ಗೀತೆ 9 : ಮಹಾಭಾರತ ನದಿ, ದುರ್ಯೋಧನ ಸುಳಿ, ಕೃಷ್ಣ ನಾವಿಕ, ಪಾಂಡವರು ?

Gita
Spread the love

ಶ್ರೀಮದ್ಭಗವದ್ಗೀತಾ : 9

5.ಭೀಷ್ಮದ್ರೋಣ ತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯ ಗ್ರಾಹವತೀ ಕೃಪೇಣವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮ ವಿಕರ್ಣ ಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ ||
ಮಹಾಭಾರತ ಯುದ್ಧವೆಂಬ ಮಹಾನದಿಯನ್ನು ಪಾಂಡವರು ದಾಟಿದರು. ಆ ನದಿಯು ಎಂತಹದ್ದೆಂದರೆ ಭೀಷ್ಮನು, ದ್ರೋಣನು ಎಂಬುವವರು, ಅದಕ್ಕೆ ಎರಡು ಕಡೆ ಇರುವ ತಟಗಳು. ಜಯದ್ರಥನೇ (ಸೈಂಧವನೇ) ಅದರಲ್ಲಿನ ನೀರು. ಗಾಂಧಾರೀ ಪುತ್ರರು ಅದರಲ್ಲಿನ ಕಪ್ಪು ನೈದಿಲೆಗಳು. ಶಲ್ಯನೇ ಅದರಲ್ಲಿರುವ ಕಾಲುಗಳನ್ನು ಸರಪಣಿಯಂತೆ ಹಿಡಿದುಕೊಳ್ಳುವ ಕ್ರೂರಜಲಜಂತುವು. ಕೃಪನು ಅದರ ಪ್ರವಾಹವೇಗವು. ಕರ್ಣನಿಂದ ಅದರ ತಟಗಳು ಅಲುಗಾಡಿ ಹೋಗುತ್ತಿವೆ. ಅಶ್ವತ್ಥಾಮನು, ವಿಕರ್ಣನು ಎಂಬುವವರು ಅದರಲ್ಲಿನ ಮೊಸಳೆಗಳು. ದುರ್ಯೋಧನನೇ ಅದರಲ್ಲಿನ ಸುಳಿಯು. ಅಂತಹ ಆ ಯುದ್ಧನದಿಯನ್ನು ಶ್ರೀಕೃಷ್ಣನೇ ನಾವಿಕನಾಗಿರುವುದರಿಂದ ಪಾಂಡವರು ದಾಟಿದರು.
6.ಪಾರಾಶರ್ಯವಚ ಸ್ಸರೋಜಮಮಲಂಗೀತಾರ್ಥಗಂಧೋತ್ಕಟಂ
ನಾನಾಖ್ಯಾನಕ ಕೇಸರಂ ಹರಿಕಥಾ ಸಂಬೋಧನಾ ಬೋಧಿತಮ್ ।
ಲೋಕೇ ಸಜ್ಜನ ಷಟ್ಪದೈರಹರಹಃ ಪೇಪೀಯಮಾನಂ ಮುದಾ
ಭೂಯಾದ್ಭಾರತಪಂಕಜಂ ಕಲಿಮಲ ಪ್ರಧ್ವಂಸಿ ನಃ ಶ್ರೇಯಸೇ||
ಮಹಾಭಾರತ ಗ್ರಂಥವು ಒಂದು ಪದ್ಮವು. ವ್ಯಾಸಮಹರ್ಷಿಯ ವಾಕ್ಕುಗಳು ಎಂಬ ಕೊಳದಿಂದ ಅದು ಹುಟ್ಟಿರುವುದು. ಅದು ನಿರ್ಮಲವಾದದ್ದು. ಭಗವದ್ಗೀತೆಯಲ್ಲಿನ ವಿಶೇಷಾರ್ಥಗಳೇ ಅದರಲ್ಲಿನ ಸುಗಂಧಗಳು. ಬಗೆಬಗೆಯಾದ ಚಿಕ್ಕ ಕಥೆಗಳೇ ಅದರಲ್ಲಿನ ಕಿಂಜಲ್ಕಗಳು (ಹೂವಿನ ಮಧ್ಯದಲ್ಲಿರುವ ರಜಸ್ಸು). ಶ್ರೀಹರಿಯ ಕಥೆಯಿಂದಲೂ, ಜ್ಞಾನಬೋಧೆಗಳಿಂದಲೂ ಅದು ಅರಳಿರುತ್ತದೆ. ಲೋಕದಲ್ಲಿರುವ ಸಜ್ಜನರೆಲ್ಲರೂ ದುಂಬಿಗಳಾಗಿ ಅದರ ರಸವನ್ನು ದಿನದಿನವೂ ಸಂತೋಷದಿಂದ ಪಾನಮಾಡುತ್ತಿದ್ದಾರೆ. ಅದು ಕಲಿದೋಷಗಳನ್ನು ಹೋಗಲಾಡಿಸುವ ಶಕ್ತಿಯುಳ್ಳದ್ದು. ಅಂತಹ ಮಹಾಭಾರತಗ್ರಂಥವೆಂಬ ಪದ್ಮವು ನಮಗೆ ಶ್ರೇಯಸ್ಸನ್ನು ಉಂಟುಮಾಡಲಿ!
7.ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||
ಆತನ ಕರುಣೆಯು ಮೂಕನನ್ನು ಮಹೋಪನ್ಯಾಸಕನನ್ನಾಗಿ ಮಾಡುತ್ತದೆ. ಕುಂಟನು ಬೆಟ್ಟಗಳನ್ನು ದಾಟುವಹಾಗೆ ಮಾಡುತ್ತದೆ. ಆತನೇ ಪರಮಾನಂದ ಸ್ವರೂಪನಾದ ಮಾಧವನು. ಆತನಿಗೆ ನಮಸ್ಕರಿಸುತ್ತಿದ್ದೇನೆ.
8.ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಮ್ । ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ।।
ಶಾಂತವಾದ ಸ್ವರೂಪ ಉಳ್ಳವನೂ, ಶೇಷತಲ್ಪದ ಮೇಲೆ ಪವಡಿಸಿರುವವನೂ, ನಾಭಿಯಲ್ಲಿ ಪದ್ಮ ಉಳ್ಳವನೂ, ದೇವತೆಗಳಿಗೆ ಈಶ್ವರನೂ, ಸಮಸ್ತವಿಶ್ವಕ್ಕೂ ಆಧಾರವಾದವನೂ, ಆಕಾಶದಂತೆ ಅತಿಸೂಕ್ಷ್ಮವಾದವನೂ, ನೀಲಮೇಘಗಳಂತಹ ಬಣ್ಣವುಳ್ಳವನೂ,
ಶುಭಪ್ರದವಾದ ಅವಯವಗಳುಳ್ಳವನೂ, ಲಕ್ಷ್ಮೀದೇವಿಯೊಂದಿಗೆ ಕೂಡಿ ಮನೋಹರವಾಗಿರುವವನೂ (ಲಕ್ಷ್ಮೀಪತಿಯೂ). ಪದ್ಮಗಳಂತಹ ಕಣ್ಣುಗಳಿರುವವನೂ, ಯೋಗಿಗಳ ಹೃದಯದಲ್ಲಿ ಸಂಸಾರಬಂಧಗಳೆಂಬ ಧ್ಯಾನಸಮಯಗಳಲ್ಲಿ ಕಾಣಿಸುವವನು, ಸಂಸಾರಬಂಧಗಳೆಂಬ ಭಯಗಳನ್ನು ಹೋಗಲಾಡಿಸುವವನೂ, ಸರ್ವಲೋಕಗಳಿಗೂ ಏಕೈಕನಾಥನೂ ಆದ. ಶ್ರೀಮಹಾವಿಷ್ಣುವಿಗೆ ನಮಸ್ಕರಿಸುತ್ತಿದ್ದೇನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ