ಶ್ರೀ ಮದ್ಭಗವದ್ಗೀತಾ : 37
38.ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ॥
ಸುಖ ದುಃಖೇ = ಸುಖದುಃಖಗಳನ್ನು, ಲಾಭಾಲಾಭೌ = ಲಾಭನಷ್ಟಗಳನ್ನು, ಜಯಾ ಜಯೌ = ಜಯಾಪಜಯಗಳನ್ನು, ಸಮೇ ಕೃತ್ವಾ = ಸಮವಾಗಿ ಭಾವನೆಮಾಡಿ, ತತಃ = ಆದಮೇಲೆ, ಯುದ್ಧಾಯ = ಯುದ್ಧಕ್ಕೋಸ್ಕರ, ಯುಜ್ಯಸ್ವ = ಉದ್ಯುಕ್ತನಾಗು. ಏವಂ = ಹೀಗೆ ಮಾಡಿದರೆ, ಪಾಪಂ = ಪಾಪವನ್ನು, (ನೀನು), ನ-ಅವಾಪ್ಸ್ಯಸಿ = ಹೊಂದುವುದಿಲ್ಲ.
ಎಲೈ ಅರ್ಜುನನೆ! ನಿನಗೀಗ ಯುದ್ಧವು ಅನಿವಾರ್ಯ. ಯುದ್ಧದಲ್ಲಿ ಹಿಂಸೆಯಿದೆ. ಹಿಂಸೆಯಿಂದ ಪಾಪವಿದೆ. ಆದರೂ ಪಾಪವು ಅಂಟದೆ ಯುದ್ಧಮಾಡುವ ಉಪಾಯವು ಒಂದಿದೆ. ಹೇಳುವೆನು ಕೇಳು. ಯುದ್ಧದಿಂದ ಜಯವೋ ಅಪಜಯವೋ ಇರುವುದು. ಅವುಗಳಿಂದ ಲಾಭವೋ ನಷ್ಟವೋ ಆಗುವುದು. ಅವುಗಳಿಂದ ಸುಖವೋ, ದುಃಖವೋ ಉಂಟಾಗುವುದು. ಇವುಗಳಲ್ಲಿ ಸುಖದುಃಖಗಳೆರಡನ್ನೂ ಸಮವಾಗಿ ಭಾವಿಸುವುದನ್ನು ಕಲಿತುಕೊ. ಅದಕ್ಕಾಗಿ ಲಾಭನಷ್ಟಗಳನ್ನು ಕುರಿತು ಸಮಭಾವನೆಯನ್ನು ಅಭ್ಯಸಿಸು. ಅದಕ್ಕಾಗಿ ಜಯಾಪಜಯಗಳಲ್ಲಿ ಸಮಭಾವನೆಯನ್ನು ಅಭ್ಯಸಿಸು. ಈ ವಿಷಯದಲ್ಲಿ ಪಟ್ಟನ್ನು ಸಾಧಿಸಿ, ಆಮೇಲೆ ಯುದ್ಧಕ್ಕೆ ಇಳಿ. ಅಂತಹ ಮಾನಸಿಕ ಸ್ಥಿತಿಯಿಂದ ಎಷ್ಟು ದೊಡ್ಡ ಯುದ್ಧವನ್ನು ಮಾಡಿದರೂ, ನಿನಗೆ ಪಾಪವು ಕಣದಷ್ಟೂ ಅಂಟಲಾರದು.
ವಿವರಣೆ:
“”ಇದೇನು? ಹಾಗೆ ಹೀಗೆ ತಿರುಗಿಸಿ ಹೇಳುತ್ತಾ, ಭಗವಂತನು ಹಿಂಸೆಯನ್ನೇ ಪ್ರೋತ್ಸಾಹಿಸುತ್ತಿರುವನೇ? ಈ ಭಗವದ್ಗೀತೆಯು ಉಗ್ರವಾದವನ್ನು ಪ್ರೋತ್ಸಾಹಿಸುತ್ತಿದೆಯೇ?” ಎಂದು ನಮಗೆ ಸಂದೇಹವಾಗಬಹುದು. ಅಂದು ಅರ್ಜುನನಿಗೂ ಅಂತಹ ಸಂದೇಹವೇ ಆಗಿರಬಹುದು. ಅದಕ್ಕಾಗಿಯೇ ಯುದ್ಧಮಾಡಬೇಕಾಗಿ ಬಂದರೆ, ಅದನ್ನು ಹೇಗೆ ಮಾಡಬೇಕೋ ಈ ಶ್ಲೋಕದಲ್ಲಿ ಭಗವಂತನು ವಿವರಿಸುತ್ತಿದ್ದಾನೆ.
ಅವತಾರಿಕೆ:
ಪ್ರಸಂಗವಶಾತ್ ಬಂದ ಧರ್ಮಶಾಸ್ತ್ರ ಪರವಾದ ಬೋಧೆಯನ್ನು, ಲೌಕಿಕದೃಷ್ಟಿ ಪರವಾದ ಬೋಧೆಯನ್ನು ಕೂಡ ಪೂರ್ತಿ ಮಾಡಿದ ಭಗವಂತನು ಅರ್ಜುನನ ಅಜ್ಞಾನವನ್ನು ಹೋಗಲಾಡಿಸಲು ಈ ಅಧ್ಯಾಯದ 11ನೆಯ ಶ್ಲೋಕದಿಂದ ಪ್ರಾರಂಭಿಸಿದ ಪ್ರಧಾನವಾದ ಬೋಧೆಯನ್ನೇ ಮತ್ತೆ ಮುಂದುವರೆಸುತ್ತಿದ್ದಾನೆ.
39.ಏಷಾ ತೇಽಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು।
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ! ಕರ್ಮಬಂಧಂ ಪ್ರಹಾಸ್ಯಸಿ॥
ಪಾರ್ಥ = ಎಲೈ ಅರ್ಜುನನೆ!, ಸಾಂಖ್ಯೇ = ಉಪನಿಷತ್ತುಗಳಲ್ಲಿ ಹೇಳಲ್ಪಟ್ಟ ಆತ್ಮತತ್ತ್ವಕ್ಕೆ ಸಂಬಂಧಿಸಿದ , ಏಷಾ = ಈ, ಬುದ್ಧಿಃ = ಜ್ಞಾನವು, ತೇ = ನಿನಗೋಸ್ಕರ, ಅಭಿಹಿತಾ = ಇಲ್ಲಿಯವರೆಗೂ ಹೇಳಲ್ಪಟ್ಟಿದೆ. ತು = ಇನ್ನು ಮುಂದೆ, ಯಯಾ = ಎಂತಹ, ಬುದ್ಧ್ಯಾ = ಜ್ಞಾನದಿಂದ, ಯುಕ್ತಃ = ಕೂಡಿದವನಾಗಿ, ಕರ್ಮಬಂಧಂ = ಕರ್ಮಗಳೆಂಬ ಬಂಧಗಳನ್ನು, ಪ್ರಹಾಸ್ಯಸಿ = ಬಿಡಬಲ್ಲೆಯೋ ಅಂತಹ, ಯೋಗೇ = ಕರ್ಮಯೋಗಕ್ಕೆ ಸಂಬಂಧಿಸಿದ, ಇಮಾಂ = ಈ ಜ್ಞಾನವನ್ನು, ಶೃಣು = (ಹೇಳುತ್ತಿದ್ದೇನೆ) ಕೇಳು.
ಎಲೈ ಅರ್ಜುನನೆ! ಇಲ್ಲಿಯವರೆಗೂ ನೀನು ಪ್ರಸ್ತಾಪಿಸಿದ ಉಪನಿಷತ್ತುಗಳಿಗೆ ಸಂಬಂಧಪಟ್ಟ ಆತ್ಮತತ್ತ್ವವನ್ನು ಕುರಿತು ನಿನಗೆ ಬೋಧಿಸಿರುವೆನು. ಇನ್ನು ಮುಂದೆ ಇಂತಹ ಆತ್ಮತತ್ತ್ವ ಜ್ಞಾನದಲ್ಲಿ ಪ್ರವೇಶವನ್ನು ಉಂಟುಮಾಡುವ ಸಾಮರ್ಥ್ಯವುಳ್ಳ ಕರ್ಮಯೋಗವನ್ನು ಕುರಿತು ಹೇಳುವೆನು. ಏಕೆಂದರೆ ಈ ಕರ್ಮಯೋಗದಿಂದ ನಿನ್ನಂತಹ ಸ್ಥಾಯಿಯಲ್ಲಿ ಇರುವ ಸಾಧಕರು ಸುಲಭವಾಗಿ ತಮ್ಮ ಕರ್ಮಬಂಧಗಳನ್ನು ದಾಟಿ, ಆತ್ಮತತ್ತ್ವಜ್ಞಾನದಲ್ಲಿ ಪ್ರವೇಶಿಸಿ, ಅದರಿಂದ ಶಾಶ್ವತ ಮೋಕ್ಷವನ್ನು ಪಡೆದುಕೊಳ್ಳಬಲ್ಲರು.
ಅವತಾರಿಕೆ:
ನಿಷ್ಕಾಮ ಕರ್ಮಾನುಷ್ಠಾನರೂಪವಾದ ಕರ್ಮಯೋಗದ ಪ್ರಾಶಸ್ತ್ಯವನ್ನು ಐದು ಶ್ಲೋಕಗಳಲ್ಲಿ ಕೀರ್ತಿಸಲಿದ್ದಾನೆ.
40.ನೇಹಾಭಿಕ್ರಮನಾಶೋಽಸ್ತಿ ಪ್ರತ್ಯವಾಯೋ ನ ವಿದ್ಯತೇ।
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್॥
ಇಹ = ಈ ನಿಷ್ಕಾಮ ಕರ್ಮಯೋಗದಲ್ಲಿ, ಅಭಿಕ್ರಮನಾಶಃ = ಆರಂಭಿಸಿದ ಕೆಲಸವು ಕೆಟ್ಟುಹೋಗುವುದೆಂಬುದು, ನ-ಅಸ್ತಿ = ಇಲ್ಲ. ಪ್ರತ್ಯವಾಯಃ = ವ್ಯತಿರೇಕ ಫಲವು (ಕೂಡ), ನ ವಿದ್ಯತೇ = ಇಲ್ಲ. ಅಸ್ಯ = ಈ, ಧರ್ಮಸ್ಯ = ನಿಷ್ಕಾಮ ಕರ್ಮಯೋಗ ರೂಪವಾದ ಧರ್ಮಾಚರಣೆಯಲ್ಲಿ, ಸ್ವಲ್ಪಂ-ಅಪಿ = ಸ್ವಲ್ಪಭಾಗವು ಕೂಡ, ಮಹತಃ = ದೊಡ್ಡದಾದ, ಭಯಾತ್ = ಭಯದಿಂದ, ತ್ರಾಯತೇ = ರಕ್ಷಿಸುವುದು.
ಅರ್ಜುನನೆ! ಈ ನಿಷ್ಕಾಮ ಕರ್ಮಯೋಗದ ಮಹಿಮೆಯನ್ನು ವಿವರಿಸುವೆನು, ಕೇಳು. ಇದರ ಸಾಧನೆಯನ್ನು ಪ್ರಾರಂಭಿಸಿದರೆ, ಅದು ಮಧ್ಯದಲ್ಲಿ ಕೆಡುತ್ತದೆಂಬುದು ಇರುವುದಿಲ್ಲ. ಇದರಿಂದ ದುಷ್ಟಪಾರ್ಶ್ವ ಫಲಗಳು (ಸೈಡ್ ಎಫೆಕ್ಟ್ಸ್) ಆಗಲಿ, ವ್ಯತಿರೇಕ ಫಲಗಳಾಲಿ, ಇರುವುದಿಲ್ಲ. ಇದನ್ನು ಪರಿಪೂರ್ಣವಾಗಿ ಆಚರಿಸಲು ಆಗದೇ ಹೋದರೂ ಸ್ವಲ್ಪ ಆಚರಿಸಿದರೂ ಸರಿಯೇ. ಇದು ಮಹಾಭಯಪ್ರದವಾದ ಕರ್ಮಬಂಧಗಳಿಂದ ಜೀವಿಗಳಿಗೆ ವಿಮುಕ್ತಿಯನ್ನು ಉಂಟುಮಾಡುವುದು.
41. ವ್ಯವಸಾಯಾತ್ಮಿಕಾ ಬುದ್ಧಿಃ ಏಕೇಹ ಕುರುನಂದನ!।
ಬಹುಶಾಖಾ ಹ್ಯನಂತಾಶ್ಚ ಬುದ್ಧಯೋಽವ್ಯವಸಾಯಿನಾಮ್॥
ಕುರುನಂದನ = ಎಲೈ ಅರ್ಜುನನೆ!, ಇಹ = ಈ ಕರ್ಮಯೋಗದಲ್ಲಿ, ವ್ಯವಸಾಯಾತ್ಮಿಕಾ = ನಿಶ್ಚಯಾತ್ಮಕವಾದ, ಬುದ್ಧಿಃ = ಆಲೋಚನೆ, ಏಕಾ = ಒಂದೇ ಒಂದು ಇರುವುದು. ಅವ್ಯವಸಾಯಿನಾಂ = ಇಂತಹ ನಿಶ್ಚಯಬುದ್ಧಿ ಇಲ್ಲದಿರುವವರ, ಬುದ್ಧಯಃ = ಆಲೋಚನೆಗಳು, ಬಹುಶಾಖಾಃ = ಬಹುವಿಧವಾದ ಶಾಖೆಗಳಂತೆ, ಅನಂತಾಃ-ಚ = ಕೊನೆಯಿಲ್ಲದ ಶಾಖೆಗಳಂತೆ, ಹಿ = ಇರುತ್ತವೆಯಲ್ಲವೆ!
ಎಲೈ ಕುರುವಂಶದ ವೀರಕುಮಾರನೆ! ಸ್ವಕರ್ಮಾನುಷ್ಠಾನದ ಫಲಸಮರ್ಪಣರೂಪವಾದ ಕರ್ಮಯೋಗವು
“ಪರಮೇಶ್ವರನ ಭಕ್ತಿಯಿಂದ ನಾನು ತಪ್ಪದೆ ಕಾಯಲ್ಪಡುವೆನು” ಎಂಬ ಒಂದೇ ಒಂದು ಸ್ಥಿರವಾದ ನಿಷ್ಠೆ ಇರುವವರಿಗೆ ಮಾತ್ರವೇ ಸಾಧ್ಯವಾಗುವುದು. ಅದಕ್ಕಾಗಿಯೇ, ಈ ವಿಧವಾದ ಕರ್ಮಯೋಗವನ್ನು ಆಚರಿಸುವಾಗ, ಆಚರಿಸುವ ಕರ್ಮದಲ್ಲಿ ಸ್ವಲ್ಪ ಅಂಗವೈಕಲ್ಯವು ಏರ್ಪಟ್ಟರೂ, ಯೋಗಫಲವು ಭಗ್ನವಾಗದು. ಹೀಗಲ್ಲದೆ ಸಕಾಮಬುದ್ಧಿಯಿಂದ ಕರ್ಮಾಚರಣೆ ಮಾಡುವವರಿಗೆ ಇಂತಹ ಈಶ್ವರ ವಿಶ್ವಾಸರೂಪವಾದ ಸ್ಥಿರನಿಶ್ಚಯವು ಇರುವುದಿಲ್ಲ. ಅದಕ್ಕಾಗಿಯೇ ಅವರ ಆಲೋಚನೆಗಳು ಬಹುಶಾಖೆಗಳಾಗಿ ಸೀಳಿಹೋಗಿ, ಅನಂತ ಮುಖಗಳಾಗಿ ಸಾಗಿಹೋಗುತ್ತಿರುತ್ತವೆ. ಆದಕಾರಣ, ಅಂತಹ ಸಕಾಮ ಕರ್ಮಗಳಲ್ಲಿ, ಅಂಗವೈಕಲ್ಯವು ಸಂಭವಿಸಿದಾಗ, ಕರ್ತನಿಗೆ ಕೆಟ್ಟಪರಿಣಾಮಗಳು ತಪ್ಪುವುದಿಲ್ಲ. ಆದ್ದರಿಂದ ನೀನು ನಿಷ್ಕಾಮ ಕರ್ಮಾನುಷ್ಠಾನರೂಪವಾದ ಕರ್ಮಯೋಗವನ್ನು ಮಾತ್ರವೇ ಆಶ್ರಯಿಸು.
(ಮುಂದುವರೆಯುವುದು )
ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ