ಶ್ರೀ ಮದ್ಭಗವದ್ಗೀತಾ : 4
ಅವುಗಳಲ್ಲಿ ಕರ್ಮಯೋಗ ಸಾರವನ್ನು ಉಪದೇಶಿಸುವ ಶ್ಲೋಕವು ಹೀಗಿದೆ.
ಮನ್ಮನಾ ಭವ ಮದ್ಭಕ್ತಃ ಮದ್ಯಾಜೀ ಮಾಂ ನಮಸ್ಕುರು!
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ||
(.. 18-65)
(ಅರ್ಜುನನೆ! ನೀನು ನನಗೆ ಬಹಳ ಪ್ರಿಯನು. ಅದಕ್ಕಾಗಿಯೇ ಸತ್ಯಪ್ರತಿಜ್ಞೆಮಾಡಿ, ಈ ಮಾತನ್ನು ಹೇಳುತ್ತಿರುವೆ. ನಿನ್ನ ಮನಸ್ಸನ್ನು ಯಾವಾಗಲೂ ನನ್ನ ಮೇಲೆಯೇ ನಿಲ್ಲಿಸಿ ಇಟ್ಟುಕೋ. ಆ ನಿಲ್ಲಿಸುವುದನ್ನು ಪ್ರೀತಿಪೂರ್ವಕವಾಗಿ ನಿಲ್ಲಿಸು. ನಿನ್ನ ಸ್ವಧರ್ಮಗಳನ್ನು ನೀನು ಆಚರಿಸಿ, ಆ ಕರ್ಮಫಲಗಳಿಂದ ನನ್ನನ್ನು ಪೂಜಿಸು. ಹಾಗೆ ಕರ್ಮಫಲಗಳನ್ನು ಸಮರ್ಪಿಸುವಾಗ ಅಹಂಕಾರರಹಿತನಾಗಿ, ವಿನಯಭಾವದಿಂದ ನಮಸ್ಕರಿಸುತ್ತಾ ಸಮರ್ಪಿಸು. ಹಾಗೆ ಮಾಡಿದರೆ, ನೀನು ಸರ್ವವ್ಯಾಪಿ ಪರಮಾತ್ಮನಾದ ನನ್ನನ್ನೇ ಸೇರಿಕೊಳ್ಳುವೆ. ಇದು ಸತ್ಯ.)
ನಿಸ್ಸಂಗತ್ವ, ನಿರ್ವೈರತ್ವಗಳನ್ನು ಸಾಧಿಸಿಕೊಳ್ಳಲು ಬೇಕಾದ ಸೋಪಾನಗಳೇ ಕರ್ಮಯೋಗಕ್ಕೆ ಸಾರಾಂಶಸೂತ್ರಗಳು. ಅವುಗಳನ್ನು ಭಗವಂತನು ಈ ಶ್ಲೋಕಗಳಲ್ಲಿ 4 ಸೋಪಾನಗಳಾಗಿ ಪ್ರದರ್ಶಿಸುತ್ತಿದ್ದಾನೆ.
1 . ಮನ್ಮನಾಃ :-
ಪರಮಾತ್ಮನ ಮೇಲೆ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದು ಧ್ಯಾನಯೋಗಕ್ಕೆ ಸಾರವು.
2 . ಮದ್ಭಕ್ತಃ :-
ಭಗವಂತನ ಮೇಲೆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕು. ಕಂಸಾದಿಗಳಿಗೆ ಭಗವಂತನ ಮೇಲೆ ಏಕಾಗ್ರತೆ ಬಂತೇ ಹೊರತು, ಅದು ದ್ವೇಷದಿಂದ ಬಂದಿತು. ಅಂತಹ ವಿಧಾನಗಳು ಕೆಲಸಕ್ಕೆ ಬಾರವು. ಪ್ರೀತಿಯಿಂದ ಮಾತ್ರವೇ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ಇದು ಭಕ್ತಿಯೋಗಕ್ಕೆ ಸಾರವು.
3 . ಮದ್ಯಾಜೀ :-
ಕರ್ಮಫಲಸಮರ್ಪಣೆ ಮಾಡಬೇಕು. ಯುದ್ಧಮಾಡುವ ಸೈನಿಕನು “ನಾನು ಗೆದ್ದೆನು” ಎಂದು ಹೇಳುವುದಿಲ್ಲ. “ನನ್ನ ದೇಶವು ಜಯಿಸಿತು” ಎನ್ನುತ್ತಾನೆ. ಈ ಕರ್ಮಫಲ ಸಮರ್ಪಣೆಯೇ ನಿಜವಾದ ಪೂಜೆ. ಇದೇ ನಿಜವಾದ ಯಾಗವು. ಇದು ಕರ್ಮಯೋಗಕ್ಕೆ ಸಾರವು.
4 . ಮಾಂ ನಮಸ್ಕುರು :-
ಮತ್ತೆ ಮತ್ತೆ ಬಿದ್ದು ನಮಸ್ಕಾರಗಳನ್ನು ಮಾಡುತ್ತಾ ಇರುವುದೆಂಬುದು ಭಕ್ತಿಮಾರ್ಗದಲ್ಲಿ ಒಂದು ಮುಖ್ಯಸೂತ್ರ. ಅದು ನಿಜವೇ ಆದರೂ, ನಮಸ್ಕಾರಗಳನ್ನು ಮಾಡುವುದರ ಹಿಂದೆ ಇರುವ ಸೂತ್ರವೇನೆಂದು ಆಲೋಚಿಸಿದರೆ ಅಹಂಕಾರ ಪರಿತ್ಯಾಗವೇ ನಮಸ್ಕಾರಗಳಿಗೆ ಸಾರವೆಂದು ನಮಗೆ ಅರ್ಥವಾಗುತ್ತದೆ. ಇಲ್ಲಿ ‘ನಮಸ್ಕುರು’ ಎಂಬ ಪದವು ಅಹಂಕಾರ ಪರಿತ್ಯಾಗವನ್ನೂ, ಕರ್ತೃತ್ವಭಾವನಾ ಪರಿತ್ಯಾಗವನ್ನೂ ನಿರ್ದೇಶಿಸುತ್ತಿದೆ. ಅದಕ್ಕಾಗಿಯೇ ಇದು ಕೊನೆಯ ಸೋಪಾನವಾಗಿ ನಿಲ್ಲುತ್ತಿದೆ. ಇದು ಸಾಂಖ್ಯಯೋಗಕ್ಕೆ ಪೂರ್ವಾಂಗವೆಂದು ನಾವು ಗುರುತಿಸಬೇಕು.
ಜೀವನಶೈಲಿಯಲ್ಲಿ ಸಾನುಕೂಲವಾದ ಪರಿವರ್ತನೆ ಇಲ್ಲದೆ ಆಧ್ಯಾತ್ಮಿಕ ಜೀವನದೊಳಗೆ ಕಾಲಿಡುವುದು ಅಸಂಭವ. ಅದಕ್ಕಾಗಿಯೇ ಇವುಗಳಿಗೆ ಭಗವಂತನು ಈ ಗ್ರಂಥದಲ್ಲಿ ಪ್ರಾಧಾನ್ಯವನ್ನು ಕೊಟ್ಟು ಸಾಕಷ್ಟು ಕಡೆ ಪುನರುಕ್ತಿ ಮಾಡಿದ್ದಾನೆ. ಜೀವನಶೈಲಿ ಎಂಬುವುದು ಜೀವನದ ಎಲ್ಲಾ ದಶೆಗಳಲ್ಲಿಯೂ ವಿವಿಧ ರೀತಿಗಳಲ್ಲಿ ವಿಕಾಸಗೊಳ್ಳುತ್ತಲೇ ಇರುತ್ತದೆ. ಆದ್ದರಿಂದ ಬಾಲ್ಯದಶೆಯಿಂದಲೇ ಭಗವಂತನು ಹೇಳಿದ ಜೀವನಶೈಲಿಯ ಸೂತ್ರಗಳು, ಆಯಾ ಸನ್ನಿವೇಶಗಳಿಗೆ ಅನುಗುಣವಾಗಿ ಅನ್ವಯಿಸುತ್ತಿರುತ್ತವೆ. ಅದಕ್ಕಾಗಿಯೇ ಭಗವದ್ಗೀತಾ ಸೂತ್ರಗಳನ್ನು ಸರಳ ಸುಂದರವಾದ ರೀತಿಯಲ್ಲಿ ತಮ್ಮ ಮಕ್ಕಳಿಗೆ ಕೊಡಬೇಕಾದ ಬಾಧ್ಯತೆಯು ಗೃಹರಾಜ್ಯದಲ್ಲಿನ ದಂಪತಿಗಳಿಬ್ಬರ ಮೇಲೂ ಇರುತ್ತದೆ.
ಪ್ರಾಥಮಿಕ ಜೀವನಶೈಲೀ ಸೂತ್ರಗಳಲ್ಲಿ ಭಕ್ತಿ ಎಂಬುದು ಇತರ ಎಲ್ಲಾ ಸೂತ್ರಗಳಿಗೂ ಪುಷ್ಟಿಯನ್ನು ಉಂಟುಮಾಡುತ್ತದೆ. ಆದ್ದರಿಂದ, ಅದನ್ನು ಬಾಲ್ಯದಶೆಯಲ್ಲಿಯೇ ಮಾನವರು ಅಭ್ಯಾಸಮಾಡುವುದನ್ನು
ಪ್ರಾರಂಭಿಸಬೇಕು. ಅದಕ್ಕಾಗಿಯೇ ಭಗವದ್ಗೀತೆಯು ಭಕ್ತಿ ಪ್ರಾಧಾನ್ಯವನ್ನು ಅನೇಕ ಸ್ಥಳಗಳಲ್ಲಿ ಒತ್ತಿ ಹೇಳುತ್ತಿದೆ.
ಅದಕ್ಕಾಗಿಯೇ ಈ ತೃತೀಯಸಾರಸೂತ್ರದಲ್ಲಿ ಕೂಡಾ ಭಗವದ್ಭಕ್ತಿಯ ವಿವಿಧ ರೂಪಗಳು ಸೋಪಾನಗಳಾಗಿ ದರ್ಶನಕೊಡುತ್ತಿವೆ. ಹಾಗಾದರೆ, “ಈ ಭಕ್ತಿಯು ಅದೈತಪರವಾಗಿ ಇರಬೇಕೋ ? ದ್ವೈತಪರವಾಗಿ ಇರಬೇಕೋ, ಮಧ್ಯಮಾರ್ಗವಾದ ವಿಶಿಷ್ಟಾದ್ವೈತಪರವಾಗಿ ಇರಬೇಕೋ? ಅಥವಾ ಇನ್ನಾವುದಾದರೂ ಸಿದ್ಧಾಂತಪರವಾಗಿ ಇರಬೇಕೋ?” ಎಂಬ ಚರ್ಚೆಗಳು ಬಹಳಷ್ಟು ಇವೆ. ಆದರೆ, ಯಾರು ಯಾವ ವಿಧವಾಗಿ ಉಪಾಸನೆಯನ್ನು ಮಾಡಿದರೂ ಸರಿಯೇ. ತಾನು ಲಭಿಸುತ್ತೇನೆಂದು ಭಗವಂತನು 9ನೆಯ ಅಧ್ಯಾಯದಲ್ಲಿ ವಿಸ್ಪಷ್ಟವಾಗಿ ಸಿದ್ಧಾಂತೀಕರಿಸಿದ್ದಾನೆ.
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ