ಶ್ರೀ ಮದ್ಭಗವದ್ಗೀತಾ : 25
6. ನ ಚೈತದ್ವಿದ್ಮಃ ಕತರನ್ನೋ ಗರೀಯಃ
ಯದ್ವಾ ಜಯೇಮ ಯದಿ ವಾ ನೋ ಜಯೇಯುಃ।
ಯಾನೇವ ಹತ್ವಾ ನ ಜಿಜೀವಿಷಾಮಃ
ತೇಽವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ॥
ಕತರತ್ = ಭಿಕ್ಷಾಟನೆ, ಯುದ್ಧ ಎಂಬ ಈ ಎರಡರಲ್ಲಿ ಯಾವುದು, ನಃ = ನಮಗೆ, ಗರೀಯಃ = ಹೆಚ್ಚಿನ ಶ್ರೇಯಸ್ಸನ್ನುಂಟುಮಾಡುವುದೋ, ಏತತ್ = ಈ ವಿಷಯವನ್ನು, ನ-ಚ-ವಿದ್ಮಃ = ನಾವು ಅರಿಯದೆ ಇರುವೆವು. ಜಯೇಮ ಯತ್ ವಾ = ಅವರನ್ನು ನಾವು ಗೆಲ್ಲುವೆವೋ, ಯದಿ-ವಾ = ಅಥವಾ, ನಃ = ನಮ್ಮನ್ನು, ಜಯೇಯುಃ = ಅವರೇ ಗೆಲ್ಲುವರೋ, (ಏತತ್-ಚ-ನ-ವಿದ್ಮಃ = ಇದು ಕೂಡಾ ಅರಿಯೆವು.) ಯಾನ್ = ಯಾರನ್ನು, ಹತ್ವಾ = ಕೊಂದು, ನ-ಜಿಜೀವಿಷಾಮಃ = ಬಾಳಬೇಕೆಂದು ಬಯಸುವುದಿಲ್ಲವೋ, ತೇ = ಅಂತಹ, ಧಾರ್ತರಾಷ್ಟ್ರಾಃ-ಏವ = ಧೃತರಾಷ್ಟ್ರನ ಪಕ್ಷದವರೇ, ಪ್ರಮುಖೇ = ಎದುರಿಗೆ, ಅವಸ್ಥಿತಾಃ = ನಿಂತಿದ್ದಾರೆ.
ಓ ಶ್ರೀಕೃಷ್ಣನೇ! ಉತ್ತಮೋತ್ತಮ ಧರ್ಮವೆಂದು ಸಂನ್ಯಾಸ ಮಾರ್ಗದಲ್ಲಿ ಹೋಗುವುದು ಒಳ್ಳೆಯದೋ, ಕ್ಷತ್ರಿಯಧರ್ಮವೆಂದು ಯುದ್ಧಕ್ಕೆ ಇಳಿಯುವುದೇ ಒಳ್ಳೆಯದೋ, ಈ ಎರಡರಲ್ಲಿ ಯಾವುದು ಹೆಚ್ಚು ಪ್ರಶಸ್ತವೋ ನನಗೆ ಗೊತ್ತಾಗುತ್ತಿಲ್ಲ. ಅದು ಮಾತ್ರವಲ್ಲದೆ, ನಾವೇ ಗೆಲ್ಲುವೆವೋ, ಅವರೇ ಗೆಲ್ಲುವರೋ ಎಂಬುದು ಕೂಡಾ ತಿಳಿಯದು. ಆದರೆ, ಯಾವ ಹಿರಿಯರನ್ನು ಕೊಂದು ನಾವು ಜೀವಿಸಲಾರೆವೋ, ಅಂತಹ ಹಿರಿಯರೆಲ್ಲರೂ ಈ ಧೃತರಾಷ್ಟ್ರನ ಪಕ್ಷದಲ್ಲಿ ಸೇರಿ ನಮಗೆ ಪ್ರತಿಪಕ್ಷದವರಾಗಿ ಯುದ್ಧಕ್ಕೆ ಸಿದ್ಧವಾಗಿ ನಿಂತಿರುವರು.
ಅವತಾರಿಕೆ:
ಇನ್ನು ಅರ್ಜುನನು ಮುಚ್ಚುಮರೆ ಇಲ್ಲದೆ ಶಿಷ್ಯನಾಗಿ ಶ್ರೀಕೃಷ್ಣನನ್ನು ಬೇಡುತ್ತಿದ್ದಾನೆ.
7. ಕಾರ್ಪಣ್ಯ ದೋಷೋಪಹತ ಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮ ಸಮ್ಮೂಢ ಚೇತಾಃ।
ಯಚ್ಛ್ರೇಯ ಸ್ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇಽಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್॥
ಕಾರ್ಪಣ್ಯದೋಷಾಪಹತ ಸ್ವಭಾವಃ = ದೈನ್ಯವೆಂಬ ದೋಷದಿಂದ ಹಿಡಿಯಲ್ಪಟ್ಟ ಮನಸ್ಸುಳ್ಳವನಾಗಿ, ಧರ್ಮಸಮ್ಮೂಢಚೇತಾಃ = ಧರ್ಮ ವಿಷಯದಲ್ಲಿ ಮೋಹದಲ್ಲಿ ಮುಳುಗಿದ ಚಿತ್ತವುಳ್ಳವನಾಗಿ, ತ್ವಾಂ = ನಿನ್ನನ್ನು, ಪೃಚ್ಛಾಮಿ = ಕೇಳುತ್ತಿದ್ದೇನೆ. ಮೇ = ನನಗೆ, ಯತ್ = ಯಾವುದು, ನಿಶ್ಚಿತಂ = ನಿಶ್ಚಯವಾಗಿ, ಶ್ರೇಯಃ = ಶ್ರೇಯಸ್ಕರವು, ಸ್ಯಾತ್ = ಆಗುವುದೋ, ತತ್ = ಅದನ್ನು, ಬ್ರೂಹಿ = ಹೇಳು. ಅಹಂ = ನಾನು, ತೇ = ನಿನಗೆ, ಶಿಷ್ಯಃ= ಶಿಷ್ಯನು. ತ್ವಾಂ = ನಿನ್ನನ್ನು, ಪ್ರಪನ್ನಂ = ಶರಣು ಹೊಕ್ಕಿರುವ, ಮಾಂ = ನನ್ನನ್ನು, ಶಾಧಿ = ಶಾಸಿಸು. (ಆಜ್ಞಾಪಿಸು.)
ಓ ಶ್ರೀಕೃಷ್ಣನೇ! ನನ್ನ ಮನಸ್ಸಿಗೆ ದೈನ್ಯವೆಂಬ ದೋಷವು ಹಿಡಿದುಕೊಂಡಿದೆ. ಆದ್ದರಿಂದ, ಸಹಜವಾಗಿ ಸುಸ್ಥಿರವಾದ ನನ್ನ ಸ್ವಭಾವವು ಮಲಿನವಾಗಿಹೋಗಿದೆ. ಆದಕಾರಣ, ಧರ್ಮದ ವಿಷಯದಲ್ಲಿ ಎತ್ತಲೂ ತೀರ್ಮಾನಿಸಲಾಗದೇಹೋಗುತ್ತಿದ್ದೇನೆ. ಸಂನ್ಯಾಸಧರ್ಮ, ಯುದ್ಧಧರ್ಮ ಎಂಬ ಈ ಎರಡರಲ್ಲಿ ಯಾವುದು ನನಗೆ ನಿಶ್ಚಯವಾಗಿ ಒಳ್ಳೆಯದನ್ನು ಮಾಡುವುದೋ, ಅದನ್ನು ನಿಶ್ಚಯಿಸಿ ನನಗೆ ಹೇಳು. ಏಕೆಂದರೆ ನಾನು ನಿನಗೆ ಶಿಷ್ಯನಾಗಿ ನಿನ್ನನ್ನು ಶರಣು ಹೊಕ್ಕುತ್ತಿದ್ದೇನೆ. ನನ್ನ ಕರ್ತವ್ಯವೇನೆಂಬುದನ್ನು ನೀನೇ ಆಜ್ಞಾಪಿಸು. (ನನಗೆ ತಿಳಿವಳಿಕೆಯನ್ನು ಹೇಳು. )
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ