ಶ್ರೀ ಮದ್ಭಗವದ್ಗೀತಾ : 8
ಧ್ಯಾನ ಶ್ಲೋಕಗಳು
ಶ್ರೀಗಣಪತಿ ಸಚ್ಚಿದಾನಂದ ಸದ್ಗುರುಭ್ಯೋ ನಮಃ
1 .ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣ ಮುನಿನಾ ಮಧ್ಯೆ ಮಹಾಭಾರತಮ್ ।
ಅದೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಂ
ಅಂಬ ತ್ವಾಮನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ ||
ಹೇ ಭಗವದ್ಗೀತಾ ಮಾತೆಯೇ! ಭಗವಂತನಾದ ನಾರಾಯಣನು. ಅರ್ಜುನನಿಗೋಸ್ಕರ ಸ್ವಯಂ ನಿನ್ನನ್ನು ಬೋಧಿಸಿದ್ದಾನೆ. ಪುರಾತನ ಮಹರ್ಷಿಯಾದ ವ್ಯಾಸನು ಮಹಾಭಾರತದಲ್ಲಿ ನಿನ್ನನ್ನು ಪೋಣಿಸಿದ್ದಾನೆ. ಪೂಜ್ಯಳಾಗಿ 18 ಅಧ್ಯಾಯಗಳಿರುವ ನೀನು ಅದ್ವೈತವೆಂಬ ಅಮೃತವನ್ನು ಸುರಿಸುತ್ತಿರುವೆ. ಅದರಿಂದ ಸಂಸಾರಬಂಧನಗಳನ್ನು ತೊಲಗಿಸುತ್ತಿರುವೆ. ಅಂತಹ ನಿನ್ನನ್ನು ನಾನು ಅನುಸಂಧಾನಮಾಡಿಕೊಳ್ಳುತ್ತಿದ್ದೇನೆ. (ಅನುಸಂಧಾನ = ಆ ಅರ್ಥವನ್ನು ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿಟ್ಟುಕೊಳ್ಳುವುದು.)
2.ನಮೋಽಸ್ತುತೇ ವ್ಯಾಸ ವಿಶಾಲಬುದ್ದೇ
ಫುಲ್ಲಾರವಿಂದಾಯತ ಪತ್ರನೇತ್ರ ।
ಯೇನ ತ್ವಯಾ ಭಾರತ ತೈಲಪೂರ್ಣಃ
ಪ್ರಜ್ವಾಲಿತೋ ಜ್ಞಾನಮಃಯಃ ಪ್ರದೀಪಃ||
ಓ ವ್ಯಾಸಮಹರ್ಷಿಯೇ! ನಿನ್ನ ಬುದ್ದಿ ವಿಶಾಲವಾದುದು. ನಿನ್ನ ಕಣ್ಣುಗಳು ಅರಳಿದ ಪದ್ಮದಲ್ಲಿ ಎರಡುಕಡೆಗೂ ವಿಸ್ತರಿಸಿದ ಎರಡು ಪತ್ರಗಳಂತೆ ವಿಶಾಲವಾಗಿವೆ. ನೀನು ಜ್ಞಾನವೆಂಬ ದೊಡ್ಡ ದೀಪವನ್ನು ಬೆಳಗಿಸಿ, ಆ ಹಣತೆಯನ್ನು ಮಹಾಭಾರತವೆಂಬ ತೈಲದಿಂದ ತುಂಬಿಸಿರುವೆ. ಅಂತಹ ನಿನಗೆ ನಮಸ್ಕಾರವು.
3.ಪ್ರಪನ್ನ ಪಾರಿಜಾತಾಯ ತೋತ್ರ ವೇತ್ರೆಕಪಾಣಯೇ।
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತ ದುಹೇ ನಮಃ||
ಶರಣುಬೇಡಿದವರಿಗೆ ಕಲ್ಪವೃಕ್ಷದಂತಹವನೂ, ಕುದುರೆಗಳನ್ನು ಹಿಡಿದುಕೊಂಡಿರುವವನೂ, ಓಡಿಸುವ ಚಾವಟಿಕೋಲನ್ನು ಎಡಗೈಯಲ್ಲಿ ಬಲಗೈಯಲ್ಲಿ ಜ್ಞಾನಮುದ್ರೆಯನ್ನು ಧರಿಸಿರುವವನೂ, ಭಗವದ್ಗೀತೆಯೆಂಬ ಅಮೃತವನ್ನು ಕರೆಯುತ್ತಿರುವವನೂ ಆದ ಶ್ರೀಕೃಷ್ಣನಿಗೆ ನಮಸ್ಕಾರವು.
4.ವಸುದೇವಸುತಂ ದೇವಂ ಕಂಸಚಾಣೂರ ಮರ್ದನಮ್ | ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||
ವಸುದೇವನ ಪುತ್ರನೂ, ಸ್ವಯಂಪ್ರಕಾಶಮಾನನೂ, ಚಾಣೂರರನ್ನು ಸಂಹರಿಸಿದವನೂ, ದೇವಕೀದೇವಿಗೆ ಪರಮಾನಂದವನ್ನು ಉಂಟುಮಾಡುವವನೂ, ಜಗದ್ಗುರುವೂ ಆದ ಶ್ರೀಕೃಷ್ಣನಿಗೆ ನಮಸ್ಕರಿಸುತ್ತಿದ್ದೇನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ