ಬಹು ಭಾಷಾ ದಾಸರು ಶ್ರೀ ಮಹಿಪತಿ ದಾಸರು
ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ, ಕರ್ಮ ಯೋಗ, ಭಕ್ತಿ ಯೋಗ, ರಾಜಯೋಗ, ಮಂತ್ರಯೋಗ, ಜಪ, ನಾಮಸಾಧನೆ ಹೀಗೆ ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ ಗುರಿಯನ್ನು ಮುಟ್ಟಿಲು ಅನುವು ಮಾಡಿಕೊಡುತ್ತದೆ . ಇಂತಹ ಶ್ರೇಷ್ಠ ಸಾಧಕ ಹರಿದಾಸರಾದ ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ.
ಮಹಿಪತಿ ದಾಸರು ಇದ್ದ ಅವಧಿ ಮಧ್ಯ ಅವಧಿ ೧೬ ನೇ ಶತಮಾನ. ಪುರಂದರ ದಾಸರ ಕಾಲ ಮುಗಿದ ಮೇಲೆ ವಿಜಯದಾಸರ ಕಾಲ (ಕ್ರಿ. ಶ.೧೫೬೪ ರಿಂದ ಕ್ರಿ. ಶ.೧೬೮೨), ಈ ಘಟ್ಟವನ್ನು ಹರಿದಾಸ ಸಾಹಿತ್ಯ ನಿಂತು ಹೋಗಿತ್ತು ಎನ್ನುತ್ತಾರೆ. ಆದರೆ ಈ ಘಟ್ಟದಲ್ಲಿ ಮಹಿಪತಿದಾಸರು ಬರುತ್ತಾರೆ. ಅಂದರೆ ಪುರಂದರ ದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರು ಬರುವ ಮುಂಚೆ ( ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ .
ಮಹಿಪಾತಿದಾಸರನ್ನು, ಮಹಿಪತಿ ರಾಜ, ಮಹಿಪತಿ ಸ್ವಾಮಿ, ಮಹಿಪತಿದಾಸರು, ಮಹಿಪತಿರಾಯ ಎಂದು ಕರೆಯುವುದು ಇದೆ. ಇವರ ಹರಿದಾಸ ಸಾಹಿತ್ಯವು ವಿಶಿಷ್ಟ ರೀತಿಯಿಂದ ಕೂಡಿದೆ. ಹರಿ ಸರ್ವೋತ್ತಮತೆ ಸಾರುವ ಮದ್ವ ಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ
ಆಡು ಭಾಷೆಯಲ್ಲಿ ರಚಿಸಿದ್ದಾರೆ, ಹಾಗೇ ಇವರು ಊರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯಲ್ಲಿ ಸ್ಥಿರವಾಗಿ. ಇದ್ದು, ಯೋಗ ಜಪಗಳ ಮೂಲಕ ಭಗವಂತನನ್ನು ಕಂಡವರು.
ಶ್ರೀ ಮಹಿಪತಿ ದಾಸರ ಸಾಹಿತ್ಯ ಎಲ್ಲ ಹರಿದಾಸರ ಸಾಹಿತ್ಯಗಳಿಗಿಂತ ವಿಭಿನ್ನ ಶೈಲಿ.
ಇವರು ವರಕವಿ, ತತ್ವಜ್ಞಾನಿ, ಅನುಭಾವಿಕರು ಅಂತಲೂ ಹೇಳಬಹುದು. ಗೂಢ ಅನುಭವಗಳ ತಮ್ಮ ಪದಗಳನ್ನು ಕೀರ್ತನೆ, ಪದಗಳಾಗಿ ರಚಿಸಿದವರು. ಪರಮಾತ್ಮನ ಸಾಕ್ಷಾತ್ಕಾರವನ್ನು ಸವಿದು ಸಾಹಿತ್ಯದ ಮೂಲಕ ಹರಿದಾಸ ಸಾಹಿತ್ಯ ಪೋಷಿಸಿದವರು.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ “ಮಹಿಪತಿ ರಾಯರ ಕೃತಿಗಳು” ಸಂಗ್ರಹದಲ್ಲಿ ದೊರೆತ ಮಹಿಪತಿ ದಾಸರ ಒಟ್ಟು ಕೃತಿಗಳು ೭೫೪, ಇವುಗಳಲ್ಲಿ ಹಿಂದಿ, ಮಾರಾಠಿ, ಉರ್ದು, ತೆಲಗು ಮಿಶ್ರ ಭಾಷಾ ಕೃತಿಗಳು ಸೇರ್ಪಡೆಯಗಿವೆ. ಕನ್ನಡ ಕೃತಿಗಳು ೬೮೫, ಮರಾಠಿ ಕೃತಿಗಳು ೪೬ ಹಿಂದಿ ಕೃತಿಗಳು ೧೮, ಮಿಶ್ರ ಕೃತಿಗಳು ೫. ಇನ್ನು ಕನ್ನಡ ಕೃತಿಗಳಲ್ಲಿ ೩೨೨ ಹರಿವಾಯುಗುರುಗಳು, ಅನುಭಾವ, ಸಾಕ್ಷಾತ್ಕಾರ ೧೩೪, ಸ್ವಾನುಭಾವ ಉಪದೇಶ ೧೫೩, ದ್ವೈತ ಮತ ೧೫, ಇತರ ೬೩.
ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ. ಹಾಗೆ ವೈವಿಧ್ಯಮಯವೂ ಕೂಡ ಆಗಿದೆ. ಇವರು ಬಹು ಭಾಷಾ ವಿಶಾರದಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ , ತೆಲಗು, ದಖಣಿ, ಮರಾಠಿ, ಪರ್ಷಿಯನ್ ಭಾಷಾಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕೀರ್ತನೆಗಳು, ಸ್ತೋತ್ರ, ಆರತಿ ಪದ, ಕೋಲಾಟದ ಪದ (ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ ಕೋಲೆ,), ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹ0ತಿಪದ, ಸುಗ್ಗಿ ಪದ, ಸತ್ಸಂಗದ* **ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ*
*ಸಾಹಿತ್ಯವು ಸಂಪದ್ಭರಿತ ಹಾಗೆ ವಿಶಾಲ ದೃಷ್ಟಿಯ ಕೋನದಿಂದ ಕೂಡಿದೆ.*
*ಇವರು ಕನ್ನಡ,ಉರ್ದು, ಮರಾಠಿ, ತೆಲಗು, ಪಾರ್ಸಿ, ಸಂಸ್ಕೃತ ಬಹು ಭಾಷಾ ಪಂಡಿತರಿದ್ದರು. ಇವರ ಒಟ್ಟು ಅಂಕಿತ ೧೪ ಇವೆ. ಇವರು 700 ಕೃತಿಗಳಿಗಿಂತ ಹೆಚ್ಚು ಸಾಹಿತ್ಯ ರಚಿಸಿ , ಅದರಲ್ಲಿ ಹರಿ ಸರ್ವೋತ್ತಮತ್ವದ ಬಗ್ಗೆ ಬಹಳ ಪದ್ಯಗಳು ಇವೆ. ಹೀಗೆ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ .
ತಮ್ಮ ಕೊನೆ ದಿನಗಳಲ್ಲಿ ಅಪರೋಕ್ಷ ಜ್ಞಾನವನ್ನು ತಿಳಿದು ಮಹಿಪತಿದಾಸರು ಕೃಷ್ಣ ನದಿಯ ತಟದಲ್ಲಿ ಸ್ಥಿರವಾದ ಆಸನ ಹಾಕಿ ಅನುಷ್ಠಾನಕ್ಕೆ ಕುಳಿತು ಸರಿಯಾದ ಏಳನೇ ದಿನವಾದ ಕಾರ್ತಿಕ ವದ್ಯ ಅಮಾವಾಸ್ಯೆಯ ದಿನ ಇವರ ಪ್ರಾಣಪಕ್ಷಿಯು ಶ್ರೀಹರಿಯಲ್ಲಿ ಸೇರಿತು. ಕೃಷ್ಣರಾಯರಿಗೆ ತಂದೆ ಎನಿಸಿದ ಗುರುವಾದ ಮಹಿಪತಿರಾಯರ ನೆನಪು ಬಹಳ ಬಂದು ದುಃಖಿಸುತ್ತಾ ಮಲಗಿದಾಗ ಕನಸಿನಲ್ಲಿ ಮಹಿಪತಿ ದಾಸರು ಬಂದು ನಾನು ನಿತ್ಯ ಅನುಷ್ಠಾನ ಮಾಡುತ್ತಿದ್ದ ಶಮಿ ವೃಕ್ಷ ಭೂಮಿಯ ಕೆಳಗೆ ನಾನು ನೂರಾ ಎಂಟು ಸಾಲಿಗ್ರಾಮ ರೂಪದಲ್ಲಿರುವೆ ವೃಂದಾವನ ಕಟ್ಟಿಸು ನಾನು ಅಲ್ಲಿರುವೆ ಎಂದು ಹೇಳಿದರು. ಅಲ್ಲಿ ಅಗೆದು ನೋಡಲಾಗಿ ೧೦೮ ಸಾಲಿಗ್ರಾಮಗಳು ದೊರೆತವು. ಆದರಂತೆ ಕೃಷ್ಣರಾಯರು ವೃಂದಾವನ ಕಟ್ಟಿಸಿ , ಯೋಗ ದಂಡ , ಪಾದುಕಾ ಇಟ್ಟು ಪೂಜೆ ಮಾಡುತ್ತಲೆ ಇದ್ದು, ಈಗಲೂ ಅದೇ ವಿಧಾನ ನಡೆದು ಬಂದಿದೆ. ಬಂದ ಭಕ್ತರನ್ನು ಉದ್ಧರಿಸುತ್ತಾ ಕಾಖಂಡಕಿಯಲ್ಲಿ ನೆಲಸಿದ್ದಾರೆ.
✍️ ಪ್ರಿಯಾ ಪ್ರಾಣೇಶ ಹರಿದಾಸ
(ವಂಶಸ್ಥೆ ಆಧ್ಯಾತ್ಮ ಚಿಂತಕಿ, ಕವಿಯತ್ರಿ, ಬರಹಗಾರ್ತಿ)
ಮೋ: ೮೦೫೦೪೩೬೭೫೨