ಗೀತೆ – 34 : ಈ ಯುದ್ಧವು ನೀನು ಕೇಳಿ ಬಂದಿರುವುದಲ್ಲ, ದೈವವಶದಿಂದ ಬಂದಿರುವುದು

Gitacharya
Spread the love

ಶ್ರೀಮದ್ಭಗವದ್ಗೀತಾ : 34

31. ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತು ಮರ್ಹಸಿ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋಽನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ॥

ಸ್ವಧರ್ಮಂ = ನಿನಗೆ ಹುಟ್ಟಿನಿಂದ ಪ್ರಾಪ್ತವಾದ ಧರ್ಮವನ್ನು, ಅವೇಕ್ಷ್ಯ = ನೋಡಿ, ಚ-ಅಪಿ = ಕೂಡ, ವಿಕಂಪಿತುಂ = ಚಲಿಸಲು, ನ-ಅರ್ಹಸಿ = ತಕ್ಕವನಲ್ಲ. ಹಿ = ಏಕೆಂದರೆ, ಕ್ಷತ್ರಿಯಸ್ಯ = ಕ್ಷತ್ರಿಯನಾದವನಿಗೆ, ಧರ್ಮ್ಯಾತ್‌ = ಧರ್ಮ ಒಪ್ಪಿದ, ಯುದ್ಧಾತ್‌ = ಯುದ್ಧಕ್ಕಿಂತಲೂ, ಅನ್ಯತ್‌ = ಮತ್ತೊಂದು, ಶ್ರೇಯಃ = ಶ್ರೇಯಸ್ಕರವಾದ ಕೆಲಸ, ನ-ವಿದ್ಯತೇ = ಇಲ್ಲ.

ಅರ್ಜುನನೆ! ಜನ್ಮಸಿದ್ಧವಾದ ನಿನ್ನ ಸ್ವಧರ್ಮವನ್ನು ಪರಿಶೀಲಿಸಿ ನೋಡಿಕೊಂಡರೂ ಸರಿಯೇ, ನೀನು ಈ ಯುದ್ಧದಿಂದ ಪಕ್ಕಕ್ಕೆ ಹೋಗುವುದು ಸೂಕ್ತ ಕೆಲಸವಲ್ಲ. ಏಕೆಂದರೆ ಇದು ಧರ್ಮಸಂರಕ್ಷಣೆಗೋಸ್ಕರ, ತನ್ಮೂಲಕ ಪ್ರಜಾಸಂರಕ್ಷಣೆಗೋಸ್ಕರ ಏರ್ಪಟ್ಟ ಯುದ್ಧವಾಗಿದೆ. ಆದ್ದರಿಂದಲೇ ಇದು ಧರ್ಮಸಮ್ಮತವಾದ ಯುದ್ಧವು. ಕ್ಷತ್ರಿಯನಾಗಿ ಹುಟ್ಟಿದವನಿಗೆ ಇಂತಹ ಯುದ್ಧಕ್ಕಿಂತಲೂ ಹೆಚ್ಚಿನ ಶ್ರೇಯಸ್ಸಾಧನವು ಮತ್ತೊಂದಿಲ್ಲ.

32. ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರ ಮಪಾವೃತಮ್‌।
ಸುಖಿನಃ ಕ್ಷತ್ರಿಯಾಃ ಪಾರ್ಥ! ಲಭಂತೇ ಯುದ್ಧಮೀದೃಶಮ್‌॥

ಪಾರ್ಥ = ಎಲೈ ಅರ್ಜುನನೆ! ಸುಖಿನಃ = ಸುಖಿಗಳಾದ, ಕ್ಷತ್ರಿಯಾಃ = ಕ್ಷತ್ರಿಯರು (ಮಾತ್ರವೇ), ಈದೃಶಂ = ಈ ರೀತಿಯಾಗಿ, ಯದೃಚ್ಛಯಾ = ದೈವವಶದಿಂದ, ಉಪಪನ್ನಂ = ಬಂದೊದಗಿರುವುದೂ, ಚ = ಮತ್ತು, ಅಪಾವೃತಂ = ಬಾಗಿಲುಗಳು ತೆರೆಯಲ್ಪಟ್ಟ, ಸ್ವರ್ಗದ್ವಾರಂ = ಸ್ವರ್ಗಲೋಕ ದ್ವಾರದಂತೆ ಇರುವುದೂ ಆದ, ಯುದ್ಧಂ = ಯುದ್ಧವನ್ನು, ಲಭಂತೇ = ಪಡೆಯುತ್ತಿದ್ದಾರೆ.

ಅರ್ಜುನನೆ! ಈ ಯುದ್ಧವು ನೀನು ಕೋರಿಕೊಂಡಿದ್ದರಿಂದ ಬಂದಿರುವುದಲ್ಲ. ಇದು ದೈವವಶದಿಂದ ಬಂದು ನಿನ್ನ ಹೆಗಲಮೇಲೆ ಬಿದ್ದಿರುವುದು. ಅದಕ್ಕಾಗಿಯೇ, ಇದು ತೆರೆಯಲ್ಪಟ್ಟ ಬಾಗಿಲುಗಳಿರುವ ಸ್ವರ್ಗಲೋಕದ ದ್ವಾರದಂತಿರುವುದು. ಇಂತಹ ಯುದ್ಧವು ಬಹಳಷ್ಟು ಅದೃಷ್ಟವಿರುವ ಕ್ಷತ್ರಿಯರಿಗೆ ಮಾತ್ರವೇ ಲಭಿಸುವುದು.
ಅವತಾರಿಕೆ:
“”ಧರ್ಮವು ಕೆಟ್ಟರೂ ಪರವಾಗಿಲ್ಲ. ನನಗೆ ಅಹಿಂಸೆಯೇ ಮುಖ್ಯ” ಎಂದು ಮೊಂಡುತನದಲ್ಲಿ ಯುದ್ಧದಿಂದ ಓಡಿಹೋದರೆ ಕ್ಷತ್ರಿಯನಾದ ಅರ್ಜುನನಿಗೆ ಬರಬಹುದಾದ ದೋಷಗಳನ್ನು ಮುಂದಿನ ನಾಲ್ಕು ಶ್ಲೋಕಗಳಲ್ಲಿ ಭಗವಂತನು ವಿವರಿಸಿ ಹೇಳಲಿದ್ದಾನೆ.

33. ಅಥ ಚೇತ್ತ್ವಮಿಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ।
ತತಸ್ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪ ಮವಾಪ್ಸ್ಯಸಿ॥
ಅಥ = ಹಾಗಲ್ಲದೆ, ತ್ವಂ = ನೀನು, ಇಮಂ = ಈ, ಧರ್ಮ್ಯಂ = ಧರ್ಮಸಮ್ಮತವಾದ, ಸಂಗ್ರಾಮಂ = ಯುದ್ಧವನ್ನು, ನ-ಕರಿಷ್ಯಸಿ-ಚೇತ್‌ = ಮಾಡದೇ ಹೋದರೆ, ತತಃ = ಅದರಿಂದ, ಸ್ವಧರ್ಮಂ = ನಿನ್ನ ಜನ್ಮಸಿದ್ಧವಾದ ಧರ್ಮವನ್ನೂ, ಚ = ಮತ್ತು, ಕೀರ್ತಿಂ = ಯಶಸ್ಸನ್ನೂ, ಹಿತ್ವಾ = ಕಳೆದುಕೊಂಡು, ಪಾಪಂ = ಪಾಪವನ್ನು, ಅವಾಪ್ಸ್ಯಸಿ = ಹೊಂದುವೆ.

ಅರ್ಜುನನೆ! ಹಾಗಲ್ಲದೆ ನೀನು ಮೊಂಡುತನದಿಂದ ನಡೆದುಕೊಂಡರೆ ಆಗಬಹುದಾದ್ದನ್ನು ಹೇಳುವೆನು ಕೇಳು. ಇದು ಧರ್ಮಶಾಸ್ತ್ರದ ಪ್ರಕಾರ ನೀನು ಕೇಳಿಕೊಳ್ಳದೇ ನಿನಗೆ ಬಂದೊದಗಿರುವ ಯುದ್ಧವಾದ್ದರಿಂದ, ಇದನ್ನು ಮಾಡದೇಬಿಡುವುದರಿಂದ ಜನ್ಮಸಿದ್ಧವಾದ ನಿನ್ನ ಧರ್ಮವು ಕೆಡುವುದು. ಅದರಿಂದ ಪಾಪವು ನಿನ್ನ ನೆತ್ತಿಯಮೇಲೆ ಬೀಳುವುದು. ಅದರೊಂದಿಗೆ ನಿನಗಿರುವ ಅಪಾರವಾದ ಕೀರ್ತಿಯನ್ನು ಕಳೆದುಕೊಂಡವನು ನೀನಾಗುವೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ