ಶ್ರೀ ಮದ್ಭಗವದ್ಗೀತಾ : 27
ಶ್ರೀ ಭಗವಾನುವಾಚ:
11.ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ।
ಗತಾಸೂನ ಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ॥
ಶ್ರೀಭಗವಾನ್ = ಶ್ರೀಕೃಷ್ಣನು, ಉವಾಚ = ಹೇಳಿದನು. ತ್ವಂ = ನೀನು, ಅಶೋಚ್ಯಾನ್ = ಶೋಕಕ್ಕೆ ತಕ್ಕವರಲ್ಲದವರನ್ನು ಕುರಿತು, ಅನ್ವಶೋಚಃ = ಶೋಕಿಸಿದ್ದೀಯೆ. ಚ = ಮತ್ತು, ಪ್ರಜ್ಞಾವಾದಾನ್ = ಜ್ಞಾನವಂತರು ಆಡುವ ಮಾತುಗಳನ್ನು, ಭಾಷಸೇ = ಆಡುತ್ತಿದ್ದೀಯೆ. ಪಂಡಿತಾಃ = ಜ್ಞಾನವಂತರು, ಗತಾಸೂನ್ = ಪ್ರಾಣಗಳನ್ನು ಕಳೆದುಕೊಂಡವರನ್ನೂ, ಅಗತಾಸೂನ್-ಚ = ಪ್ರಾಣಗಳನ್ನು ಕಳೆದುಕೊಳ್ಳದಿರುವವರನ್ನೂ, ಕುರಿತು, ನ-ಅನುಶೋಚಂತಿ= ಶೋಕಿಸರು.
ಶ್ರೀ ಭಗವಂತನು ಹೇಳಿದನು:-
ಎಲೈ ಅರ್ಜುನನೆ! ಯಾರನ್ನು ಕುರಿತು ದುಃಖಿಸಬಾರದೋ ಅವರಿಗೋಸ್ಕರ ನೀನು ದುಃಖಿಸುತ್ತಿರುವೆ. ಮಹಾಜ್ಞಾನಸಿದ್ಧರು ಮಾತನಾಡುವ ಹಾಗೆ ಅತಿಯಾದ ತಿಳುವಳಿಕೆಯ ಮಾತುಗಳನ್ನು ಆಡುತ್ತಿರುವೆ. ನಿಜವಾಗಿಯೂ ಜ್ಞಾನಸಿದ್ಧಿ ಉಳ್ಳವರು ಸತ್ತವರನ್ನು ಕುರಿತಾಗಲೀ, ಜೀವಂತವಾಗಿರುವವರನ್ನು ಕುರಿತಾಗಲೀ, ನಿನ್ನ ಹಾಗೆ ಶೋಕಿಸರು.
12. ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ।
ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್॥
ಅಹಂ-ತು = ನಾನಾದರೆ, ಜಾತು = ಯಾವಾಗಲಾದರೂ, ನ-ಆಸಂ = ಇರಲಿಲ್ಲವೆಂಬುದು, ನ-ಏವ = ಇಲ್ಲವೇ ಇಲ್ಲ. ತ್ವಂ = ನೀನು ಇರಲಿಲ್ಲವೆಂಬ ಮಾತು, ನ = ಇಲ್ಲ. ಇಮೇ = ಈ, ಜನಾಧಿಪಾಃ = ರಾಜರಾಗಲಿ ಇರಲಿಲ್ಲವೆಂಬುದೇ, ನ = ಇಲ್ಲ. ವಯಂ = ನಾವು, ಸರ್ವೇ = ಎಲ್ಲರೂ, ಅತಃ-ಪರಂ = ಇನ್ನು ಮೇಲೆ, ನ-ಭವಿಷ್ಯಾಮಃ = ಇರುವುದಿಲ್ಲವೆಂಬ ಮಾತು, ನ-ಚ-ಏವ = ಇಲ್ಲವೇ ಇಲ್ಲ.
ಎಲೈ ಅರ್ಜುನನೆ! ನಾನಾಗಲಿ, ನೀನಾಗಲಿ, ಕಾಣಿಸುತ್ತಿರುವ ಈ ವೀರರಾಗಲಿ, ಈ ಶರೀರಗಳನ್ನು ಧರಿಸುವುದಕ್ಕಿಂತ ಮೊದಲು ಕೂಡ ಇರಲಿಲ್ಲ ಎಂಬ ಮಾತೇ ಇಲ್ಲ. ಈ ಶರೀರಗಳನ್ನು ಬಿಟ್ಟ ಮೇಲೆ ಕೂಡ ನಾವು ಇರುವುದಿಲ್ಲವೆಂಬುದೇ ಇಲ್ಲ.
(ಹಿಂದಿನ ಶ್ಲೋಕದಲ್ಲಿ ಹೇಳಿದ ಮೂರನೆಯ ಸೂತ್ರವನ್ನು (ಅಂದರೆ “ಜ್ಞಾನಸಿದ್ಧಿ ಉಳ್ಳವರು ಶೋಕಿಸರು’ ಎಂಬ ಸೂತ್ರವನ್ನು) ಈ ಶ್ಲೋಕದಲ್ಲಿ ಭಗವಂತನು ಇನ್ನಷ್ಟು ವಿವರಿಸಿದನು.)
13. ದೇಹಿನೋಽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ।
ತಥಾ ದೇಹಾಂತರ ಪ್ರಾಪ್ತಿಃ ಧೀರಸ್ತತ್ರ ನ ಮುಹ್ಯತಿ॥
ದೇಹಿನಃ = ಜೀವನಿಗೆ, ಅಸ್ಮಿನ್ = ಈ, ದೇಹೇ = ಶರೀರದಲ್ಲಿ, ಕೌಮಾರಂ = ಬಾಲ್ಯ, ಯೌವನಂ = ಯೌವನ, ಜರಾ = ಮುದಿತನ, ಎಂಬುದು, ಯಥಾ= ಯಾವ ರೀತಿಯಾಗಿ ಆಗುತ್ತಿರುತ್ತವೆಯೋ, ತಥಾ = ಹಾಗೆಯೇ, ದೇಹಾಂತರಪ್ರಾಪ್ತಿಃ = ಮತ್ತೊಂದು ದೇಹವನ್ನು ಪಡೆಯುವುದು ಎಂಬುದು ಕೂಡಾ ಆಗುತ್ತಿರುತ್ತದೆ. ತತ್ರ = ಆ ವಿಷಯದಲ್ಲಿ, ಧೀರಃ = ಬುದ್ಧಿವಂತನು (ತಿಳುವಳಿಕೆಯುಳ್ಳವನು), ನ-ಮುಹ್ಯತಿ = ಮೋಹವನ್ನು ಹೊಂದಲಾರನು. (ಅಜ್ಞಾನದಲ್ಲಿ ಬೀಳನು.)
ದೇಹವು ಬೇರೆ, ದೇಹ ಉಳ್ಳವನು ಬೇರೆ. ದೇಹ ಉಳ್ಳವನ ಹೆಸರೇ “ದೇಹಿ’ ಇಲ್ಲವೆ “ಜೀವಿ’. ಆ ಜೀವನು ಹೊಸದಾಗಿ ಸ್ಥೂಲದೇಹವನ್ನು ಸ್ವೀಕರಿಸಿದಾಗ, ಸ್ವಲ್ಪಕಾಲದವರೆಗೂ ಬಾಲ್ಯದಶೆ ನಡೆಯುವುದು. ಆದ ನಂತರ ಸ್ಥೂಲದೇಹದಲ್ಲಿನ ಅವಯವಗಳು ಚೆನ್ನಾಗಿ ವಿಕಸಿಸುವುದರಿಂದ “ಯೌವನ’ ಎಂಬ ಹೊಸ ದೆಸೆ ಬಂದಿರುವುದು ಎಂಬ ವ್ಯವಹಾರವು ಉಂಟಾಗುವುದು. ಅದಾದ ಮೇಲೆ ಸ್ವಲ್ಪ ಕಾಲದ ನಂತರ ಅವಯವಗಳು ಬಾಡಿಹೋಗಲು ಮುಪ್ಪಿನ ಅವಸ್ಥೆ ಬಂದಂತೆ ವ್ಯವಹಾರವು ಉಂಟಾಗುತ್ತದೆ. ಬಾಲ್ಯವು ಕಳೆದು ಹೋಗಿ ಯೌವನವು ಬಂದಾಗ ಯಾರೂ ಕೂಡ “ನಾನು ಬಾಲಕನಾಗಿ ಸತ್ತುಹೋಗಿ, ಹೊಸದಾಗಿ ಯುವಕನಾಗಿ ಹುಟ್ಟಿರುವೆನು’ ಎಂದು ಹೇಳುತ್ತಿಲ್ಲ. ಹಾಗೆಯೇ “ಯುವಕನಾಗಿ ಪ್ರಾಣ ಬಿಟ್ಟು, ವೃದ್ಧನಾಗಿ ಹುಟ್ಟಿದ್ದೇನೆ’ ಎಂದು ಹೇಳುತ್ತಿಲ್ಲ. ಇವರನ್ನು ನೋಡುತ್ತಿರುವ ಇತರ ಜೀವಿಗಳು ಕೂಡ ಮೂರು ಅವಸ್ಥೆಗಳಲ್ಲಿಯೂ ಒಬ್ಬನೇ ಜೀವನು ಅನುಗತವಾಗಿ ಸಾಗುತ್ತಿರುವನು ಎಂದು ಗುರುತಿಸುತ್ತಲೇ ಇರುವರು. ಸ್ವಲ್ಪ ಬುದ್ಧಿವಂತನಾದರೆ, ಸತ್ತ ನಂತರವೂ, ಅಂದರೆ ಸ್ಥೂಲಶರೀರವು ಮುದಿಯಾಗಿ ಬಿದ್ದುಹೋದ ಮೇಲು ಕೂಡಾ ಜೀವನು ನಶಿಸನು ಎಂದೂ, ಅವನು ಮತ್ತೊಂದು ಸ್ಥೂಲದೇಹದಲ್ಲಿ ಪ್ರವೇಶಿಸುತ್ತಿರುವನು ಎಂದೂ, ಗುರುತಿಸಬಲ್ಲವನಾಗುತ್ತಿದ್ದಾನೆ. ಅಂತಹ ತಿಳುವಳಿಕೆಯುಳ್ಳವನು ಲೋಕದಲ್ಲಿ ಯಾರಿಗಾದರೂ ಸರಿಯೇ ಹಳೆಯ ದೇಹವು ಹೋಗಿ ಹೊಸ ದೇಹವು ಬರುತ್ತಿದ್ದರೆ, ಅದೇ ಜೀವನು ಮುಂದುವರೆಯುತ್ತಿರುವನೆಂದು ಗುರುತಿಸುವನೇ ಹೊರತು ಮರಣಿಸಿದನೆಂದು ಶೋಕಿಸನು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ