ಶ್ರೀ ಮದ್ಭಗವದ್ಗೀತಾ : 24
ಅರ್ಜುನ ಉವಾಚ:
4.ಕಥಂ ಭೀಷ್ಮಮಹಂ ಸಂಖ್ಯೆ ದ್ರೋಣಂ ಚ ಮಧುಸೂದನ!।
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ!॥
ಅರ್ಜುನಃ ಉವಾಚ = ಅರ್ಜುನನು ಹೇಳಿದನು. ಮಧುಸೂದನ ಮಧುವೆಂಬ ರಾಕ್ಷಸನನ್ನು ಸಂಹರಿಸಿದ ಶ್ರೀಕೃಷ್ಣನೇ!, ಅರಿಸೂದನ = ಎಲೈ ಶತ್ರು ಸಂಹಾರಕನೇ !, ಪೂಜಾರ್ಹೌ = ಪೂಜಿಸಲು ಅರ್ಹರಾದ, ಭೀಷ್ಮಂ = ಭೀಷ್ಮನನ್ನು, ದ್ರೋಣಂ-ಚ = ದ್ರೋಣಾಚಾರ್ಯನನ್ನು, ಸಂಖ್ಯೆ= ಯುದ್ಧದಲ್ಲಿ, ಅಹಂ = ನಾನು, ಕಥಂ = ಹೇಗೆ, ಇಷುಭಿಃ = ಬಾಣಗಳಿಂದ, ಪ್ರತಿಯೋತ್ಯಾಮಿ = ಎದುರಿಸಿ ಯುದ್ಧ ಮಾಡಬಲ್ಲೆ?
ಅರ್ಜುನನು ಹೇಳಿದನು:-
ಓ ಶ್ರೀಕೃಷ್ಣನೇ! ನೀನು ರಾಕ್ಷಸರನ್ನು ಸಂಹರಿಸಿದ್ದೀಯೆ. ಇನ್ನಿತರ ಶತ್ರುಗಳನ್ನೂ ಸಂಹರಿಸಿದ್ದೀಯೆ. ನಾನೀಗ ಯಾರನ್ನು ಸಂಹರಿಸಬೇಕಾಗಿ ಬರುತ್ತಿದೆಯೆಂದರೆ, ನನ್ನನ್ನು ಚಿಕ್ಕ ವಯಸ್ಸಿನಿಂದಲೂ ಸಾಕಿ ಬೆಳೆಸಿದ ಭೀಷ್ಮಪಿತಾಮಹನನ್ನು, ನನಗೆ ಚಿಕ್ಕ ವಯಸ್ಸಿನಿಂದ ವಿದ್ಯೆಗಳನ್ನೆಲ್ಲ ಬೋಧಿಸಿದ ದ್ರೋಣಾಚಾರ್ಯನನ್ನು (ಕೊಲ್ಲಬೇಕಾಗಿ ಬರುತ್ತಿದೆ). ನಿಜಕ್ಕೂ ನಾನು ಅವರನ್ನು ಹೂವುಗಳಿಂದ ಪೂಜಿಸಬೇಕಾಗಿದೆ. ಇಂತಹವರನ್ನು ಬಾಣಗಳಿಂದ ಹೇಗೆ ಹೊಡೆಯಲಿ ?
5.ಗುರೂನಹತ್ವಾ ಹಿ ಮಹಾನುಭಾವಾನ್
ಶ್ರೇಯೋ ಭೋಕ್ತುಂ ಭೈಕ್ಷ್ಯ ಮಪೀಹ ಲೋಕೇ!
ಹತ್ವಾರ್ಥಕಾಮಾಂಸ್ತು ಗುರೂನಿಹೈವ
ಭುಂಜೀಯ ಭೋಗಾನ್ ರುಧಿರಪ್ರದಿಗ್ದಾನ್!!
ಮಹಾನುಭಾವಾನ್ ದೊಡ್ಡ ತಪೋವಿದ್ಯಾದಿ ಪ್ರಭಾವವುಳ್ಳವರಾದ, = ಗುರೂನ್ = ಹಿರಿಯರನ್ನು (ಪೂಜ್ಯರನ್ನು), ಅಹತ್ವಾ = ಸಂಹರಿಸದೆ, ಇಹ-ಲೋಕೇ= ಈ ಲೋಕದಲ್ಲಿ, ಬೈಕ್ಷಂ = ಭಿಕ್ಷಾನ್ನವನ್ನು, ಭೋಕ್ತುಂ-ಅಪಿ = ತಿನ್ನುವುದು ಕೂಡಾ, ಶ್ರೇಯಃ = ಶ್ರೇಯಸ್ಕರವು, ಹಿ = ಅಲ್ಲವೇ!, ಗುರೂನ್ = ಹಿರಿಯರನ್ನು, ಹತ್ವಾ-ತು * ಕೊಂದರೆ, ಇಹ-ಏವ = ಈ ಲೋಕದಲ್ಲಿ ಮಾತ್ರವೇ, ರುಧಿರ ಪ್ರದಿಗ್ದಾನ್ ರಕ್ತ ಬಳಿದಿರುವ, ಅರ್ಥಕಾಮಾನ್ = ಸಂಪತ್ತುಗಳನ್ನು, ಕಾಮನೆಗಳನ್ನು, ಭೋಗಾನ್ = ಸುಖಭೋಗಗಳನ್ನು ಕೂಡ, ಭುಂಜೀಯ ಅನುಭವಿಸುವೆನು.
ಓ ಶ್ರೀಕೃಷ್ಣನೇ! ನನಗೆ ಪ್ರತಿಪಕ್ಷದಲ್ಲಿ ಇರುವವರೆಲ್ಲರೂ ಗುರುಗಳೇ ಆಗಿದ್ದಾರೆ. ಅವರು ಸಾಮಾನ್ಯ ಗುರುಗಳಲ್ಲ, ಮಹಾನುಭಾವರು. ಅಂದರೆ,
ತಪಸ್ಸಿನಲ್ಲಿಯೂ, ವಿದ್ಯೆಯಲ್ಲಿಯೂ, ಧರ್ಮದಲ್ಲಿಯೂ ಕೂಡ ಮಹಾ ಪ್ರಭಾವವಂತರು. ಇಂಥವರನ್ನು ಕೊಲ್ಲುವುದಕ್ಕಿಂತ ಭಿಕ್ಷೆ ಬೇಡಿ ಬದುಕುವುದು ಒಳ್ಳೆಯದು (ಶ್ರೇಯಸ್ಕರವು). ಏಕೆಂದರೆ, ಕೊಂದರೆ ನನಗೆ ಸಂಪತ್ತುಗಳು, ಕಾಮನೆಗಳು, ಸುಖಭೋಗಗಳು, ಎಲ್ಲವೂ ಲಭಿಸುತ್ತವೆ. ಆದರೆ, ಅವೆಲ್ಲವೂ ರಕ್ತಸ್ನಿಗ್ಧಗಳೇ ಆಗಿರುತ್ತವೆ. ಅಂತಹ ಭೋಗಗಳನ್ನು ಅನುಭವಿಸಿದರೆ ಈ ಲೋಕದಲ್ಲಿ ಚೆನ್ನಾಗಿಯೇ ಇರುವುದು. ಆದರೆ, ಬರಬಹುದಾದ ಜನ್ಮಗಳಲ್ಲಿ ಉತ್ತಮಗತಿಗಳಂತೂ ಇರುವುದಿಲ್ಲ.
ಅವತಾರಿಕೆ:
ಇನ್ನು ಅರ್ಜುನನು ತನ್ನ ಮಾನಸಿಕ ದ್ವೈದೀಭಾವವನ್ನು ವ್ಯಕ್ತ ಪಡಿಸಿಕೊಳ್ಳುತ್ತಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ