ಗೀತೆ 5 : ಜ್ಞಾನವಿಲ್ಲದ ಭಕ್ತಿ, ಭಕ್ತಿ ಇಲ್ಲದ ಜ್ಞಾನ ರೆಕ್ಕೆ ಇಲ್ಲದ ಪುಕ್ಕದಂತೆ

Gita
Spread the love

ಶ್ರೀಮದ್ಭಗವದ್ಗೀತಾ 5 :

ಜ್ಞಾನಯಜ್ಞನ ಚಾಪ್ಯನ್ನೇ ಯಜಂತೋ ಮಾಮುಪಾಸತೇ ।
ಏಕತ್ವೇನ ಪೃಥಕ್ವೇನ ಬಹುಧಾ ವಿಶ್ವತೋಮುಖಮ್ ।।
(.. 9-15)

(ಅರ್ಜುನನೆ! ಸಾತ್ವಿಕ ಸಾಧಕರು ಕೆಲವರು ಪರಮಾತ್ಮನಿಗೆ ಸಂಬಂಧಿಸಿದ ಜ್ಞಾನವನ್ನು ಅನುಸಂಧಾನ ಮಾಡಿಕೊಳ್ಳುವುದೇ ಯಜ್ಞವೆಂದು ಭಾವಿಸಿ, ಅನೇಕ ವಿಧವಾದ ಜ್ಞಾನಯಜ್ಞಗಳಿಂದ ನನ್ನನ್ನು ಉಪಾಸನೆ ಮಾಡುತ್ತಿರುತ್ತಾರೆ. ಹೇಗೆಂದರೆ ಕೆಲವರು ಅದ್ವಿತೀಯನಾದ ಪರಮೇಶ್ವರನು, ತಾನೂ ಒಂದೇ ಎಂದು ಏಕತ್ವಭಾವನೆಯನ್ನು ಮಾಡುತ್ತಿರುತ್ತಾರೆ. ಕೆಲವರು ಆ ಪರಮೇಶ್ವರನೇ ವಿರಾಟ ರೂಪನೆಂದು ಗುರುತಿಸಿ, ಆತನಲ್ಲಿ ತಾನು ಒಂದು ಅಂಶವೆಂದು ಭಾವಿಸುತ್ತಿರುತ್ತಾರೆ. ಕೆಲವರು ಆ ಪರಮೇಶ್ವರನೇ ಬ್ರಹ್ಮ, ವಿಷ್ಣು, ಶಿವ, ದೇವೀ, ಗಣಪತಿ ಮೊದಲಾದ ರೂಪಗಳಲ್ಲಿ, ಭಿನ್ನಭಿನ್ನವಾಗಿ ಅಭಿವ್ಯಕ್ತವಾಗುತ್ತಿದ್ದಾನೆಂದು ಭಾವಿಸಿ, ತಾನು ತನ್ನ ಉಪಾಸ್ಯ ದೇವತೆಗೆ ದಾಸನೆಂಬ ಭೇದಭಾವನೆಯಿಂದ ಉಪಾಸನೆಯನ್ನು ಮಾಡುತ್ತಿರುತ್ತಾರೆ. ಹೀಗೆ ಉಪಾಸನಾ ಪ್ರಕ್ರಿಯೆಗಳು ಬಹುವಿಧವಾಗಿ ಇವೆ.) – ಎಂದು.
ಈ ಶ್ಲೋಕದಲ್ಲಿ ಏಕತ್ವಭಾವನೆಯನ್ನೂ, ಭಿನ್ನತ್ವಭಾವನೆಯನ್ನೂ, ಇವುಗಳ ಸಮ್ಮೇಳನಗಳಾದ ಬಹುಧಾ ಭಾವನೆಗಳನ್ನೂ ಕೂಡಾ ಭಗವಂತನು ಅಂಗೀಕರಿಸುತ್ತಿದ್ದಾನೆ. ಆದ್ದರಿಂದ ಯಾವ ಸಿದ್ದಾಂತವನ್ನು ಅನುಸರಿಸುವವರಾದರೂ ಸರಿಯೇ, ಭಗವದ್ಗೀತೆಯಲ್ಲಿ ಭಗವಂತನು ಉಪದೇಶಿಸಿದ ಸಾಧನಾಮಾರ್ಗಗಳನ್ನು ಅನುಸರಿಸಬಹುದು. ಬಹುಮುಖವಾಗಿ ಕಾಣಿಸುತ್ತಿರುವ, ಆ ಸಾಧನಾಮಾರ್ಗಗಳ ಸಂಗ್ರಹ ಸ್ವರೂಪವನ್ನು ನಾವು ಈಗ ಈ ಪಂಚಶ್ಲೋಕೀ ಭಗವದ್ಗೀತೆಯ ಮೂಲಕ ಅಧ್ಯಯನ ಮಾಡುತ್ತಿದ್ದೇವೆ.”ಭಗವದ್ಗೀತಾ ಪ್ರತಿಪಾದ್ಯನಾದ ಪರಮಾತ್ಮನು ಹರಿಸ್ವರೂಪನೋ? ಹರಸ್ವರೂಪನೋ? ದೇವಸ್ವರೂಪನೋ? ದೇವೀ ಸ್ವರೂಪನೋ?” ಎಂಬ ಚರ್ಚೆಯು ಕೂಡ ಭಗವಂತನಿಗೆ ಆಕಿಂಚಿತ್ಯರವು (ನಿರುಪಯೋಗವು ) ಎಂಬ ವಿಷಯವನ್ನು ಭಗವಂತನು ಸಾಕಷ್ಟು ಸಲ ಹೇಳಿದ್ದಾನೆ. ಉದಾಹರಣೆಗೆ 7ನೆಯ ಅಧ್ಯಾಯದಲ್ಲಿ ಆತನು ಏನು ಹೇಳಿರುವನೋ ನೋಡಿ –
ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾ೭ರ್ಚಿತುಮಿಚ್ಛತಿ।
ತಸ್ಯ ತಸ್ಯಾಚಲಾಂ ಶ್ರದ್ದಾಂ ತಾಮೇವ ವಿದಧಾಮ್ಯಹಮ್ ||
(.. 7-21)
(ಅರ್ಜುನನೆ! ಆಯಾ ದೇವತಾ ರೂಪಗಳನ್ನು, ಭಕ್ತಿಶ್ರದ್ಧೆಗಳಿಂದ ಆರಾಧಿಸಬೇಕೆಂದು ಕೇಳಿಕೊಳ್ಳುವ ಭಕ್ತರೊಂದಿಗೆ ನನಗೆ ವಿರೋಧವಿಲ್ಲ. ಏಕೆಂದರೆ, ಅವರು ಮೇಲ್ನೋಟಕ್ಕೆ ವಿಭಿನ್ನವಾಗಿ ಕಾಣಿಸುವ ದೇವತಾರೂಪಗಳನ್ನು ಆರಾಧನೆ ಮಾಡುತ್ತಿದ್ದರೂ ಆ ರೂಪಗಳಲ್ಲಿ ಅನುಸ್ಮೃತವಾಗಿರುವ ಅಂತರ್ಯಾಮಿಯು ನಾನೇ. ಅದಕ್ಕಾಗಿಯೇ ನಾನು ಅಂತಹ ಸಕಾಮಭಕ್ತರ ಭಕ್ತಿಶ್ರದ್ಧೆಗಳನ್ನು ತಡೆಯದೆ ಮತ್ತಷ್ಟು ಅಭಿವೃದ್ಧಿ ಮಾಡುತ್ತಿರುತ್ತೇನೆ) ಎಂದಿದ್ದಾನೆ.
ಇದರಿಂದ ಯಾರ ಅಭಿರುಚಿಗೆ ಅನುಕೂಲವಾದ ಯಾವ ದೇವತಾ ರೂಪವನ್ನು ಉಪಾಸಿಸುತ್ತಿದ್ದರೂ ಸರಿಯೇ, ಆ ಉಪಾಸನಾ ಸೂತ್ರಗಳು ಮಾತ್ರ ಗೀತಾಪ್ರೋಕ್ತವಾದ ಸಾಧನಾ ರೀತಿಗಳಿಗೆ ಅನುಗುಣವಾಗಿ ಇದ್ದರೆ ಸಾಕು ಎಂದು ಭಗವಂತನು ನಿರ್ದೇಶಿಸಿದ್ದಾನೆ.
ಆದ್ದರಿಂದ ಯಾರು ಯಾವ ವಿಧವಾದ ಉಪಾಸನೆಯನ್ನು ಮಾಡುತ್ತಿದ್ದರೂ ಸರಿಯೇ, ಅವರವರ ಪದ್ಧತಿಗಳಲ್ಲಿ ಯಾವುದನ್ನೂ ಬದಲಾಯಿಸಿಕೊಳ್ಳುವ ಆವಶ್ಯಕತೆ ಇಲ್ಲ. ಆದರೆ, ಕರ್ತೃತ್ವಾಹಂಕಾರ ರಾಹಿತ್ಯವೂ, ಫಲಕಾಂಕ್ಷಾರಾಹಿತ್ಯವೂ, ಸರ್ವಜೀವಿಗಳನ್ನು ಕುರಿತು ವೈರಭಾವರಾಹಿತ್ಯವೂ ಮೊದಲಾದ ಪ್ರಧಾನಸೂತ್ರಗಳಲ್ಲಿ ಮಾತ್ರ ಯಾರಿಗೂ ಯಾವ ವಿಧವಾದ ವಿನಾಯಿತಿ ಇಲ್ಲ.
ಇಲ್ಲಿ ನಾವು ಉದಹರಿಸಿಕೊಂಡ 9ನೆಯ ಅಧ್ಯಾಯದ ಶ್ಲೋಕದಲ್ಲಿ ಜ್ಞಾನಯಜ್ಞ ಪ್ರಸಕ್ತಿ ಇರುವುದು. ಇಂದಿನ ದಿನಗಳಲ್ಲಿ ಬಹಳಷ್ಟು ಜನ ಸಾಧನಾಮಾರ್ಗಗಳನ್ನು ಅನುಸರಿಸುವ ತಾಳ್ಮೆ ಇಲ್ಲದೆ ತಮ್ಮ ಸೋಮಾರಿತನವನ್ನು ಮುಚ್ಚಿಡಲು, ನಾವು ಜ್ಞಾನಮಾರ್ಗದಲ್ಲಿ ಇದ್ದೇವೆಂದು ದೊಡ್ಡದಾಗಿ ಹೇಳಿಕೊಳ್ಳುತ್ತಿರುತ್ತಾರೆ.
ಜ್ಞಾನಮಾರ್ಗಪ್ರಿಯರಾದವರು ತಿಳಿದುಕೊಳ್ಳಬೇಕಾದ ಮುಖ್ಯಾಂಶ ಒಂದು ಇರುವುದು. ನೀವು ಎಷ್ಟು ದೊಡ್ಡ ಮೇಧಾ ಬಲಸಂಪನ್ನರೇ ಆದರೂ ಸರಿಯೇ, ಭಕ್ತಿಸ್ಪರ್ಶ ಇಲ್ಲದ, ಕೇವಲ ಚರ್ಚೆಗಳಿಂದ ಪರಮತತ್ತ್ವವನ್ನು ಪಡೆದುಕೊಳ್ಳುವುದು ಅಸಾಧ್ಯ. ಹಾಗೆಯೇ ಭಕ್ತಿಮಾರ್ಗದಲ್ಲಿ ಇದ್ದೇವೆ ಎಂದುಕೊಳ್ಳುತ್ತಾ, ಒಂದು ದೇವತಾ ವಿಗ್ರಹವನ್ನೋ, ಮಂತ್ರವಾಕ್ಯವನ್ನೋ ನಂಬಿಕೊಂಡು, ಸಾಧನೆ ಮಾಡಿಕೊಳ್ಳುತ್ತಿರುವ ಭಕ್ತರು, ತಮ್ಮ ಭಕ್ತಿಯನ್ನು ಜ್ಞಾನಭಕ್ತಿಯಾಗಿ ವಿಕಾಸಮಾಡಿಕೊಳ್ಳದೇ ಪರಮಗಮ್ಯಕ್ಕೆ ಸೇರಿಕೊಳ್ಳುತ್ತೇವೆ ಎಂದುಕೊಳ್ಳುವುದು ಕೂಡಾ ದೋಷವೇ ಆಗುತ್ತದೆ. ಭಗವಂತನು 7ನೆಯ ಅಧ್ಯಾಯ, 16 ನೆಯ ಶ್ಲೋಕದಲ್ಲಿ ಆರ್ತಭಕ್ತಿ, ಜಿಜ್ಞಾಸುಭಕ್ತಿ, ಅರ್ಥಾರ್ಥಿಭಕ್ತಿ, ಜ್ಞಾನಿಭಕ್ತಿ ಎಂದು ಭಕ್ತರನ್ನು, ಅವರ ಭಕ್ತಿಯನ್ನು, ನಾಲ್ಕು ವಿಧವಾಗಿ ವಿಭಾಗಮಾಡಿ ಇವುಗಳಲ್ಲಿ ಜ್ಞಾನಭಕ್ತಿಯು ಸರ್ವಶ್ರೇಷ್ಠವಾದದ್ದೆಂದು ಅದೇ ಅಧ್ಯಾಯದ 17, 18, 19ನೇ ಶ್ಲೋಕಗಳಲ್ಲಿ ಒತ್ತಿ ಹೇಳಿದ್ದಾನೆ.
ಹಾಗಾಗಿ ಜ್ಞಾನಸ್ಪರ್ಶ ಇಲ್ಲದ ಭಕ್ತಿಯಾಗಲೀ, ಭಕ್ತಿ ಸ್ಪರ್ಶ ಇಲ್ಲದ ಜ್ಞಾನವಾಗಲೀ, ರೆಕ್ಕೆಗಳಿಲ್ಲದ ಪಕ್ಷಿಗಳಂತಹವು ಎಂದು ನಾವು ತಿಳಿದುಕೊಳ್ಳಬೇಕು. ಅದಕ್ಕಾಗಿಯೇ ನಮ್ಮ ಪಂಚಶ್ಲೋಕೀ ಭಗವದ್ಗೀತೆಯಲ್ಲಿ ಮೂರನೆಯ ಶ್ಲೋಕದಲ್ಲಿರುವ ಮೊದಲನೆಯ ಮೂರು ಸೋಪಾನಗಳಲ್ಲಿಯೂ, ಭಕ್ತಿಮಯವಾದ ಶರಣಾಗತಿಯನ್ನು ಪ್ರತಿಪಾದಿಸಿದ ಭಗವಂತನು ನಾಲ್ಕನೆಯ ಸೋಪಾನದಲ್ಲಿ ಜ್ಞಾನಸ್ಪರ್ಶೆಯಿಂದ ಕೂಡಿದ ಅಹಂಕಾರ ರಾಹಿತ್ಯವನ್ನು ಕುರಿತು ಹೇಳುತ್ತಿದ್ದಾನೆ.
ಹೀಗೆ ಭಕ್ತಿಮಾರ್ಗಪ್ರಬೋಧಕವಾದ ಈ ಶ್ಲೋಕದಲ್ಲಿ ಜ್ಞಾನಸ್ಪರ್ಶವನ್ನು ತೋರಿಸಿದ ಭಗವಂತನು, ಇನ್ನು ಮುಂಬರುವ ಶ್ಲೋಕದಲ್ಲಿ ಜ್ಞಾನಮಾರ್ಗೋಪದೇಶವನ್ನು ಮಾಡುತ್ತಾ, ಅದರಲ್ಲಿ ಭಕ್ತಿಯು ಅವಿಭಾಜ್ಯವೆಂದು ಪ್ರದರ್ಶಿಸಲಿದ್ದಾನೆ. ಇದೇ ಪಂಚಶ್ಲೋಕಿಯಲ್ಲಿ ನಾಲ್ಕನೆಯ ಸೂತ್ರ.
( ಮುಂದುವರೆಯುವುದು )

( ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ