ಶ್ರೀ ಮದ್ಭಗವದ್ಗೀತಾ : 18
30.ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ಚೈವ ಪರಿದಹ್ಯತೇ।
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ।।
ಹಸ್ತಾತ್ = ಕೈಯಿಂದ, ಗಾಂಡೀವಂ = ಗಾಂಡೀವವೆಂಬ ಹೆಸರಿನ ದಿವ್ಯಧನುಸ್ಸು, ಸ್ರಂಸತೇ = ಜಾರಿಹೋಗುತ್ತಿದೆ. ತ್ವಕ್-ಚ-ಏವ = ಚರ್ಮವೂ, ಪರಿದಹ್ಯತೇ = ಸುಡುತ್ತಿದೆ. ಅವಸ್ಥಾತುಂ-ಚ = ನಿಲ್ಲಲು ಕೂಡ, ನ-ಶಕ್ನೋಮಿ = ಸಮರ್ಥನಾಗಲು ಆಗುತ್ತಿಲ್ಲ. ಮೇ = ನನ್ನ, ಮನಃ = ಮನಸ್ಸು, ಭ್ರಮತಿ-ಇವ-ಚ = ತೊಳಲುವಂತೆ ಆಗಿದೆ.
ಕೈಯಿಂದ ಗಾಂಡೀವ ಧನುಸ್ಸು ಜಾರಿಹೋಗುತ್ತಿದೆ. ಮೈಯೆಲ್ಲ ಸುಡುತ್ತಿದೆ ಎಂಬಂತೆ ಇದೆ. ನನಗೆ ನಿಂತುಕೊಳ್ಳಲೂ ಆಗುತ್ತಿಲ್ಲ. ನನ್ನ ಮನಸ್ಸು ಗಿರ್ರೆಂದು ತಿರುಗುತ್ತಿರುವಂತೆ ಇದೆ.
31.ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ|
ನ ಚ ಶ್ರೇಯೋಽನುಪಶ್ಯಾಮಿ ಹತ್ವಾ ಸ್ವಜನಮಾಹವೇ।।
ಕೇಶವಾ = ಓ ಶ್ರೀಕೃಷ್ಣನೆ!, ವಿಪರೀತಾನಿ = ವಿರುದ್ಧವಾದ, ನಿಮಿತ್ತಾನಿ ಶಕುನಗಳನ್ನು, ಪಶ್ಯಾಮಿ-ಚ = ನೋಡುತ್ತಿದ್ದೇನೆ ಕೂಡ. ಆಹವೇ = ಯುದ್ಧದಲ್ಲಿ, ಸ್ವಜನಂ = ನನ್ನವರನ್ನು, ಹತ್ವಾ = ಕೊಂದು (ಕೊಲ್ಲುವುದರಿಂದ), ಶ್ರೇಯಃ ಶ್ರೇಯಸ್ಸನ್ನು, ನ-ಅನುಪಶ್ಯಾಮಿ-ಚ = ನಾನು ಕಾಣೆನು.
ಓ ಶ್ರೀಕೃಷ್ಣನೆ! ಪ್ರಕೃತಿಯನ್ನು ಪರಿಶೀಲಿಸಿ ನೋಡಲು ಎಲ್ಲಾ ಕಡೆಯೂ ವಿರುದ್ಧವಾದ ಸಂಕೇತಗಳೇ ಕಾಣುತ್ತಿವೆ. ಅವುಗಳಿಂದ ಎರಡು ಪಕ್ಷಗಳಲ್ಲಿಯೂ ಇರುವ ಬಂಧುವರ್ಗವು ನಶಿಸಿಹೋಗುವುದೆಂದು
ತೋರುತ್ತಿದೆ. ಹೀಗೆ ನಮ್ಮವರನ್ನು ನಾವೇ ಕೊಂದುಕೊಳ್ಳುವುದರಿಂದ ಆಗುವ ಶ್ರೇಯಸ್ಸಂತೂ ನನಗೆ ಕಾಣುತ್ತಿಲ್ಲ.
32.ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ।
ಕಿಂ ನೋ ರಾಜೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ।।
ಕೃಷ್ಣ = ಓ ಶ್ರೀಕೃಷ್ಣನೆ!, ವಿಜಯಂ = ಗೆಲುವನ್ನು, ನ-ಕಾಂಕ್ಷೆ = ನಾನು ಕೇಳೆನು. ರಾಜ್ಯಂ-ಚ = ರಾಜ್ಯವನ್ನೂ, ನ = ಕೋರೆನು. ಸುಖಾನಿ-ಚ = ಸುಖಗಳನ್ನೂ ನಾನು ಕೇಳೆನು. ಗೋವಿಂದ = ಓ ಶ್ರೀಕೃಷ್ಣನೆ!, ನಃ = ನಮಗೆ, ರಾಜ್ಯೇನ = ರಾಜ್ಯದಿಂದ, ಕಿಂ = ಏನು ಪ್ರಯೋಜನ ? ಭೋಗ್ಯ: = ಸುಖಭೋಗಗಳಿಂದಾಗಲಿ, ಜೀವಿತೇನ-ವಾ = ಜೀವಿಸಿ ಇರುವುದರಿಂದಾಗಲಿ, ಕಿಂ = ಏನು ಪ್ರಯೋಜನ ?
ಓ ಶ್ರೀಕೃಷ್ಣನೆ! ನನಗೆ ಈ ಯುದ್ಧದಲ್ಲಿ ವಿಜಯವು ಬೇಕಿಲ್ಲ. ರಾಜ್ಯವೂ ಬೇಕಿಲ್ಲ. ರಾಜ್ಯಸುಖಗಳೂ ಬೇಡ. ಜೀವಿಗಳೆಲ್ಲರಿಗೂ ಒಳ್ಳೆಯದನ್ನು ಮಾಡುವ ಗೋವಿಂದನೆ! ನಮ್ಮ ಬಂಧುಗಳೆಲ್ಲರೂ ಸತ್ತು ಹೋದಮೇಲೆ ನಮಗೆ ಈ ರಾಜ್ಯಗಳೇಕೆ ? ಈ ಭೋಗಗಳೇಕೆ ? ಅಥವಾ ನಾವು ಬದುಕಿರುವುದರಿಂದ ಏನಾಗಬೇಕಿದೆ? (ಗೋವುಗಳು ಅಂದರೆ ಜೀವಿಗಳು. ಅವರನ್ನು ಹೊಂದುವವನು ಅಂದರೆ ರಕ್ಷಿಸುವವನು ಗೋವಿಂದನು.)
33.ಯೇಷಾಮರ್ಥ್ಯ ಕಾಂಕ್ಷಿತಂ ನಃ ರಾಜ್ಯಂ ಭೋಗಾ ಸ್ಸುಖಾನಿ ಚ।
ತ ಇಮೇಽವಸ್ಥಿತಾ ಯುದ್ಧ ಪ್ರಾಣಾಂಸ್ಕೃಕ್ಕಾ ಧನಾನಿ ಚ।।
ಯೇಷಾಂ-ಅರ್ಥೇ = ಯಾರಿಗೋಸ್ಕರ, ನಃ = ನಮಗೆ (ನಮ್ಮಿಂದ), ರಾಜ್ಯಂ = ರಾಜ್ಯವೂ, ಭೋಗಾಃ = ಭೋಗಗಳೂ, ಸುಖಾನಿ-ಚ = ಸುಖಗಳೂ, ಕಾಂಕ್ಷಿತಂ= ಬೇಕೆನಿಸಿದವೋ, ತೇ = ಅಂಥ, ಇಮೇ = ಈ ಬಂಧುಗಳೆಲ್ಲರೂ, ಪ್ರಾಣಾನ್= ಪ್ರಾಣಗಳನ್ನೂ, ಧನಾನಿ-ಚ = ಸಂಪತ್ತುಗಳನ್ನೂ, ತ್ಯಕ್ತ್ವ= ಬಿಟ್ಟು, ಯುದ್ಧ = ಯುದ್ಧರಂಗದಲ್ಲಿ, ಅವಸ್ಥಿತಾಃ = ನಿಂತಿರುವರು.
ಯಾರಿಗೋಸ್ಕರ ನಾವು ಈ ರಾಜ್ಯವನ್ನೂ, ರಾಜ್ಯಭೋಗಗಳನ್ನೂ, ರಾಜ್ಯಸುಖಗಳನ್ನೂ, ಕೋರಿಕೊಳ್ಳುತ್ತಿರುವೆವೋ, ಅಂಥ ಈ ಆಪ್ತಬಂಧುಗಳೆಲ್ಲರೂ ತಮ್ಮ ಪ್ರಾಣಗಳು, ಸಂಪತ್ತುಗಳನ್ನು ಬಿಟ್ಟು ಯುದ್ಧರಂಗದಲ್ಲಿ ನಿಂತಿರುವರು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ