ಮೇಲುಕೋಟೆಯಲ್ಲಿ ಇಂದು ತೊಟ್ಟಿಲು ಮಡು ಜಾತ್ರೆ

mysorepathrike
Spread the love

 

ಇಂದು ಮೇಲುಕೋಟೆಯಲ್ಲಿ ತೊಟ್ಟಿಲು ಮಡಿಲು ಜಾತ್ರೆ ನಡೆಯಲಿದೆ. ಈ ಉತ್ಸವದ ವಿಶೇಷ ಎಂದರೆ ಬಹಳ ಕಾಲದಿಂದ ಮಕ್ಕಳಾಗದವರು ಅಥವ ಮದುವೆ ಆಗಿಲ್ಲದವರು ಹಿರಿಯರಿಂದ ಮುಡಿಪು ಕಟ್ಟಿಸಿಕೊಂಡು ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡಿ ಗಿರಿಪ್ರದಕ್ಷಿಣೆಯಿಂದ ಬೆಟ್ಟ ಹತ್ತಿ ಅಲ್ಲಿ ದೇವರ ನೈವೇದ್ಯ ಪೊಂಗಲ್ ಪ್ರಸಾದ ಸ್ವೀಕರಿಸುವುದರಿಂದ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಆಗುತ್ತದೆ. ಇದಕ್ಕೆ ಅಷ್ಟ ತೀರ್ಥ ಸ್ನಾನ ಎಂದು ಕರೆಯುತ್ತಾರೆ.
ಮೊದಲಿಗೆ ಚೆಲುವನಾರಾಯಣ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಚೆಲುವನಾರಾಯಣ ಸ್ವಾಮಿಯನ್ನು ಕಲ್ಯಾಣಿಗೆ ಕೊಂಡೊಯ್ದು ಅಲ್ಲಿ ತೀರ್ಥ ಸ್ನಾನವಾದ ನಂತರ ದೇವಸ್ಥಾನಕ್ಕೆ ವಾಪಸ್ಸು ಬಂದು ಅಲ್ಲಿ ಬಿಜಯ ಮಾಡುತ್ತಾರೆ. ಇದಾದ ನಂತರ ಕಠಾರಿಯನ್ನು ಮಾತ್ರ ದಕ್ಷಿಣದ ಇಲಿಯ ರಾಯಗೋಪುರದ ಮೂಲಕ ಬಿಜಯ ಮಾಡಲಾಗುತ್ತದೆ. ನಂತರ ಅಷ್ಟ ತೀರ್ಥ ಸ್ನಾನ ಉತ್ಸವ ಆರಂಭವಾಗುತ್ತದೆ.
ಮೊದಲು ದತ್ತಾತ್ರೇಯ ವೇದ ಪುಷ್ಕರಣಿ , ಧನುಷ್ಕೋಟಿ, ಯಾದವ ತೀರ್ಥ , ದರ್ಭ ತೀರ್ಥ , ಪಲಾಶ ತೀರ್ಥ, ಪದ್ಮ ತೀರ್ಥ , ಮೈತ್ರೇಯ ತೀರ್ಥ , ನಾರಾಯಣ ತೀರ್ಥ ಹಾಗು ವೈಕುಂಠ ಗಂಗೆ ಅಥವ ತೊಟ್ಟಿಲು ಮಡುವಿಗೆ ಕಠಾರಿಯನ್ನು ತರುತ್ತಾರೆ.
ಈ ಸ್ಥಳದ ವೈಶಿಷ್ಟ್ಯವೇನೆಂದರೆ ಹಿಂದೆ ತ್ರಿವಿಕ್ರಮಾವತಾರದಲ್ಲಿ ಬ್ರಹ್ಮನು ವಿಷ್ಣುವಿನ ಪಾದ ತೊಳೆದಾಗ ನೀರು ಶ್ರೀ ವೈಕುಂಠ ವಾಸಿಗಳಾದ ನಿತ್ಯ ಮುಕ್ತರ ವಿರಜಾ ನದಿ ನೀರಿಗೆ ಬಿದ್ದು ಆ ನೀರು ವೈಕುಂಠ ಗಂಗೆ ತೀರ್ಥಕ್ಕೆ ಬಿದ್ದಿತೆಂದು ಅಂದಿನಿಂದ ಇದು ವೈಕುಂಠ ಗಂಗೆ ಎಂದು ಹೆಸರು ಪಡೆದಿದೆ.
ಇದು ಒಂದು ಕಡೆ ತೊಟ್ಟಿಲಾಗಿ, ಮತ್ತೊಂದು ಕಡೆ ಮಡುವಾಗಿ ಪ್ರವಹಿಸುತ್ತದೆ. ( ಬೆಟ್ಟದ ಹಿಂದೆ ನದಿ ಹುಟ್ಟಿ ದಕ್ಷಿಣದಿಂದ ಪೂರ್ವಕ್ಕೆ ಹರಿಯುತ್ತದೆ. ) ಸುಮಾರು ಸಂಜೆಯ ವೇಳೆಗೆ ದೇವರ ಶ್ರೀ ಪಾದುಕೆ ಈ ಸ್ಥಳಕ್ಕೆ ಬಂದು ತಲುಪುತ್ತದೆ. ತೀರ್ಥ ಸ್ನಾನವಾದ ಬಳಿಕ ಕದಂಬ, ಮೊಸರನ್ನ ನೈವೇದ್ಯ ಮಾಡಿ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ. ಈ ಎಲ್ಲಾ ಉತ್ಸವಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಇದಕ್ಕೆ ತೊಟ್ಟಿಲು ಮಡು ಜಾತ್ರೆ ಎಂದೂ ಕರೆಯುತ್ತಾರೆ.
ಇದಾದ ನಂತರ ಗಿರಿ ಪ್ರದಕ್ಷಣಿ ಆರಂಭವಾಗುತ್ತದೆ. ಒಮ್ಮೆ ಯೋಗ ನರಸಿಂಹ ಬೆಟ್ಟಕ್ಕೆ ಗಿರಿ ಪ್ರದಕ್ಷಿಣೆ ಮಾಡಿದರೆ ಸಮಸ್ತ ಕ್ಷೇತ್ರವನ್ನು ಪ್ರದಕ್ಷಿಣೆ ಮಾಡಿದ ಫಲ ಸಿಗುತ್ತದೆ. ಪ್ರದಕ್ಷಿಣೆ ಹಾಗೂ ತೀರ್ಥ ಸ್ನಾವಾಗುವಾಗ ವೇದ ಮಂತ್ರ ಪಠನೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣಗಳು ನಡೆಯುತ್ತಿರುತ್ತದೆ.
ವರದಿ : ಟಿ ವಿ ಪದ್ಮ
ಮೇಲುಕೋಟೆ