ಶ್ರೀ ಮದ್ಭಗವದ್ಗೀತಾ : 6
ಇದೇ ಪಂಚಶ್ಲೋಕಿಯಲ್ಲಿ 4 ನೆಯ ಸೂತ್ರ.
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ।
ಅಹಂ ತ್ವಾ ಸರ್ವಪಾಪೇಭ್ಯಃ ಮೋಕ್ಷಯಿಷ್ಯಾಮಿ ಮಾ ಶುಚಃ।। (.. 18-66)
(ಅರ್ಜುನನೆ! ಧರ್ಮಾಧರ್ಮರೂಪಗಳಾದ ಸಮಸ್ತ ಕರ್ಮಗಳನ್ನೂ ಪರಿತ್ಯಜಿಸಿ, ಅದ್ವಿತೀಯನಾದ ನನ್ನನ್ನು ಸ್ವಾತ್ಮರೂಪದಿಂದ ಶರಣಾಗು. ಹಾಗೆ ಮಾಡಿದರೆ ನಿನ್ನನ್ನು ನಾನು ಸಂಸಾರಬಂಧಗಳನ್ನು ಉಂಟುಮಾಡುವ ಪಾಪಪುಣ್ಯಗಳಿಂದ ಬಿಡಿಸುವೆನು. ಆದ್ದರಿಂದ ನೀನು ದುಃಖಿಸಬೇಡ.) ಈ ಶ್ಲೋಕದಲ್ಲಿ ಭಗವಂತನು ಸರ್ವಕರ್ಮ ಪರಿತ್ಯಾಗವನ್ನೂ ಕರ್ಮಗಳನ್ನೂ
ಪುಣ್ಯಪಾಪ ಸರ್ವಪರಿತ್ಯಾಗವನ್ನೂ, ಅದರೊಂದಿಗೆ ಸರ್ವವ್ಯಾಪಕವಾದ ಅದ್ವಿತೀಯ ಪರಮಾತ್ಮನನ್ನು ಕುರಿತ ಶರಣಾಗತಿಯನ್ನು ಹೇಳಿದ್ದಾನೆ. ಆದ್ದರಿಂದ ಜ್ಞಾನಮಾರ್ಗದಲ್ಲಿಯೂ, ಕರ್ಮಮಾರ್ಗದಲ್ಲಿಯೂ ಕೂಡ ವಿಶ್ವವ್ಯಾಪಿಯಾದ ಪರಮಾತ್ಮನನ್ನು ಕುರಿತು ಶರಣಾಗತಿ ಭಾವವನ್ನು ಹೆಚ್ಚಿಸಿಕೊಳ್ಳಲೇಬೇಕು ಎಂದು ತಿಳಿಯುತ್ತಿದೆ.
ಆದರೆ, ಇದು ರಾಜರನ್ನೋ, ಧನಿಕರನ್ನೋ, ಶರಣುಬೇಡುವಂತಹದು ಅಲ್ಲ. ಈ ಶರಣಾಗತಿಯ ಹಿಂದೆ ಕಾಮನೆ ಇರುತ್ತದೆ. ವಿಶ್ವವ್ಯಾಪಿಯಾದ ಪರಮಾತ್ಮನನ್ನು ಕುರಿತು ಮಾಡುವ ಶರಣಾಗತಿಯಲ್ಲಿ ಅಂತಹ ಕಾಮನಾಸ್ಪರ್ಶಕ್ಕೆ ಅವಕಾಶವೇ ಇರುವುದಿಲ್ಲ.
”ತಸ್ಮಾದಸಕ್ತ ಸ್ವತತಂ”(3-19) ಎಂಬ ಶ್ಲೋಕದಲ್ಲಿ ಕರ್ತೃತ್ವಪರಿತ್ಯಾಗವು, ಕಾಮನಾಪರಿತ್ಯಾಗವು ಎಂಬುವುಗಳನ್ನು ಭಗವಂತನು ವಿಧಿಸಿದ್ದಾನೆ.
ಇವುಗಳನ್ನು ಸಾಧಿಸಲು ಉಪಾಯವಾಗಿ ಆತನು “ಮತ್ಕರ್ಮಕೃತ್ ಮತ್ಪರಮಃ” (11-55) ಎಂಬ ಶ್ಲೋಕವನ್ನು ಉಪದೇಶಿಸಿದ್ದಾನೆ. ಇದರಲ್ಲಿ ರಾಗದ್ವೇಷಗಳ ಪರಿತ್ಯಾಗವನ್ನು ವಿಧಿಸಿದ್ದಾನೆ.
ಇದನ್ನು ಸಾಧಿಸಲು ಉಪಾಯವಾಗಿ 18ನೆಯ ಅಧ್ಯಾಯದಲ್ಲಿನ 65,
66ನೇ ಶ್ಲೋಕಗಳನ್ನು ಆತನು ಉಪದೇಶಿಸಿದ್ದಾನೆ. ಇವುಗಳಲ್ಲಿ ‘ಮನ್ಮನಾ ಭವ ಮದ್ಭಕ್ತಃ” ಎಂಬ ಶ್ಲೋಕದಲ್ಲಿ ಭಕ್ತಿಗೆ ಜ್ಞಾನಸ್ಪರ್ಶ ಇರಬೇಕೆಂದು ಸೂಚಿಸಿದ್ದಾನೆ. “ಸರ್ವಧರ್ಮಾನ್ ಪರಿತ್ಯಜ್ಯ” ಎಂಬ ಶ್ಲೋಕದಲ್ಲಿ ಜ್ಞಾನವೆಂದರೆ ಗ್ರಂಥಪಠನವಲ್ಲವೆಂದೂ, ಪುಣ್ಯಾಪುಣ್ಯಗಳ ಪರಿತ್ಯಾಗವೇ ಎಂದು ಹೇಳುತ್ತಾ, ಅದಕ್ಕೆ ಭಕ್ತಿಯು ಆಲಂಬನೆಯಾಗಿ ಇರಬೇಕೆಂದು ಸೂಚಿಸಿದ್ದಾನೆ.
ಇಲ್ಲಿಗೆ ಭಗವದ್ಗೀತಾ ಸಾರವಾಗಿ ಭಗವಂತನು ಉಪದೇಶಮಾಡಿದ ನಾಲ್ಕು ಶ್ಲೋಕಗಳು ಸಮಾಪ್ತಿಯಾದವು.
ಇವುಗಳಲ್ಲಿ ಕರ್ಮಯೋಗ, ಸಾಂಖ್ಯಯೋಗಗಳು ಎರೆಡೂ ವಿಸ್ಪಷ್ಟವಾಗಿಯೇ ದರ್ಶನ ನೀಡುತ್ತಿವೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ