ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುದೆ ಸ್ಟಾರ್ಟಪ್ ಕ್ಷೇತ್ರ: ಅರ್ಜುನ್ ರಂಗ ಅಭಿಮತ

Spread the love

 

ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುದೆ ಸ್ಟಾರ್ಟಪ್ ಕ್ಷೇತ್ರ: ಅರ್ಜುನ್ ರಂಗ ಅಭಿಮತ
ಸ್ಟಾರ್ಟಪ್ ಕ್ಷೇತ್ರದ ಕುರಿತು ಒಳನೋಟಗಳನ್ನು ಹಂಚಿಕೊಂಡ ಸಿಐಐ -ಎಸ್ಆರ್ ಇನ್ನೋವೇಶನ್ ಆಂಡ್ ಸ್ಟಾರ್ಟ್ಅಪ್ ಇಕೋಸಿಸ್ಟಮ್ಸ್ ಟಾಸ್ಕ್ ಫೋರ್ಸ್ ನ ಅಧ್ಯಕ್ಷರು
“ದಕ್ಷಿಣ ಭಾರತ ಬಹಳ ಮೊದಲಿನಿಂದಲೂ ಹೊಸತನಕ್ಕೆ ಹೆಸರುವಾಸಿಯಾಗಿದೆ. ತಾಂತ್ರಿಕ ಪ್ರಗತಿಯಲ್ಲಿ, ಉದ್ಯಮಶೀಲತೆಯಲ್ಲಿ ಬಹಳ ಮುಂದಿದೆ. ಐಟಿ, ಉತ್ಪಾದನೆ, ಜೈವಿಕ ತಂತ್ರಜ್ಞಾನ ಮತ್ತು ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ದಕ್ಷಿಣ ಭಾರತ ಮುಂಚೂಣಿಯಲ್ಲಿ ನಿಂತಿದೆ. ಇದೀಗ ಸರ್ಕಾರದ ಬೆಂಬಲವನ್ನು ಗಳಿಸಿಕೊಂಡು ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯ ಮೂಲಕ ದಕ್ಷಿಣ ಭಾರತವು ಸ್ಟಾರ್ಟ್ ಅಪ್ ಕ್ಷೇತ್ರವನ್ನು ಗಟ್ಟಿಗೊಳಿಸುತ್ತಿದೆ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರ ಎಂಬ ಸ್ಥಾನವನ್ನು ಮತ್ತಷ್ಟು ಬಲಗೊಳಿಸಿಕೊಂಡಿದೆ” ಎಂದು ಸಿಐಐ -ಎಸ್ಆರ್ ಇನ್ನೋವೇಶನ್ ಮತ್ತು ಸ್ಟಾರ್ಟ್ಅಪ್ ಇಕೋಸಿಸ್ಟಮ್ಸ್ ಟಾಸ್ಕ್ ಫೋರ್ಸ್ ನ ಅಧ್ಯಕ್ಷ, ಎನ್ ರಂಗರಾವ್ ಮತ್ತು ಸನ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ಎಂ ರಂಗ ತಿಳಿಸಿದ್ದಾರೆ.

ದಕ್ಷಿಣ ಭಾರತದ ಸ್ಟಾರ್ಟಪ್ ಕ್ಷೇತ್ರದ ಕುರಿತು ವಿಸ್ತೃತವಾಗಿ ಮಾತನಾಡಿದ ಅವರು, “ತಂತ್ರಜ್ಞಾನ ಆವಿಷ್ಕಾರದ ವಿಷಯದಲ್ಲಿ ಬೆಂಗಳೂರು ಬಹಳ ಪ್ರಮುಖವಾಗಿದೆ. ಅದರೊಂದಿಗೆ ಹೈದರಾಬಾದ್, ಚೆನ್ನೈ, ಕೊಯಮತ್ತೂರು, ಕೊಚ್ಚಿ ಮತ್ತು ವಿಶಾಖಪಟ್ಟಣಂನಂತಹ ನಗರಗಳು ಕೂಡ ತಂತ್ರಜ್ಞಾನ ಕೇಂದ್ರಗಳಾಗಿ ಬೆಳೆಯುತ್ತಿವೆ. ದಕ್ಷಿಣ ಭಾರತದಲ್ಲಿವ ಡೀಪ್ ಟೆಕ್, ಅಗ್ರಿಟೆಕ್, ಹೆಲ್ತ್‌ ಕೇರ್, ಫಿನ್‌ ಟೆಕ್ ಮತ್ತು ಸಸ್ಟೇನೇಬಲ್ ಎನರ್ಜಿ ಮುಂತಾದ ಕ್ಷೇತ್ರಗಳ ಸ್ಟಾರ್ಟಪ್ ಗಳು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ” ಎಂದು ಅವರು ಹೇಳಿದರು.

“ವಿಶೇಷವೆಂದರೆ ಹಲವು ಅಧ್ಯಯನ ವರದಿಗಳ ಪ್ರಕಾರ ಭಾರತದ ಸುಮಾರು ಶೇ.35ರಷ್ಟು ಸ್ಟಾರ್ಟ್‌ಅಪ್‌ಗಳು ದಕ್ಷಿಣ ಭಾರತದವು. ಬೆಂಗಳೂರು ಮತ್ತು ಹೈದರಾಬಾದ್‌ ಮೂಲದವು. 50ಕ್ಕೂ ಹೆಚ್ಚು ಯುನಿಕಾರ್ನ್‌ಗಳು ಮತ್ತು ಹಲವು ಪ್ರಮುಖ ಸೂನಿಕಾರ್ನ್‌ ಗಳನ್ನು ಹೊಂದಿರುವ ದಕ್ಷಿಣ ಭಾರತವು ವಿನೂತನ ಐಡಿಯಾಗಳ ಸ್ಟಾರ್ಟಪ್ ಗಳಿಗೆ ಅತ್ಯುತ್ತಮ ಅವಕಾಶ ಒದಗಿಸುತ್ತಿದೆ. ಅದರಲ್ಲೂ ವಿಶೇಷವಾಗಿ 2016ರಲ್ಲಿ ಪ್ರಾರಂಭವಾದ ಸ್ಟಾರ್ಟ್‌ಅಪ್ ಇಂಡಿಯಾ ಯೊಜನೆಯು ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಬೇಕಾದ ನೀತಿ ಚೌಕಟ್ಟು, ಹಣಕಾಸು ಮತ್ತು ಸಾಂಸ್ಥಿಕ ನೆರವನ್ನು ಒದಗಿಸಿದೆ. ದಕ್ಷಿಣ ಭಾರತವು ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡಿದೆ” ಎಂದು ಹೇಳಿದರು.

“ರಾಜ್ಯ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ನೆರವು ಒದಗಿಸುತ್ತಿವೆ. ಹಲವು ಪಾಲಿಸಿಗಳನ್ನು ಮಾಡಿವೆ. ಕರ್ನಾಟಕ ಸರ್ಕಾರ ಸ್ಟಾರ್ಟಪ್ ಪಾಲಿಸಿ ಮಾಡಿದ್ದು, ಜೊತೆಗೆ ಹಣಕಾಸಿನ ಅನುದಾನ, ಪೇಟೆಂಟ್ ಫೈಲಿಂಗ್ ನೆರವು ಮತ್ತು ಮಾರುಕಟ್ಟೆ ಅವಕಾಶ ಒದಗಿಸುವ ಸಲುವಾಗಿ ಸ್ಟಾರ್ಟ್‌ಅಪ್ ಸೆಲ್ ಅನ್ನು ರಚಿಸಿದೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸ್ಥಾಪನೆಯ ಮೂಲಕ ಸ್ಟಾರ್ಟಪ್‌ಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ. ತೆಲಂಗಾಣದ ಟಿ-ಹಬ್ ಒಂದು ಪ್ರಮುಖ ಸ್ಟಾರ್ಟಪ್ ಇನ್ಕ್ಯುಬೇಟರ್ ಆಗಿದೆ. ಸಾರ್ವಜನಿಕ ಖಾಸಗಿ ಪಾಲುದಾರಿಕೆಗೆ ಉತ್ತಮ ಉದಾಹರಣೆಯಾಗಿದೆ. ಐಸಿಟಿ ಪಾಲಿಸಿ ಅಡಿಯಲ್ಲಿ ಹೈದರಾಬಾದ್ ಎಐ, ಐಓಟಿ ಮತ್ತು ಬ್ಲಾಕ್‌ಚೈನ್‌ ತಂತ್ರಜ್ಞಾನಗಳಿಗೆ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ. ತಮಿಳುನಾಡಿನಲ್ಲಿ ಟಿಎನ್ ಸ್ಟಾರ್ಟ್ಅಪ್ ಮತ್ತು ಇನ್ನೋವೇಶನ್ ಪಾಲಿಸಿಯು ಸ್ಟಾರ್ಟಪ್ ಕ್ಷೇತ್ರವನ್ನು ಬೆಳೆಸುತ್ತಿದೆ. ಕೇರಳ ಸರ್ಕಾರವು ತನ್ನ ಕೇರಳ ಸ್ಟಾರ್ಟ್‌ಅಪ್ ಮಿಷನ್ ಮೂಲಕ ಹಸಿರು ತಂತ್ರಜ್ಞಾನಗಳನ್ನು ಮತ್ತು ಸುಸ್ಥಿರ ತಂತ್ರಜ್ಞಾನಗಳ ಬೆಳವಣಿಗೆ ಕಡೆಗೆ ಗಮನಹರಿಸಿದೆ” ಎಂದು ಹೇಳಿದರು.

“ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (ಎಸ್‌ಐಎಸ್‌ಎಫ್‌ಎಸ್) ದಕ್ಷಿಣ ಭಾರತದ ಅನೇಕ ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಹಂತದ ಫಂಡಿಂಗ್ ಅನ್ನು ಒದಗಿಸಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳು ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ತಮ್ಮದೇ ಆದ ವೆಂಚರ್ ಫಂಡ್ ಗಳನ್ನು ಪ್ರಾರಂಭಿಸಿವೆ. ಎಪಿ ಇನ್ನೋವೇಶನ್ ಸೊಸೈಟಿಯು ಟೈರ್ 2 ಮತ್ತು ಟೈರ್ 3 ನಗರಗಳ ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಒದಗಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐ ಐ ಎಸ್ ಸಿ) ಇನ್ನೋವೇಶನ್ ಆಂಡ್ ಇನ್‌ಕ್ಯುಬೇಶನ್ ಸೆಂಟರ್, ಮಹಿಳಾ ಉದ್ಯಮಿಗಳಿಗೆ ನೆರವಾಗುವ ಹೈದರಾಬಾದ್ ನ ವೀ ಹಬ್ ಮತ್ತು ಕೊಚ್ಚಿ ಮೂಲದ ಕೇರಳ ಟೆಕ್ನಾಲಜಿ ಇನ್ನೋವೇಶನ್ ಝೋನ್ ಸ್ಟಾರ್ಟಪ್ ಗಳಿಗೆ ಭಾರಿ ನೆರವು ಒದಗಿಸುತ್ತಿದೆ” ಎಂದು ಹೇಳಿದರು.

“ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ದಕ್ಷಿಣ ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಅತ್ಯುತ್ತಮವಾಗಿ ನೆರವು ಒದಗಿಸುತ್ತಿದೆ. ಉದ್ಯಮದ ನಾಯಕರು, ನೀತಿ ನಿರೂಪಕರು ಮತ್ತು ಹೂಡಿಕೆದಾರರ ಜೊತೆ ಸಂಪರ್ಕ ಕಲ್ಪಿಸುತ್ತದೆ. ಸಿಐಐ ಎಸ್ಆರ್ ಇನ್ನೋವೇಶನ್ ಆಂಡ್ ಸ್ಟಾರ್ಟ್‌ಅಪ್ ಇಕೋಸಿಸ್ಟಮ್ಸ್ ಟಾಸ್ಕ್‌ ಫೋರ್ಸ್‌ ಮೂಲಕ ಈ ಸಂಸ್ಥೆಯು ಸ್ಟಾರ್ಟಪ್ ಗಳಿಗೆ ಭಾರಿ ನೆರವು ಒದಗಿಸುತ್ತಿದೆ. . ಇವೆಲ್ಲಾ ಕಾರಣಗಳಿಂದ ದಕ್ಷಿಣ ಭಾರತ ವೇಗವಾಗಿ ಈ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ” ಎಂದು ಹೇಳಿದರು.