ಶ್ರೀ ಮದ್ಭಗವದ್ಗೀತಾ : 14
12.ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ।
ಸಿಂಹನಾದಂ ವಿನದ್ಯೋಚೈಃ ಶಂಖಂ ದಧ್ಮೌ ಪ್ರತಾಪವಾನ್ ॥
ಪ್ರತಾಪವಾನ್ = ಪರಾಕ್ರಮವಂತನೂ, ಕುರುವೃದ್ಧಃ = ಕುರುವಂಶದಲ್ಲಿ ವೃದ್ಧನೂ ಆದ, ಪಿತಾಮಹಃ = ಭೀಷ್ಮಪಿತಾಮಹನು, ತಸ್ಯ = ಆ ದುರ್ಯೋಧನನಿಗೆ, ಹರ್ಷ೦ = ಹರ್ಷವನ್ನು, ಸಂಜನಯನ್ = ಉಂಟುಮಾಡುತ್ತಾ, ಉಚ್ಚಃ = ಗಟ್ಟಿಯಾಗಿ, ಸಿಂಹನಾದಂ = ಸಿಂಹನಾದವನ್ನು, ವಿನದ್ಯ = ಮಾಡಿ, ಶಂಖಂ = ಶಂಖವನ್ನು, ದಮ್ಮ = ಊದಿದನು.
ದುರ್ಯೋಧನನ ಡೋಲಾಯಮಾನ ವಾಕ್ಯಗಳನ್ನು ಕೇಳಿದ ಭೀಷ್ಮಪಿತಾಮಹನು ದುರ್ಯೋಧನನಿಗೆ ಸಂತೋಷವನ್ನುಂಟುಮಾಡಲು ಸೇನೆಯಲ್ಲಿ ಉತ್ತೇಜನವನ್ನು ಉಂಟುಮಾಡುತ್ತಾ ಗಟ್ಟಿಯಾಗಿ ಸಿಂಹನಾದವನ್ನು ಮಾಡಿ, ತನ್ನ ಶಂಖವನ್ನು ಜೋರಾಗಿ ಧ್ವನಿಗೈದನು.
(ದುರ್ಯೋಧನನ ದ್ವಂದ್ವಾರ್ಥಗಳು, ಮಾನಸಿಕ ಕಲ್ಲೋಲಗಳು ದ್ರೋಣಾಚಾರ್ಯನಿಗೂ, ಭೀಷ್ಮಪಿತಾಮಹನಿಗೂ ಚೆನ್ನಾಗಿ ಗೊತ್ತಾದವು. ಆದರೂ ಯುದ್ಧಧರ್ಮಕ್ಕೆ ಕಟ್ಟುಬಿದ್ದಿದ್ದರಿಂದ ಅವರು ದುರ್ಯೋಧನನಿಗೆ ಅನುಕೂಲವಾಗಿಯೇ ಸ್ಪಂದಿಸಿದರು.)
13.ತತ ಶೃಂಖಾಶ್ಚ ಭೇರ್ಯಶ್ಚ ಪಣವಾನಕ ಗೋಮುಖಾಃ|
ಸಹಸ್ಯೇವಾಭ್ಯಹನ್ಯಂತ ಸ ಶಬ್ದಸ್ತುಮುಲೋಭವತ್ ||
ತತಃ = ಆದ ಮೇಲೆ, ಸಹಸಾ-ಏವ = ತತ್ ಕ್ಷಣವೇ, ಶಂಖಾಃ-ಚ = ಶಂಖಗಳೂ, ಭೇರ್ಯ:-ಚ = ಭೇರಿಗಳೂ, ಪಣವಾನಕಗೋಮುಖಾಃ = ತಮಟೆ, ನಗಾರಿ, ದುಂದುಭಿಗಳೂ, ಅಭ್ಯಹನ್ಯಂತ = ಬಾರಿಸಲ್ಪಟ್ಟವು. ಸಃ-ಶಬ್ದಃ = ಆ ಧ್ವನಿಯು, ತುಮುಲಃ = ಬಹು ದೊಡ್ಡ ಗದ್ದಲವುಳ್ಳದ್ದು, ಅಭವತ್ = ಆಯಿತು.
ಸೇನಾಧಿಪತಿಯಾದ ಭೀಷ್ಮಪಿತಾಮಹನು ಸಿಂಹನಾದ, ಮಾಡಲು ಕೌರವಪಕ್ಷದ ವೀರರಲ್ಲರಿಗೂ ಯುದ್ಧದ ಆವೇಶವು ಹೆಚ್ಚಾಗಿ, ಕೂಡಲೇ ತಮ್ಮ ತಮ್ಮ ಶಂಖಗಳು, ಭೇರಿಗಳು, ತಾಳಗಳು, ತಮಟೆ, ನಗಾರಿ ದುಂದುಭಿಗಳು ಮೊದಲಾದ ಯುದ್ಧವಾದ್ಯಗಳೆಲ್ಲವನ್ನೂ ಭಯಾನಕವಾಗಿ ಬಾರಿಸಿದರು. ಅದರಿಂದ ಅಲ್ಲಿ ಮಹೋಗ್ರವಾದ ಧ್ವನಿ ಉಂಟಾಯಿತು.
ಅವತಾರಿಕೆ :
ಹೀಗೆ ಮೊದಲು ಧೃತರಾಷ್ಟ್ರನ ಪಕ್ಷದವರ ಕೃತ್ಯಗಳನ್ನು ಬಣ್ಣಿಸಿದ ಸಂಜಯನು, ಇನ್ನು ಪಾಂಡವ ಪಕ್ಷದವರ ಚರ್ಯೆಗಳು ಹೇಗಿದ್ದವೋ ಅದನ್ನು ವರ್ಣಿಸುತ್ತಿದ್ದಾನೆ.
14.ತತ ಶ್ವೇತೈರ್ಹಯ್ಕೆರ್ಯುಕ್ತ ಮಹತಿ ಸೈಂದನೇ ಸ್ಥಿತೌ।
ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದದ್ಮತುಃ||
ತತಃ = ಆ ಮೇಲೆ, ಶ್ವೇತೈಃ = ಬಿಳಿಯ, ಹಯ್ಕೆ: = ಕುದುರೆಗಳಿಂದ, ಯುಕ್ತೇ = ಕೂಡಿರುವುದೂ, ಮಹತಿ = ದೊಡ್ಡದೂ ಆದ, ಸ್ಯಂದನೇ = ರಥದಲ್ಲಿ, ಸ್ಥಿತೌ ಕುಳಿತಿದ್ದ, ಮಾಧವಃ = ಶ್ರೀಕೃಷ್ಣನೂ, ಪಾಂಡವಃ-ಚ-ಏವ = ಅರ್ಜುನನೂ, ದಿವ್ಯೌ = ದಿವ್ಯವಾದ, ಶಂಖೌ = ಶಂಖಗಳನ್ನು, ಪ್ರದದ್ಮತುಃ = ಊದಿದರು.
ಹೀಗೆ ಕೌರವಸೈನ್ಯದವರು ಶಂಖಗಳನ್ನು ಊದಿದ ಕೂಡಲೇ ಬಿಳಿಯ ಕುದುರೆಗಳನ್ನು ಕಟ್ಟಿದ ದೊಡ್ಡರಥದಲ್ಲಿ ಕುಳಿತಿದ್ದ ಶ್ರೀಕೃಷ್ಣಾರ್ಜುನರು ತಮ್ಮ ಕೈಗಳಲ್ಲಿದ್ದ ದೇವತಾವರಪ್ರಾಪ್ತಗಳಾದ ಶಂಖಗಳನ್ನು ಏಕಕಾಲದಲ್ಲಿ ಗಟ್ಟಿಯಾಗಿ ಊದಿದರು.
ಅವತಾರಿಕೆ :
ಇನ್ನು ಪಾಂಡವರ ಶಂಖನಾದಗಳನ್ನೇ ಮತ್ತಷ್ಟು ವರ್ಣಿಸುತ್ತಿದ್ದಾನೆ.
15.ಪಾಂಚಜನ್ಯಂ ಹೃಷೀಕೇಶಃ ದೇವದತ್ತಂ ಧನಂಜಯಃ।
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ||
16.ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ।
ನಕುಲ ಸಹದೇವಶ್ಚ ಸುಘೋಷ ಮಣಿಪುಷ್ಪಕೌ।।
ಹೃಷೀಕೇಶಃ = ಶ್ರೀಕೃಷ್ಣನು, ಪಾಂಚಜನ್ಯಂ = ಪಾಂಚಜನ್ಯವೆಂಬ ಹೆಸರಿನ ಶಂಖವನ್ನು: ಧನಂಜಯಃ = ಅರ್ಜುನನು, ದೇವದತ್ತಂ = ದೇವದತ್ತವೆಂಬ ಶಂಖವನ್ನು; ಭೀಮಕರ್ಮಾ * ಭಯಂಕರವಾದ ಕೆಲಸಗಳನ್ನು ಮಾಡುವ, ವೃಕೋದರಃ ಭೀಮನು, ಪೌಂಡ್ರಂ = ಪೌಂಡ್ರವೆಂಬ ಶಂಖವನ್ನು: ಕುಂತೀಪುತ್ರ: = ಕುಂತೀಪುತ್ರನೂ, ರಾಜಾ ರಾಜನೂ ಆದ, ಯುಧಿಷ್ಠಿರಃ = ಯುಧಿಷ್ಠಿರನು, ಅನಂತವಿಜಯಂ = ಅನಂತವಿಜಯವೆಂಬ ಹೆಸರಿನ: ಮಹಾಶಂಖಂ = ದೊಡ್ಡ ಶಂಖವನ್ನು, ದಧ್ಮೌ = ಊದಿದನು. ನಕುಲಃ ಸಹದೇವ-ಚ = ನಕುಲನು ಹಾಗೂ ಸಹದೇವನು, ಸುಘೋಷ ಮಣಿಪುಷ್ಪಕೌ = ಸುಘೋಷ ಮತ್ತು ಮಣಿಪುಷ್ಪಕವೆಂಬ ಹೆಸರಿನ ಮಹಾಶಂಖಗಳನ್ನು ಊದಿದರು.
ಆ ವಿಧದಲ್ಲಿ ಕೌರವರ ಯುದ್ಧ ಶಂಖಧ್ವನಿಗಳನ್ನು ಕೇಳಿದ ಕೂಡಲೇ, ಶ್ರೀಕೃಷ್ಣನು ಪಾಂಚಜನ್ಯವೆಂಬ ಶಂಖವನ್ನು, ಅರ್ಜನನು ದೇವದತ್ತವೆಂಬ ಶಂಖವನ್ನು, ಧರ್ಮರಾಜನು ಅನಂತವಿಜಯವೆಂಬ ಶಂಖವನ್ನು, ನಕುಲನು ಸುಘೋಷವೆಂಬ ಶಂಖವನ್ನು, ಸಹದೇವನು ಮಣಿಪುಷ್ಪಕವೆಂಬ ಶಂಖವನ್ನು ಧ್ವನಿಗೈದರು.
ಅವತಾರಿಕೆ :
ಇನ್ನು ಸಂಜಯನು ಪಾಂಡವಪಕ್ಷದ ಪ್ರಮುಖರ ಹೆಸರುಗಳನ್ನು ತಾನೇ ಹೇಳುತ್ತಾ, ಅವರ ಶಂಖನಾದಗಳನ್ನು ಕೂಡಾ ವರ್ಣಿಸಲಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
- * ಸಂಗ್ರಹ – ಭಾಲರಾ