ಶ್ರೀ ಮದ್ಭಗವದ್ಗೀತಾ : 30
20. ನ ಜಾಯತೇ ಮ್ರಿಯತೇ ವಾ ಕದಾ ಚಿತ್
ನಾಯಂ ಭೂತ್ವಾ ಭವಿತಾ ವಾ ನ ಭೂಯಃ।
ಅಜೋ ನಿತ್ಯ ಶ್ಶಾಶ್ವತೋಽಯಂ ಪುರಾಣಃ
ನ ಹನ್ಯತೇ ಹನ್ಯಮಾನೇ ಶರೀರೇ॥
ಅಯಂ = ಈ ದೇಹಧಾರಿಯಾದ ಆತ್ಮನು, ಕದಾಚಿತ್ = ಎಂದಿಗೂ, ನ ಜಾಯತೇ = ಹುಟ್ಟುತ್ತಿಲ್ಲ, ವಾ = ಮತ್ತು, ನ-ಮ್ರಿಯತೇ = ಸಾಯುತ್ತಿಲ್ಲ. ಅಯಂ = ಈ ಆತ್ಮನು, ಭೂಯಃ = ಆಮೇಲೆ, ಅಭವಿತಾ = ಇಲ್ಲದೇಹೋಗುವುದು, ನ = ಆಗದು. ವಾ-ನ = ಅಥವಾ ಸ್ವಲ್ಪಕಾಲ ಇಲ್ಲದೆಯೇ, ಅನಂತರ ಇರುವುದು ಕೂಡ ಆಗದು. ಅಯಂ = ಈ ಆತ್ಮನು, ಅಜಃ = ಹುಟ್ಟಿಲ್ಲದವನು, ಶಾಶ್ವತಃ = ಕರಗಿಹೋಗುವವನಲ್ಲ, ಪುರಾಣಃ = ನಿತ್ಯವೂ ಪ್ರಾಚೀನನಾದವನು ಮತ್ತು ನಿತ್ಯ ನೂತನವಾದವನು. ಶರೀರೇ = ಈ ಶರೀರವು, ಹನ್ಯಮಾನೇ = ಮಾರ್ಪಾಡುಗಳನ್ನು ಹೊಂದಿಸಲ್ಪಡುತ್ತಿದ್ದರೂ, ಅಯಂ = ಈ ಆತ್ಮನು, ನ-ಹನ್ಯತೇ = ಮಾರ್ಪಾಡುಗಳನ್ನು ಹೊಂದಿಸಲ್ಪಡುತ್ತಿಲ್ಲ.
ಆತ್ಮನು ಎಂದಿಗೂ ಹುಟ್ಟುವುದಿಲ್ಲ. ಎಂದಿಗೂ ಮರಣಿಸುವುದಿಲ್ಲ. ಆತ್ಮನು ಸ್ವಲ್ಪಕಾಲ ಇದ್ದು ಆಮೇಲೆ ಇಲ್ಲದಿರುವುದಾಗಲಿ, ಕೆಲಕಾಲ ಇಲ್ಲದೆಯೇ ಆಮೇಲೆ ಇರುವುದಾಗಲಿ, ಈ ಎರಡೂ ಈತನಿಗೆ ಇರುವುದಿಲ್ಲ. ಆತ್ಮ ಕಾಲರೀತಿಯಲ್ಲಿ ನೋಡಿದರೆ ನಿತ್ಯವಾದದ್ದು. ದೇಶರೀತಿಯಲ್ಲಿ ನೋಡಿದರೆ ಹೆಚ್ಚುವುದಾಗಲಿ, ಕುಗ್ಗುವುದಾಗಲಿ, ಇಲ್ಲದಿರುವುದು. ಇದು ಬಹಳ ಪ್ರಾಚೀನವಾದುದು. ಬಹಳ ನೂತನವು ಕೂಡ ಆಗಿರುವುದು. ಮೇಲ್ನೋಟಕ್ಕೆ ಕಾಣಿಸುವ ಶರೀರದಲ್ಲಿ ಎಷ್ಟೋ ಮಾರ್ಪಾಡುಗಳು ಬಂದರೂ, ಈ ಆತ್ಮನಲ್ಲಿ ಮಾತ್ರ ಯಾವ ವಿಧವಾದ ಬದಲಾವಣೆಗಳೂ ಇರವು.
ವಿವರಣೆ:
ಹಿಂದಿನ ಶ್ಲೋಕದಲ್ಲಿ ಆತ್ಮಕ್ಕೆ ಸಾಯುವುದಾಗಲಿ, ಸಾಯಿಸುವುದಾಗಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ನಿಜಕ್ಕೂ ಇಲ್ಲಿ ಸಾವು ಎಂಬ ಪದಪ್ರಯೋಗದಿಂದ “”ಆತ್ಮಕ್ಕೆ ಯಾವ ವಿಧವಾದ ಮಾರ್ಪಾಡುಗಳೂ ಇಲ್ಲ” ಎಂಬ ವಿಷಯವನ್ನೇ ವೇದಮಾತೆ ತನ್ನ ಉದ್ದೇಶವಾಗಿ ಹೊಂದಿದ್ದು, ಆ ವಿಷಯವನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ಕಠೋಪನಿಷತ್ತಿನ ಈ ಮಂತ್ರವನ್ನು ಬೋಧಿಸಿದ್ದಾಳೆ.
21. ವೇದಾವಿನಾಶಿನಂ ನಿತ್ಯಂ ಯ ಏನಮಜ ಮವ್ಯಯಮ್।
ಕಥಂ ಸ ಪುರುಷಃ ಪಾರ್ಥ! ಕಂ ಘಾತಯತಿ ಹಂತಿ ಕಮ್॥
ಪಾರ್ಥ = ಎಲೈ ಅರ್ಜುನನೇ!, ಯಃ = ಯಾವನಾದರೆ, ಏನಂ = ಈ ಪ್ರಕರಣಗಳಲ್ಲಿ ನಾವು ಹೇಳಿಕೊಂಡ ಆತ್ಮವನ್ನು, ಅಜಂ = ಹುಟ್ಟಿಲ್ಲದ್ದಾಗಿಯೂ, ನಿತ್ಯಂ = ಬದಲಾವಣೆಗಳು ಇಲ್ಲದ್ದಾಗಿಯೂ, ಅವ್ಯಯಂ = ಕ್ಷೀಣತ್ವವಿಲ್ಲದ್ದಾಗಿಯೂ, ಅವಿನಾಶಿನಂ = ವಿನಾಶವಿಲ್ಲದ್ದಾಗಿಯೂ, ವೇದ = ತಿಳಿದುಕೊಳ್ಳುತ್ತಿದ್ದಾನೋ, ಸಃ = ಅಂತಹ, ಪುರುಷಃ = ಮಾನವನು, ಕಂ = ಯಾರನ್ನು, ಘಾತಯತಿ = ಸಂಹಾರ ಮಾಡಿಸುತ್ತಾನೆ? ಕಂ = ಯಾರನ್ನು, ಹಂತಿ = ಸಂಹರಿಸುತ್ತಾನೆ? ಕಥಂ = ಹೇಗೆ, ಘಾತಯತಿ = ಸಂಹಾರ ಮಾಡಿಸುತ್ತಾನೆ? ಕಥಂ = ಹೇಗೆ, ಹಂತಿ = ಸಾಯಿಸುತ್ತಾನೆ?
ಎಲೈ ಅರ್ಜುನನೇ! ನಾವು ಈಗ ಹೇಳಿಕೊಂಡ ಸರ್ವದೇಹಧಾರಿಯಾದ ಆತ್ಮಕ್ಕೆ ಷಡ್ಭಾವ ವಿಕಾರಗಳಲ್ಲಿ ಮೊದಲನೆಯದಾದ ಜನ್ಮವಾಗಲೀ, ನಾಲ್ಕನೆಯದಾದ ಬದಲಾವಣೆಯಾಗಲೀ, ಐದನೆಯದಾದ ಕ್ಷೀಣತ್ವವಾಗಲೀ, ಆರನೆಯದಾದ ವಿನಾಶವಾಗಲೀ, ಇಲ್ಲವೆಂದೂ, ಇವು ಇಲ್ಲವಾದ್ದರಿಂದ, ತಕ್ಕ ವಿಕಾರಗಳು ಕೂಡ ಇರುವ ಅವಕಾಶವಿಲ್ಲವೆಂದೂ, ಈ ವಿಧವಾದ ಜ್ಞಾನವು ಯಾರಿಗೆ ಉಂಟಾಗುವುದೋ, ಅಂತಹ ಮಾನವನು ಲೋಕದಲ್ಲಿ ಯಾರನ್ನಾದರೂ ಸಾಯಿಸುವುದಾಗಲೀ, ಸಾಯಿಸುವಂತೆ ಮಾಡುವುದಾಗಲೀ, ಸಾಧ್ಯವೇ? ಅಂತಹ ಮಾನವನು ಯಾವ ವಿಧಾನದಿಂದ ಸಾಯಿಸುವುದು ಎಂಬ ಕ್ರಿಯೆಯನ್ನು ಮಾಡಬಲ್ಲನು? ಅಥವಾ ಸಾಯಿಸುವುದನ್ನು ಪ್ರೋತ್ಸಾಹಿಸಬಲ್ಲನು? ಅಂದರೆ, ಅಂತಹ ಜ್ಞಾನಿಯು ಯಾವ ವಿಧವಾದ ಕ್ರಿಯೆಗಳನ್ನೂ ಮಾಡಲಾರನು, ಮಾಡೆಂದು ಇತರರನ್ನು ಪ್ರೋತ್ಸಾಹಿಸಲಾರನು.
ವಿವರಣೆ:
ಹೀಗೆ ಕಳೆದ 17ನೆಯ ಶ್ಲೋಕದಲ್ಲಿ ದೇಹಿಯಾದ ಸತ್ಪದಾರ್ಥಕ್ಕೆ
ನಾಶವೇ ಇಲ್ಲವೆಂದು ಪ್ರತಿಪಾದಿಸಿ, ಆ ಮಾತಿಗೆ ಪ್ರಮಾಣವಾಗಿ ಕಠೋಪನಿಷತ್ತಿನಿಂದ ಎರಡು ಮಂತ್ರಗಳನ್ನು ಉದಾಹರಿಸಿದ ಭಗವಂತನು, ಇನ್ನು ಆ ವಿಷಯಕ್ಕೆ ಮತ್ತೊಂದುಸಲ ಒತ್ತು ನೀಡುತ್ತಾ – ಅದನ್ನು ತಿಳಿದುಕೊಳ್ಳುವುದರಿಂದ ಉಂಟಾಗಬಲ್ಲ ಫಲಿತವನ್ನು ಸೂತ್ರಪ್ರಾಯವಾಗಿ ಇಲ್ಲಿ ವಿವರಿಸಿದ್ದಾನೆ.
22. ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಽಪರಾಣಿ।
ತಥಾ ಶರೀರಾಣಿ ವಿಹಾಯ ಜೀರ್ಣಾನಿ
ಅನ್ಯಾನಿ ಸಂಯಾತಿ ನವಾನಿ ದೇಹೀ॥
ನರಃ = ಮಾನವನು, ಜೀರ್ಣಾನಿ = ಹಳೆಯದಾಗಿಹೋದ, ವಾಸಾಂಸಿ = ವಸ್ತ್ರಗಳನ್ನು, ವಿಹಾಯ = ಬಿಟ್ಟುಬಿಟ್ಟು, ಅಪರಾಣಿ = ಬೇರೆಯ, ನವಾನಿ = ಹೊಸದಾದ ವಸ್ತ್ರಗಳನ್ನು, ಯಥಾ = ಹೇಗೆ, ಗೃಹ್ಣಾತಿ = ಸ್ವೀಕರಿಸುತ್ತಿರುವನೋ, ತಥಾ = ಹಾಗೆಯೇ, ದೇಹೀ = ದೇಹಧಾರಿಯಾದ ಜೀವಾತ್ಮನು, ಜೀರ್ಣಾನಿ = ಕರ್ಮಕ್ಷಯದಿಂದ ದುರ್ಬಲವಾಗಿಹೋದ, ಶರೀರಾಣಿ = ದೇಹಗಳನ್ನು, ವಿಹಾಯ = ಬಿಟ್ಟು, ಅನ್ಯಾನಿ = ಬೇರೆಯ, ನವಾನಿ = ಹೊಸ ದೇಹಗಳನ್ನು, ಸಂಯಾತಿ = ಹೋಗಿ ಸೇರುತ್ತಿದ್ದಾನೆ.
ಮಾನವನು ತಾನು ಕಟ್ಟಿಕೊಂಡ ವಸ್ತ್ರಗಳು ಮಾಸಿಹೋಗಿ, ಸುಕ್ಕಾಗಿ, ಹರಿದುಹೋದಾಗ, ಅವುಗಳನ್ನು ಬಿಟ್ಟು, ಹೊಸವಸ್ತ್ರಗಳನ್ನು ಧರಿಸುತ್ತಿದ್ದಾನೆ. ಹಾಗೆ ವಸ್ತ್ರಗಳಲ್ಲಿ ಬದಲಾವಣೆ ಬಂದರೂ, ಅವುಗಳನ್ನು ಧರಿಸಿದ ಮಾನವನಲ್ಲಿ ಮಾರ್ಪಾಡು ಬರಲಿಲ್ಲ. ಹಾಗೆಯೇ ದೇಹಧಾರಿಯಾದ ಜೀವಾತ್ಮನು ಕೂಡ ತನ್ನ ಪೂರ್ವ ಕರ್ಮಬಲದಿಂದ ತಾನು ಧರಿಸಿದ ಶರೀರಕ್ಕೆ ಹಳೆಯ ಕರ್ಮಗಳ ಬಲವು ಕಡಿಮೆಯಾಗಿ ದುರ್ಬಲವಾದರೆ, ಆಗ ಆ ಜೀವನು ಹಳೆಯ ಶರೀರವನ್ನು ಬಿಟ್ಟು, ಹೊಸ ಶರೀರವನ್ನು ಸ್ವೀಕರಿಸುತ್ತಾ ಇರುತ್ತಾನೆ. ಹೀಗೆ ಒಂದುಸಲವಲ್ಲದೆ, ಬೇಕಾದಷ್ಟುಸಲ ನಡೆಯುತ್ತಲೇ ಇರುತ್ತದೆ. ಹೀಗೆ ಎಷ್ಟುಸಲ ದೇಹಗಳು ಬದಲಾದರೂ, ಒಳಗಿರುವ ದೇಹಧಾರಿಯು ಮಾತ್ರ ಬದಲಾಗುವುದೇ ಇಲ್ಲ.
ವಿವರಣೆ:
ಆತ್ಮಕ್ಕೆ ವಿನಾಶವಿಲ್ಲವೆಂದು ಹೇಳಿದ್ದೀರಲ್ಲವೆ! ಆ ಮಾತನ್ನು ಒಪ್ಪಿದರೂ, “”ಶರೀರವು ನಶಿಸಿಹೋಗುವುದು ಕಾಣುತ್ತಲೇ ಇದೆಯಲ್ಲವೆ, ಅದಕ್ಕಾಗಿ ದುಃಖಿಸುವುದರಲ್ಲಿ ತಪ್ಪೇನಿದೆ?” ಎಂಬ ಪ್ರಶ್ನೆಯೊಂದು ಉಳಿದುಹೋಗಿದೆ. ಭಗವಂತನು ಈ ಪ್ರಶ್ನೆಗೆ ಒಂದು ಉಪಮಾನದೊಂದಿಗೆ ಇಲ್ಲಿ ಸಮಾಧಾನವನ್ನು ಹೇಳಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ