ಗೀತೆ – 28 : ಇರುವುದು ಸತ್, ಇಲ್ಲದಿರುವುದು ಅಸತ್

Gita
Spread the love

ಶ್ರೀ ಮದ್ಭಗವದ್ಗೀತಾ : 28

14. ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖದುಃಖದಾಃ। ಆಗಮಾಪಾಯಿನೋಽನಿತ್ಯಾಃ ತಾಂಸ್ತಿತಿಕ್ಷಸ್ವ ಭಾರತ॥

ಕೌಂತೇಯ = ಎಲೈ ಕುಂತೀಪುತ್ರನೇ!, ಭಾರತ = ಭರತವಂಶದಲ್ಲಿ ಹುಟ್ಟಿದವನೇ!, ಮಾತ್ರಾ ಸ್ಪರ್ಶಾಃ-ತು = ಇಂದ್ರಿಯಗಳಿಗೆ ಶಬ್ದ ಮುಂತಾದ ವಿಷಯಗಳೊಂದಿಗೆ ಆಗುವ ಸಂಬಂಧಗಳಾದರೆ, ಶೀತೋಷ್ಣಸುಖದುಃಖದಾಃ = ಚಳಿ-ಬಿಸಿ, ಸುಖ-ದುಃಖ, ಎಂಬುವುಗಳನ್ನು ಉಂಟುಮಾಡುತ್ತವೆ. ಆಗಮಾಪಾಯಿನಃ = ಆ ಶೀತೋಷ್ಣಗಳು, ಸುಖದುಃಖಗಳು ಬಂದುಹೋಗುವುದಾಗಿವೆ, ಅನಿತ್ಯಾಃ = ಮತ್ತು ಅಶಾಶ್ವತವಾದವುಗಳಾಗಿವೆ. ತಾನ್‌ = ಅವುಗಳನ್ನು (ಶೀತೋಷ್ಣಾದಿಗಳನ್ನು) ತಿತಿಕ್ಷಸ್ವ = ಸಹಿಸಿಕೋ. (ಸುಖದುಃಖಗಳನ್ನು ಹೊಂದಬೇಡ.)
ಎಲೈ ಅರ್ಜುನನೇ! ಪ್ರತಿಯೊಂದು ಜ್ಞಾನೇಂದ್ರಿಯಕ್ಕೂ ಒಂದೊಂದು ವಿಷಯವು ಇರುವುದು. ಉದಾಹರಣೆಗೆ ಚರ್ಮಕ್ಕೆ ಸ್ಪರ್ಶವೆಂಬುದು ವಿಷಯ. ಆ ಇಂದ್ರಿಯಕ್ಕೂ ಆ ವಿಷಯಕ್ಕೂ ಸಂಪರ್ಕವು ಉಂಟಾದಾಗ ಜೀವನಿಗೆ ಚಳಿ, ಬಿಸಿ ಮೊದಲಾದವು ಅನುಭವಕ್ಕೆ ಬಂದು, ಅದರ ಫಲವಾಗಿ ಸುಖವೋ, ದುಃಖವೋ ಉಂಟಾಗುತ್ತಾ ಇರುತ್ತದೆ. ಆದರೆ, ಯಾವ ಸಂಪರ್ಕವೂ ಶಾಶ್ವತವಾಗಿ ನಿಲ್ಲುವುದಿಲ್ಲ. ಆದ್ದರಿಂದ ಸುಖದುಃಖಗಳು ಕೂಡಾ ಶಾಶ್ವತವಾಗಿ ನಿಂತಿರುವುದಿಲ್ಲ. ಬಂದು ಹೋಗುತ್ತಿರುತ್ತವೆ. ಅವು ಅನಿತ್ಯಗಳು. ನಿತ್ಯನಾದ ನೀನು (ಅಂದರೆ ಜೀವನು) ಅನಿತ್ಯವಾದವುಗಳನ್ನು ಕುರಿತು ತಲೆ ಕೆಡಿಸಿಕೊಳ್ಳುವುದೇಕೆ? ಅವುಗಳನ್ನು ತಡೆದುಕೊಂಡು ಇರುವುದನ್ನು ಕಲಿತುಕೋ.

15. ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ। ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ॥

ಪುರುಷರ್ಷಭ = ಎಲೈ ಮಾನವರಲ್ಲಿ ಶ್ರೇಷ್ಠನೇ!, ಸಮದುಃಖ ಸುಖಂ = ಸಮಾನವಾದ ಸುಖದುಃಖಗಳು ಇರುವವನೂ (ಅಂದರೆ ಸುಖವನ್ನೂ, ದುಃಖವನ್ನೂ ಸಮಾನವಾಗಿ ನೋಡುವವನೂ), ಧೀರಂ = ಜ್ಞಾನವಂತನೂ ಆದ, ಯಂ = ಯಾವ, ಪುರುಷಂ = ಮಾನವನನ್ನು, ಏತೇ = ಈ ಶೀತೋಷ್ಣಾದಿಗಳು, ನ-ವ್ಯಥಯಂತಿ = ಬಾಧಿಸುತ್ತಿಲ್ಲವೋ, ಸಃ = ಅಂತಹವನು, ಅಮೃತತ್ವಾಯ = ಮೋಕ್ಷವನ್ನು ಪಡೆಯಲು, ಕಲ್ಪತೇ = ಸಮರ್ಥನಾಗುತ್ತಿದ್ದಾನೆ, ಹಿ = ಅಲ್ಲವೆ!

ಎಲೈ ಮಾನವಶ್ರೇಷ್ಠನಾದ ಅರ್ಜುನನೆೇ! ಸುಖದುಃಖಗಳನ್ನು ಸಮವಾಗಿ ನೋಡುವುದನ್ನು ಅಭ್ಯಾಸ ಮಾಡುವುದರಿಂದ ಯಾವ ಮಾನವನಾದರೆ ಶೀತೋಷ್ಣಾದಿಗಳ ಪೀಡೆಯಲ್ಲಿ ಬೀಳದೆ ಇರುವನೋ, ಹಾಗೆ ಬೀಳದೆ ಇರುವುದು ಕೂಡ ಮೊಂಡುತನದಿಂದಲ್ಲದೆ, ವಿಷಯೇಂದ್ರಿಯಗಳ ಸಂಪರ್ಕವು ಮೊದಲಾದವುಗಳ ಅನಿತ್ಯತ್ವದ ಜ್ಞಾನದಿಂದ ಸಿದ್ಧಿಸುವುದೋ, ಅಂತಹ ಮಾನವನು ನೇರವಾಗಿ ಮೋಕ್ಷವನ್ನು ಪಡೆಯಲು ಸಮರ್ಥನಾಗುತ್ತಿದ್ದಾನೆ.

16. ನಾಸತೋ ವಿದ್ಯತೇ ಭಾವಃ ನಾಭಾವೋ ವಿದ್ಯತೇ ಸತಃ।
ಉಭಯೋರಪಿದೃಷ್ಟೋಽಂತಃ ತ್ವನಯೋಸ್ತತ್ತ್ವದರ್ಶಿಭಿಃ॥
ಅಸತಃ = ಇಲ್ಲದಿರುವುದಕ್ಕೆ, ಭಾವಃ = ಇರುವಿಕೆಯು, ನ = ಇಲ್ಲ. ಸತಃ = ಇರುವುದಕ್ಕೆ, ಅಭಾವಃ = ಇಲ್ಲದಿರುವಿಕೆಯು, ನ-ವಿದ್ಯತೇ = ಇಲ್ಲ. ಅನಯೋಃ = ಈ, ಉಭಯೋಃ = ಇರುವಿಕೆ-ಇಲ್ಲದಿರುವಿಕೆಗಳು ಎಂಬ ಎರಡರ, ಅಂತಃ = ಯಥಾರ್ಥಸ್ವರೂಪ ನಿರ್ಣಯವು, ತತ್ತ್ವದರ್ಶಿಭಿಃ = ತತ್ತ್ವವೇತ್ತರಿಂದ, ದೃಷ್ಟಃ = ತಿಳಿದುಕೊಳ್ಳಲ್ಪಟ್ಟಿದೆ.
ಇಲ್ಲದುದಕ್ಕೆ ಇರುವಿಕೆಯು ಇಲ್ಲ. ಇರುವುದಕ್ಕೆ ಇಲ್ಲದಿರುವಿಕೆ ಎಂಬುದು ಇಲ್ಲ. (ಇರುವುದನ್ನು ಸತ್ ಎನ್ನುವರು. ಇಲ್ಲದಿರುವುದನ್ನು ಅಸತ್ ಎನ್ನುವರು.) ಹಾಗಾಗಿ ಈ ಸತ್-ಅಸತ್ ಎಂಬುವುಗಳ ನಿಜವಾದ ಸ್ವರೂಪವನ್ನು ತತ್ತ್ವವೇತ್ತರು ಮಾತ್ರ ತಿಳಿದುಕೊಳ್ಳಬಲ್ಲವರಾಗುತ್ತಿದ್ದಾರೆ.
ವಿವರಣೆ:
13ನೆಯ ಶ್ಲೋಕದಲ್ಲಿ ಸ್ಥೂಲದೇಹವು ನಿತ್ಯವಲ್ಲವೆಂದೂ, ಅಷ್ಟು ಮಾತ್ರವಲ್ಲದೆ, ಅದು ಆತ್ಮದ ನಿಜವಾದ ಸ್ವರೂಪವಲ್ಲವೆಂದೂ ನಿರೂಪಿಸಿದ್ದಾರೆ. 14ನೆಯ ಶ್ಲೋಕದಲ್ಲಿ ಇಂದ್ರಿಯರೂಪವಾದ ಸೂಕ್ಷ್ಮದೇಹವು ಕೂಡಾ ಆತ್ಮವಲ್ಲವೆಂದು ನಿರೂಪಿಸಿದ್ದಾರೆ. ಅದಕ್ಕಾಗಿಯೇ, ಅವುಗಳಿಂದ ಬಂದು ಹೋಗುತ್ತಿರುವ ಶೀತೋಷ್ಣಗಳನ್ನು ಸಹಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಆದರೆ, ಇನ್ನು “”ಶಾಶ್ವತವಾದ ಸತ್ಯವಾದ ಪದಾರ್ಥವೇನು ಇರುವುದು?” ಎಂಬ ವಿಷಯವನ್ನು ಹೇಳಬೇಕಾಗಿದೆ. ಇದು ತಿಳಿಯಬೇಕಾದರೆ, “ಸತ್ಯ’ ಎಂದರೆ ಏನು ಎಂಬುದನ್ನು ತಿಳಿಯಬೇಕಾಗಿದೆ. ಆದ್ದರಿಂದ, “”ಸತ್ಯ” ಎನ್ನುವುದನ್ನು ಭಗವಂತನು ಈ ಶ್ಲೋಕದಲ್ಲಿ ನಿರ್ವಚಿಸಿದ್ದಾನೆ.
ಅವತಾರಿಕೆ:
ಇನ್ನು ಈ ಸರ್ವವ್ಯಾಪಕ ಸತ್ಪದಾರ್ಥಕ್ಕೂ ನಮಗೂ (ಜೀವರಿಗೂ) ಇರುವ ಸಂಬಂಧವೆಂತಹದ್ದು ಎಂಬುದನ್ನು ತಿಳಿದುಕೊಳ್ಳುವುದರಿಂದ ನಮಗಾಗುವ ಪ್ರಯೋಜನವಾದರೂ ಏನು ಎಂಬುದನ್ನು ಬೋಧಿಸುವುದಕ್ಕಾಗಿ ಭಗವಂತನು ಹೇಳಲಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ