ಗೀತೆ 13 : ದುರ್ಯೋಧನನು ತನ್ನ ಮನಸ್ಸಿನ ಗೊಂದಲ ಹೊರಹಾಕಿದನು.

Gita
Spread the love

ಶ್ರೀಮದ್ಭಗವದ್ಗೀತಾ : 13

9.ಅನ್ವೇ ಚ ಬಹವ ಶೂರಾಃ ಮದರ್ಥೇ ತ್ಯಕ್ತಜೀವಿತಾಃ।
ನಾನಾಶಸ್ತ್ರ ಪ್ರಹರಣಾಃ ಸರ್ವೇ ಯುದ್ಧವಿಶಾರದಾಃ||

ನಾನಾ ಶಸ್ತ್ರ ಪ್ರಹರಣಾಃ = ಬಗೆಬಗೆಯ ಆಯುಧಗಳನ್ನು ಧರಿಸಿದವರು, ಯುದ್ಧ ವಿಶಾರದಾಃ = ಯುದ್ಧಗಳಲ್ಲಿ ಪ್ರವೀಣರು , ಶೂರಾಃ = ವೀರರು ಆದ, ಬಹವಃ-ಅನ್ಯೇ ಚ = ಎಷ್ಟೋ ಮಂದಿ ಇತರರು ಕೂಡಾ, ಸರ್ವೇ = ಎಲ್ಲರು, ಮದರ್ಥೇ = ನನಗಾಗಿ, ತ್ಯಕ್ತ ಜೀವಿತಾಃ = ಪ್ರಾಣವನ್ನು ಬಿಟ್ಟು ಇರುವರು.

ಮೇಲೆ ತಿಳಿಸಿದವರು ಮಾತ್ರವಲ್ಲದೆ, ಉಳಿದ ಮಹಾವೀರರು ಅನೇಕರು ನನಗಾಗಿ ಪ್ರಾಣಗಳನ್ನು ಕೂಡಾ ಬಿಡಲು ಸಿದ್ಧರಾಗಿ ಇದ್ದಾರೆ.

10.ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿ ರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ।।

ತತ್ = ಅಂತಹ (ವೀರರಿಂದ ಕೂಡಿರುವ), ಭೀಷ್ಮಾಭಿರಕ್ಷಿತಮ್ = ಭೀಷ್ಮನಿಂದ ರಕ್ಷಿತವಾಗಿರುವ, ಅಸ್ಮಾಕಂ = ನಮ್ಮ, ಬಲಂ-ತು = ಬಲವಾದರೆ, ಅಪರ್ಯಾಪ್ತಂ= ಸರಿಹೋಗುವಷ್ಟಿಲ್ಲ (ಸಮರ್ಥವಾದುದ್ದಲ್ಲ), ತು = ಆದರೂ, ಭೀಮಾಭಿರಕ್ಷಿತಮ್ = ಭೀಮನಿಂದ ರಕ್ಷಿತವಾಗಿರುವ, ಏತೇಷಾಂ = ಈ ಪಾಂಡವರ, ಇದಂ = ಈ, ಬಲಂ = ಸೈನ್ಯವು, ಪರ್ಯಾಪ್ತಂ = ಸರಿಹೋಗುವಷ್ಟು (ಸಮರ್ಥವಾದದ್ದು) ಆಗಿದೆ.

ನಮ್ಮ ಸೈನ್ಯದಲ್ಲಿ ಇಷ್ಟು ಮಂದಿ ಮಹಾವೀರರು ಇದ್ದಾರೆ. ಈ ನಮ್ಮ ಸೈನ್ಯದ ಸೇನಾಧಿಪತಿಯಾಗಿ, ರಕ್ಷಕನಾಗಿ, ಸ್ವಯಂ ಭೀಷ್ಮಪಿತಾಮಹನೇ ಇದ್ದಾನೆ. ಆದರೂ ನನಗ್ಯಾಕೋ ನಮ್ಮ ಸೈನ್ಯವು ಸಾಕಾಗುವಷ್ಟು ಸಮರ್ಥವಾಗಿ ಇರುವುದೆಂದು ಅನಿಸುತ್ತಿಲ್ಲ. ಪಾಂಡವರ ಸೈನ್ಯವು ಮಾತ್ರ ಭೀಮನ ರಕ್ಷಣೆಯಲ್ಲಿ ಇರುವುದರಿಂದ ಅದು ಎಷ್ಟೋ ಸಮರ್ಥವಂತವಾಗಿ ಕಾಣಿಸುತ್ತಿದೆ. (ಎಂದು ಹೀಗೆ ದುರ್ಯೋಧನನು ತನ್ನ ಮನಸ್ಸಿನ ಗೊಂದಲವನ್ನು ಹೊರಹಾಕಿದನು.)

11.ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ।
ಭೀಷ್ಮಮೇವಾಭಿರಕ್ಷಂತು ಭವಂತ ಸ್ಪರ್ವ ಏವ ಹಿ।।

ಭವಂತಃ = ನೀವು, ಸರ್ವೇ-ಏವ-ಹಿ = ಎಲ್ಲರೂ, ಸರ್ವೇಷು = ಎಲ್ಲ ತರದ, ಅಯನೇಷು = ಸೇನಾ ಪ್ರವೇಶ ಮಾರ್ಗಗಳಲ್ಲಿಯೂ, ನಿರ್ಗಮನ ಮಾರ್ಗಗಳಲ್ಲಿಯೂ,
ಯಥಾಭಾಗಂ = ನಿಮ್ಮ ನಿಮ್ಮ ಭಾಗದ ಕಡೆಗಳಲ್ಲಿ ಅನುಕೂಲವಾಗಿ, ಅವಸ್ಥಿತಾಃ = ನಿಂತಿದ್ದು ಕೊಂಡು, ಭೀಷ್ಟಂ-ಏವ = ಭೀಷ್ಮನನ್ನೇ, ಅಭಿರಕ್ಷನ್ನು = ರಕ್ಷಿಸಿಕೊಂಡು ಇರಿ.

ಆದ್ದರಿಂದ ನೀವೆಲ್ಲರೂ ಸೇನೆಯ ಒಳಗೆ ಹೋಗುವ ಮತ್ತು ಹೊರಬರುವ ಮಾರ್ಗಗಳಲ್ಲಿ ಎಲ್ಲ ಕಡೆಯೂ ನಿಮ್ಮ ನಿಮ್ಮ ಸ್ಥಾನಗಳಲ್ಲಿ ಜಾಗರೂಕರಾಗಿ ಸಂಚರಿಸುತ್ತಾ, ಸೇನಾಧಿಪತಿಯಾದ ಭೀಷ್ಮನನ್ನೇ ಕಾಯುತ್ತಾ ಇರಿ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ