುದಿಲ್ಲ. ಹಾಗೆಯೇ ಜಾಣನಾದ ಸಾಧಕನಿಗೆ ರಾಗವೂ ಇರಬಾರದು, ದ್ವೇಷವೂ ಇರಬಾರದು.
ಭಗವಂತನು ಹೇಳಿದ ಈ ಐದು ಸೋಪಾನಗಳನ್ನೂ ಪರಿಶೀಲಿಸಿ ನೋಡಿದರೆ, ಸಾಮಾನ್ಯ ಮಾನವನು ಮೇಧಾಬಲದಿಂದ ಇವುಗಳನ್ನು ಸಾಧಿಸುವುದು ಸಾಧ್ಯವೆಂದು ಅನಿಸುತ್ತಿಲ್ಲ. ಆದ್ದರಿಂದ ಇವುಗಳನ್ನು ಸಾಧಿಸಲು ಯಾವುದಾದರೂ ಸುಲಭೋಪಾಯವನ್ನು ಉಪದೇಶಿಸಬೇಕಾಗಿದೆ. ಆ ಕೆಲಸವನ್ನು ಭಗವಂತನು 18ನೆಯ ಅಧ್ಯಾಯದ ಕೊನೆಯಲ್ಲಿ ಮಾಡಿದ್ದಾನೆ.
ದ್ವಿತೀಯಾಧ್ಯಾಯದಲ್ಲಿ ಭಗವಂತನು ಪ್ರಪ್ರಥಮವಾಗಿ ಹೇಳಿದೆ ಕರ್ಮಯೋಗ, ಸಾಂಖ್ಯಯೋಗ ಮಾರ್ಗಗಳ ವಿವರಣೆಯೇ ಉಳಿದ 16 ಅಧ್ಯಾಯಗಳ ಗ್ರಂಥ ವಿಸ್ತರಣೆಗೆ ಸಾರಾಂಶವಾದ್ದರಿಂದ, ಆ ಎರೆಡು ಮಾರ್ಗಗಳ ಸಾರವನ್ನೂ ಆಚರಣಾತ್ಮಕವಾಗಿ ಎರಡು ಶ್ಲೋಕಗಳಾಗಿ ಭಗವಂತನು 18 ನೆಯ ಅಧ್ಯಾಯದಲ್ಲಿ ಉಪದೇಶಿಸಿದ್ದಾನೆ.

ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ