ಶ್ರೀಮದ್ಭಗವದ್ಗೀತಾ : 31
23. ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ।
ನ ಚೈನಂ ಕ್ಲೇದಯಂತ್ಯಾಪಃ ನ ಶೋಷಯತಿ ಮಾರುತಃ॥
ಏನಂ = ಈ ದೇಹಧಾರಿಯಾದ ಜೀವಾತ್ಮನನ್ನು, ಶಸ್ತ್ರಾಣಿ = ಕತ್ತಿಗಳು ಮೊದಲಾದ ಆಯುಧಗಳು, ನ-ಛಿಂದಂತಿ = ತುಂಡು ಮಾಡಲಾರವು. ಏನಂ = ಈ ದೇಹಧಾರಿಯನ್ನು, ಪಾವಕಃ = ಅಗ್ನಿಯು, ನ-ದಹತಿ = ಸುಡಲಾರನು. ಚ = ಮತ್ತು, ಏನಂ = ಈ ದೇಹಧಾರಿಯನ್ನು, ಆಪಃ = ನೀರು, ನ-ಕ್ಲೇದಯಂತಿ = ತೋಯಿಸಲಾರದು, ಮಾರುತಃ = ಗಾಳಿಯು, ನ-ಶೋಷಯತಿ = ಒಣಗಿಸಲಾರದು.
ಈ ಆತ್ಮನಲ್ಲಿ ವಿಭಾಗಗಳು (ಅವಯವಗಳು) ಇಲ್ಲವೆಂದು ಹಿಂದೆಯೇ (18ನೆಯ ಶ್ಲೋಕದಲ್ಲಿ) ಹೇಳಿಕೊಂಡಿದ್ದೇವೆ. ವಿಭಾಗಗಳಿದ್ದ ಹೊರತು ಅದು ಕತ್ತರಿಸಲ್ಪಡಲು ಸಾಧ್ಯವಿಲ್ಲ. ಹಾಗಾಗಿಯೇ ಇದನ್ನು ಯಾವ ಆಯುಧವೂ ಕತ್ತರಿಸಲಾರದು. ಬೆಂಕಿಯು ಸುಡಬೇಕೆಂದರೂ ಕೂಡಾ ಆ ಪದಾರ್ಥದಲ್ಲಿ ಅವಯವಗಳು ಇರಲೇಬೇಕು. ನೀರು ನೆನೆಸಬೇಕೆಂದರೂ ಅವಯವಗಳು ಇರಲೇಬೇಕು. ನೆನೆದದ್ದನ್ನು ಒಣಗಿಸಬೇಕೆಂದರೂ ಅವಯವಗಳು ಇರಲೇಬೇಕು. ಆತ್ಮನಲ್ಲಿ ಅವಯವಗಳು ಇಲ್ಲವೇ ಇಲ್ಲವಾದ್ದರಿಂದ, ಆಯುಧಗಳೇ ಅಲ್ಲದೆ, ಬೆಂಕಿ, ನೀರು, ಗಾಳಿ, ಮೊದಲಾದವು ಕೂಡ ಅದರಲ್ಲಿ ಯಾವ ವಿಕಾರಗಳನ್ನೂ ಉಂಟುಮಾಡಲಾರವು.
24. ಅಚ್ಛೇದ್ಯೋಽಯ ಮದಾಹ್ಯೋಽಯಂ ಅಕ್ಲೇದ್ಯೋಽಶೋಷ್ಯ ಏವ ಚ।
ನಿತ್ಯ ಸ್ಸರ್ವಗತ ಸ್ಸ್ಥಾಣುಃ ಅಚಲೋಽಯಂ ಸನಾತನಃ॥
ಅಯಂ = ಈ ಆತ್ಮನು, ಅಚ್ಛೇದ್ಯಃ = ತುಂಡುಮಾಡಲು ಸಾಧ್ಯವಾಗದವನು. ಅಯಂ = ಈ ಆತ್ಮನು, ಅದಾಹ್ಯಃ = ಸುಟ್ಟುಹಾಕಲು ಶಕ್ಯವಾಗದವನು. ಅಕ್ಲೇದ್ಯಃ = ನೆನೆಸಲು ಸಾಧ್ಯವಾಗದವನು. ಏವ-ಚ = ಮತ್ತು, ಅಶೋಷ್ಯಃ = ಒಣಗಿಸಲು ಸಾಧ್ಯವಾಗದವನು. ಅಯಂ = ಈ ಆತ್ಮನು, ನಿತ್ಯಃ = ಎಲ್ಲಾ ಕಾಲದಲ್ಲೂ ಇರುವನು, ಸರ್ವಗತಃ = ಎಲ್ಲೆಲ್ಲೂ ವ್ಯಾಪಿಸಿ ಇರುವವನು, ಸ್ಥಾಣುಃ = ಸ್ಥಿರವಾಗಿ ಇರುವವನು, ಅಚಲಃ = ಕದಲದೇ ಇರುವವನು, ಸನಾತನಃ = ಎಲ್ಲತಕ್ಕಿಂತಲೂ ಹಳೆಯವನು.
ಎಲೈ ಅರ್ಜುನನೇ! ಈ ಆತ್ಮನು ಕತ್ತರಿಸಿಲ್ಪಡಲಾಗಲಿ, ಸುಡಲ್ಪಡಲಾಗಲಿ, ನೆನೆಸಲ್ಪಪಡಲಾಗಲಿ, ಒಣಗಿಸಲ್ಪಡಲಾಗಲಿ, ಸಾಧ್ಯವಾಗದವನು. ಅದಕ್ಕಾಗಿಯೇ ಇವನು ನಿತ್ಯನು, ಸರ್ವವ್ಯಾಪಕನು, ಸುಸ್ಥಿರನು, ನಿಶ್ಚಲನು, ಅತಿ ಪ್ರಾಚೀನನು ಕೂಡ ಆಗಿದ್ದಾನೆ.
25.ಅವ್ಯಕ್ತೋಽಯಮಚಿಂತ್ಯೋಽಯಂ ಅವಿಕಾರ್ಯೋಽಯಮುಚ್ಯತೇ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ॥
ಅಯಂ = ಈ ಆತ್ಮನು, ಅವ್ಯಕ್ತಃ = ಪಂಚೇಂದ್ರಿಯಗಳಿಂದ ತಿಳಿಯಲ್ಪಡುವವನು ಅಲ್ಲ. ಅಯಂ = ಈ ಆತ್ಮನು, ಅಚಿಂತ್ಯಃ = ಮನಸ್ಸಿನಿಂದ ಊಹಿಸಲ್ಪಡುವವನು ಅಲ್ಲ. ಅಯಂ = ಈ ಆತ್ಮನು, ಅವಿಕಾರ್ಯಃ = ವಿಕಾರಗಳನ್ನು ಹೊಂದಿಸಲ್ಪಡಲು ಸಾಧ್ಯವಾಗದವನು. (ಇತಿ = ಎಂದು), ಉಚ್ಯತೇ = ವೇದಗಳಿಂದ ಹೇಳಲ್ಪಡುತ್ತಿದ್ದಾನೆ. ತಸ್ಮಾತ್ = ಆದ್ದರಿಂದ, ಏನಂ = ಈ ಆತ್ಮನನ್ನು ಕುರಿತು, ಏವಂ = ಹೀಗೆ, ವಿದಿತ್ವಾ = ತಿಳಿದುಕೊಂಡು, ಅನುಶೋಚಿತುಂ = ದುಃಖಿಸಲು, ನ-ಅರ್ಹಸಿ = ತಕ್ಕವನು ನೀನಲ್ಲ.
ಈ ಆತ್ಮ ಎನ್ನುವುದು ಆರು ಇಂದ್ರಿಯಗಳ ಅನುಭವಗಳಿಂದಾಗಲಿ, ಮನಸ್ಸಿನ ಊಹಾಶಕ್ತಿಯಿಂದಾಗಲಿ, ತಿಳಿದುಕೊಳ್ಳಲು ಸಾಧ್ಯವಾಗುವುದಲ್ಲ. ಇದರಲ್ಲಿ ಅವಯವಗಳೇ ಇಲ್ಲವಾದ್ದರಿಂದ, ಇದರಲ್ಲಿ ಯಾವ ವಿಧವಾದ ಮಾರ್ಪಾಡುಗಳನ್ನು ಯಾರೂ ತರಲಾರರು. ಈ ವಿಷಯವನ್ನು ವೇದವೇ ಖುದ್ದಾಗಿ ಹೇಳುತ್ತಿದೆ. ಆ ವೇದವನ್ನು ಅನುಸರಿಸಿ ಯೋಚಿಸಿದರೆ, ತರ್ಕದಿಂದಲೂ ಕೂಡ ಇದನ್ನು ನೀನು ಗ್ರಹಿಸಬಲ್ಲೆ. ಹಾಗೆ ಗ್ರಹಿಸಬಲ್ಲೆಯಾದರೆ, ನೀನು ಒಬ್ಬರನ್ನು ಸಂಹರಿಸುತ್ತಿದ್ದೇನೆ ಎಂದು ದುಃಖಿಸಲು ಅವಕಾಶವೇ ಇಲ್ಲ. ಹಾಗೆಯೇ “ಮತ್ತೊಬ್ಬರಿಂದ ನಾನು ಸಂಹರಿಸಲ್ಪಡುತ್ತಿದ್ದೇನೆ’ ಎಂಬ ದುಃಖವು ಕೂಡ ಇರುವ ಅವಕಾಶವೇ ಇಲ್ಲ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ