ಗೀತೆ – 35 : ಗೌರವಾನ್ವಿತರಿಗೆ ಅಪಕೀರ್ತಿ ಮರಣಕ್ಕಿಂತಲು ಅಧಮ

Gitacharya
Spread the love

ಶ್ರೀಮದ್ಭಗವದ್ಗೀತಾ : 35

34.ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇಽವ್ಯಯಾಮ್‌।
ಸಂಭಾವಿತಸ್ಯ ಚಾಕೀರ್ತಿಃ ಮರಣಾದತಿರಿಚ್ಯತೇ॥

ಭೂತಾನಿ = ಜನರು, ತೇ = ನಿನ್ನ, ಅವ್ಯಯಾಂ = ಕೊನೆಯಿಲ್ಲದ, ಅಕೀರ್ತಿಂ-ಚ- ಅಪಿ = ಅಪಕೀರ್ತಿಯನ್ನು ಕೂಡ, ಕಥಯಿಷ್ಯಂತಿ = ಹೇಳಿಕೊಳ್ಳುವರು. ಸಂಭಾವಿತಸ್ಯ = ಗೌರವದಿಂದ ಬಾಳುವವನಿಗೆ, ಅಕೀರ್ತಿಃ = ಅಪಕೀರ್ತಿಯು, ಮರಣಾತ್‌-ಚ = ಮರಣಕ್ಕಿಂತಲೂ ಕೂಡ, ಅತಿರಿಚ್ಯತೇ = ಮೀರಿರುವುದಾಗಿದೆ.

ಮುಂದಿನ ಪೀಳಿಗೆಗಳೆಲ್ಲವೂ ನಿನ್ನನ್ನು ಕುರಿತು ಕೆಟ್ಟದಾಗಿ ಹೇಳಿಕೊಳ್ಳುವುವು. ಅಪಕೀರ್ತಿಗೆ ಕೊನೆಯಿಲ್ಲ. ಗೌರವನೀಯವಾದ ಸ್ಥಾನವನ್ನು ಹೊಂದಿರುವವನಿಗೆ ಅಪಕೀರ್ತಿಯೆನ್ನುವುದು ಮರಣಕ್ಕಿಂತಲೂ ಅಧಮಾಧಮವಲ್ಲವೆೇ! ಆದ್ದರಿಂದ ಆ ಆಲೋಚನೆಯನ್ನು ಬಿಟ್ಟುಬಿಡು.

35.ಭಯಾದ್ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ।
ಯೇಷಾಂ ಚ ತ್ವಂ ಬಹುಮತಃ ಭೂತ್ವಾ ಯಾಸ್ಯಸಿ ಲಾಘವಮ್‌॥
ಮಹಾರಥಾಃ = ಮಹಾವೀರರು, ತ್ವಾಂ = ನಿನ್ನನ್ನು ಕುರಿತು, ಭಯಾತ್‌ = ಭಯದಿಂದ, ರಣಾತ್‌ = ಯುದ್ಧದಿಂದ, ಉಪರತಂ = ವಿರಮಿಸಿಕೊಂಡವನಂತೆ, ಮನ್ಯಂತೇ = ಭಾವಿಸಬಲ್ಲರು. ಚ = ಮತ್ತು, ಯೇಷಾಂ = ಯಾರಿಗಾದರೆ, ತ್ವಂ = ನೀನು, ಬಹುಮತಃ-ಭೂತ್ವಾ = ಗೌರವಪಾತ್ರನು ಆಗಿರುವೆಯೋ (ತೇಷಾಂ = ಅವರಿಗೆ), ಲಾಘವಂ = ಹಗುರವಾಗಿಬಿಡುವುದನ್ನು, ಯಾಸ್ಯಸಿ = ಹೊಂದುವೆ.
ನೀನು ಇಲ್ಲಿಯವರೆಗೂ ಬಂದು, ಇವರೆಲ್ಲರನ್ನೂ ನೋಡಿದಮೇಲೆ ಹೀಗೆ ಇದ್ದಕ್ಕಿದ್ದಂತೆ ಯುದ್ಧದಿಂದ ವಿರಮಿಸಿಕೊಂಡರೆ, ನಿನ್ನ ಶತ್ರುಪಕ್ಷದವರು ಮಾತ್ರವಲ್ಲದೆ, ನಿನ್ನ ಸ್ವಪಕ್ಷದ ಮಹಾವೀರರು ಕೂಡಾ ನೀನು ಭಯದ ಕಾರಣ ಯುದ್ಧದಿಂದ ಓಡಿಹೋಗಿರುವೆ ಎಂದು ಭಾವಿಸುತ್ತಾರೆ. ಅಷ್ಟೇ ಹೊರತು, ಅವರ ಮೇಲಿನ ಕನಿಕರದಿಂದ ಯುದ್ಧವನ್ನು ಬಿಟ್ಟಿರುವೆ ಎಂದು ಯಾರೂ ಅಂದುಕೊಳ್ಳರು. ಅವರೆಲ್ಲರೂ ಇಲ್ಲಿಯವರೆಗೂ ನಿನ್ನನ್ನು ಕುರಿತು ದೊಡ್ಡದಾಗಿ ಯೋಚಿಸುತ್ತಿದ್ದಾರೆ. ಅಂತಹವರೆಲ್ಲರಿಗೂ ನೀನು ಈಗ ಹಗುರವಾಗಿಬಿಡುವೆ.

36.ಅವಾಚ್ಯ ವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ।
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್?॥

ತವ = ನಿನ್ನ, ಅಹಿತಾಃ = ಶತ್ರುಗಳು, ತವ = ನಿನ್ನ, ಸಾಮರ್ಥ್ಯಂ = ಸಾಮರ್ಥ್ಯವನ್ನು, ನಿಂದಂತಃ = ನಿಂದಿಸುತ್ತಾ, ಬಹೂನ್‌ = ಬಗೆಬಗೆಯಾಗಿ, ಅವಾಚ್ಯವಾದಾನ್‌ = ಆಡಬಾರದ ಮಾತುಗಳನ್ನು, ವದಿಷ್ಯಂತಿ = ಆಡುವರು. ತತಃ = ಇಂತಹ ನಿಂದನೆಗಳಿಗಿಂತಲೂ, ದುಃಖತರಂ = ಹೆಚ್ಚಿನ ದುಃಖವನ್ನು, ಕಿಂ = ಉಂಟು ಮಾಡುವುದು, ಏನಿರಬಹುದು?

ಅರ್ಜುನನೆ! ನಿನ್ನ ಸ್ವಪಕ್ಷದಲ್ಲಿ ಕೆಲವರಾದರೂ, ನಿನ್ನ ಮೇಲೆ ಸಾನುಭೂತಿಯಿಂದ ಆಲೋಚಿಸುವರೇನೋ. ಆದರೆ ನಿನ್ನ ಶತ್ರುಪಕ್ಷದವರಾದರೆ ಮಾತ್ರ ನಿನಗೆ ಸಾಮರ್ಥ್ಯವು ಇಲ್ಲವೇ ಇಲ್ಲವೆಂದು, ಇಷ್ಟು ದಿವಸ ನೀನು ಪ್ರಗಲ್ಭದ ಮಾತುಗಳನ್ನು ಆಡುತ್ತಾ, ಕಾಲಕ್ಷೇಪವನ್ನು ಮಾಡುತ್ತಾ, ಬಂದಿರುವೆಯೆಂದು ಹೀಗೆ ಅನೇಕ ರೀತಿಯಲ್ಲಿ ಆಡಬಾರದ ಮಾತುಗಳನ್ನು ಆಡುವರು. ನಿನಗೆ ಇದಕ್ಕಿಂತಲೂ ಬೇರೆ ಯಾವುದಾದರೂ ದೊಡ್ಡ ಕಷ್ಟವು ಇರಬಹುದೇ?

37.ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್‌।
ತಸ್ಮಾದುತ್ತಿಷ್ಠ ಕೌಂತೇಯ! ಯುದ್ಧಾಯ ಕೃತನಿಶ್ಚಯಃ॥
ಕೌಂತೇಯ= ಎಲೈ ಅರ್ಜುನನೆ! ಹತಃ-ವಾ = ಸತ್ತರೆ, ಸ್ವರ್ಗಂ = ಸ್ವರ್ಗವನ್ನು ಪ್ರಾಪ್ಸ್ಯಸಿ = ಹೊಂದುವೆ, ಜಿತ್ವಾ-ವಾ = ಗೆದ್ದರೆ, ಮಹೀಮ್‌ = ರಾಜ್ಯವನ್ನು, ಭೋಕ್ಷ್ಯಸೇ = ಅನುಭವಿಸುವೆ. ತಸ್ಮಾತ್‌ = ಆದ್ದರಿಂದ, ಕೃತನಿಶ್ಚಯಃ = ಸ್ಥಿರವಾದ ನಿಶ್ಚಯವುಳ್ಳವನಾಗಿ, ಯುದ್ಧಾಯ = ಯುದ್ಧಕ್ಕಾಗಿ, ಉತ್ತಿಷ್ಠ = ಎದ್ದು ನಿಲ್ಲು.

ಅರ್ಜುನನೆ! ಮರಣಿಸಿದರೆ ವೀರಸ್ವರ್ಗವು ಬರುವುದು. ಗೆದ್ದರೆ ದೊಡ್ಡ ರಾಜ್ಯವು ಬರುವುದು. ಯಾವುದಾದರೂ ಒಳ್ಳೆಯದೆ. ಇನ್ನು ಸಂದೇಹಗಳನ್ನು ಬಿಟ್ಟುಬಿಡು. ಸ್ಥಿರವಾದ ನಿಶ್ಚಯವನ್ನು ಮಾಡಿಕೊ. ಪ್ರಸ್ತುತ ಯುದ್ಧವೇ ಕರ್ತವ್ಯವೆಂದು ತಿಳಿದುಕೊ. ಏಳು, ಎದ್ದು ನಿಲ್ಲು.
ವಿವರಣೆ:
ಈ ಅಧ್ಯಾಯದ 11ನೆಯ ಶ್ಲೋಕದಿಂದ 30ನೆಯ ಶ್ಲೋಕದವರೆಗೆ ತತ್ತ್ವಶಾಸ್ತ್ರ ದೃಷ್ಟಿಯಿಂದಲೂ, 31ನೆಯ ಶ್ಲೋಕದಿಂದ 34ನೆಯ ಶ್ಲೋಕದವರೆಗೆ ಧರ್ಮಶಾಸ್ತ್ರ ದೃಷ್ಟಿಯಿಂದಲೂ, ಉಳಿದ ಎರಡು ಶ್ಲೋಕಗಳಲ್ಲಿ ಲೌಕಿಕ ದೃಷ್ಟಿಯಿಂದಲೂ ಅರ್ಜುನನಿಗೆ ವಿಧವಿಧವಾಗಿ ಕರ್ತವ್ಯಬೋಧೆಯನ್ನು ಮಾಡಿರುವ ಭಗವಂತನು ಇನ್ನು ಈ ಶ್ಲೋಕದಲ್ಲಿ ತನ್ನ ಸ್ವಂತ ನಿರ್ಣಯವನ್ನು ಸ್ಪಷ್ಟವಾಗಿ ಪ್ರಕಟಿಸಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ