ಶ್ರೀ ಮದ್ಭಗವತ್ಗೀತಾ : 29
17. ಅವಿನಾಶಿತು ತದ್ವಿದ್ಧಿ ಯೇನ ಸರ್ವಮಿದಂ ತತಮ್।
ವಿನಾಶ ಮವ್ಯಯಸ್ಯಾಸ್ಯ ನ ಕಶ್ಚಿತ್ ಕರ್ತುಮರ್ಹತಿ॥
ಯೇನ = ಯಾವುದರಿಂದ, ಇದಂ = ಈ, ಸರ್ವಂ = ಜಗತ್ತೆಲ್ಲವೂ, ತತಂ = ವ್ಯಾಪಿಸಲ್ಪಟ್ಟಿರುವುದೋ, ತತ್-ತು = ಅದನ್ನಾದರೆ, ಅವಿನಾಶಿ = ವಿನಾಶವಿಲ್ಲದ್ದಾಗಿ, ವಿದ್ಧಿ = ತಿಳಿದುಕೋ. ಕಶ್ಚಿತ್ = ಯಾವನೂ ಕೂಡ, ಅವ್ಯಯಸ್ಯ = ಮಾರ್ಪಾಡುಗಳಿಲ್ಲದ, ಅಸ್ಯ = ಈ ಮೂಲಪದಾರ್ಥಕ್ಕೆ, ವಿನಾಶಂ = ನಾಶವನ್ನು, ಕರ್ತುಂ = ಉಂಟುಮಾಡಲು, ನ-ಅರ್ಹತಿ = ಸಮರ್ಥನಲ್ಲ.
ಯಾವ ಸತ್ಪದಾರ್ಥವಾದರೆ ಈ ಎಲ್ಲಾ ಸೃಷ್ಟಿಯನ್ನೂ ವ್ಯಾಪಿಸಿರುವುದೆಂದು ಹಿಂದಿನ ಶ್ಲೋಕದಲ್ಲಿ ನಿರೂಪಿಸಿದೆವೋ, ಅಂತಹ ಮೂಲತತ್ತ್ವ ಪದಾರ್ಥಕ್ಕೆ (ಅಂದರೆ ಆತ್ಮತತ್ತ್ವಕ್ಕೆ) ವಿನಾಶವೆಂಬ ಮಾತೇ ಇಲ್ಲವೆಂದು ತಿಳಿದುಕೋ. ಅದಕ್ಕೆ ವಿನಾಶವೇ ಇಲ್ಲ, ಅದರಲ್ಲಿ ಬದಲಾವಣೆಗಳು ಕೂಡಾ ಇಲ್ಲ. ಆದ್ದರಿಂದಲೇ, ಇದನ್ನು ಯಾವನೂ ಕೂಡ ಇಲ್ಲದಂತೆ ಮಾಡಲಾರನು. ಇದನ್ನು ಬದಲಾಗುವಂತೆ ಕೂಡ ಮಾಡಲಾರನು.
ಅವತಾರಿಕೆ:
ಹೀಗೆ ಸತ್ಪದಾರ್ಥದ ಅವಿನಾಶಿತ್ವವನ್ನು ವಿಸ್ಪಷ್ಟ ಮಾಡಿದ ಭಗವಂತನು, ಇನ್ನು “”ನಿನ್ನ ದೇಹದಲ್ಲಿ ದೇಹಿಯಾಗಿರುವುದು ಆ ಸತ್ಪದಾರ್ಥವೇ” – ಎಂದು ಬೋಧಿಸಲಿದ್ದಾನೆ.
18. ಅಂತವಂತ ಇಮೇ ದೇಹಾಃ ನಿತ್ಯಸ್ಯೋಕ್ತಾ ಶ್ಶರೀರಿಣಃ।
ಅನಾಶಿನೋಽಪ್ರಮೇಯಸ್ಯ ತಸ್ಮಾದ್ಯುಧ್ಯಸ್ವ ಭಾರತ॥
ಅಂತವಂತಃ = ಅಂತ್ಯವುಳ್ಳವುಗಳಾದ, ಇಮೇ = ಈ, ದೇಹಾಃ = ಶರೀರಗಳೆಲ್ಲವೂ, ನಿತ್ಯಸ್ಯ = ಮೂರುಕಾಲಗಳಲ್ಲಿಯೂ ಮಾರ್ಪಾಡು ಇಲ್ಲದೆ ಇರುವವನು, ಅನಾಶಿನಃ = ನಾಶವಿಲ್ಲದವನು, ಅಪ್ರಮೇಯಸ್ಯ = ಯಾವುದೇ ಪ್ರಮಾಣಗಳಿಗೂ ಸಿಲುಕದವನು ಆದ, ಶರೀರಿಣಃ = ದೇಹಧಾರಿಯಾದ ಆತ್ಮಕ್ಕೆ ಸಂಬಂಧಿಸಿದವು (ಇತಿ-ವೇದೇನ = ಎಂದು ವೇದದಿಂದ), ಉಕ್ತಾಃ = ಹೇಳಲ್ಪಟ್ಟಿವೆ. ಭಾರತ = ಭರತವಂಶದಲ್ಲಿ ಹುಟ್ಟಿದ ಅರ್ಜುನನೇ!, ತಸ್ಮಾತ್ = ಆ ಕಾರಣದಿಂದ, ಯುಧ್ಯಸ್ವ = ಯುದ್ಧ ಮಾಡು.
ಎಲೈ ಅರ್ಜುನನೇ! ಇಲ್ಲಿ ನಿನ್ನ ಶರೀರವು, ಭೀಷ್ಮದ್ರೋಣಾದಿಗಳ ಶರೀರಗಳು, ಮೊದಲಾದ ಅನೇಕ ಶರೀರಗಳು ಕಂಡುಬರುತ್ತಿವೆ. ಈ ಶರೀರಗಳೆಲ್ಲದಕ್ಕೂ ಕೊನೆ ಇದೆ. ಆದರೆ, ಇವುಗಳೆಲ್ಲದರಲ್ಲೂ ಪಸರಿಸಿರುವ ಆತ್ಮ ಒಂದೇ ಇರುವುದು. ಅದನ್ನೇ “ದೇಹಿ’ ಎನ್ನುತ್ತಾರೆ. ಆ ದೇಹಿಗೆ ಮಾತ್ರ ಅಂತ್ಯವೂ ಇಲ್ಲ, ನಾಶವೂ ಇಲ್ಲ, ಮಾರ್ಪಾಡೂ ಇಲ್ಲ. “”ಆ ದೇಹಿಯು ಯಾವ ವಿಧವಾದ ಪ್ರಮಾಣಗಳಿಗೂ, ಅಂದರೆ ಕಣ್ಣು ಮೊದಲಾದ ಇಂದ್ರಿಯಗಳಿಗೂ, ಎತ್ತರ-ಗಿಡ್ಡ ಮೊದಲಾದ ಅಳತೆಗಳಿಗೂ, ಎಟುಕನು” – ಎಂದು ವೇದಗಳು ಹೇಳಿವೆ. ಅದಕ್ಕಾಗಿ ಯುದ್ಧ ಮಾಡು.
ಅವತಾರಿಕೆ:
ಹಿಂದಿನ ಶ್ಲೋಕದಲ್ಲಿ ಭಗವಂತನು – “”ಎಂದು ವೇದವು ಹೇಳಿದೆ” ಎನ್ನುತ್ತಾ ವೇದದ ಪ್ರಸಂಗವನ್ನು ತಂದಿರುವನಾದ್ದರಿಂದ, ಕಠೋಪನಿಷತ್ತಿನಿಂದ ಆ ವಿಷಯಕ್ಕೆ ಸಂಬಂಧಿಸಿದ ಎರಡು ಮಂತ್ರಗಳನ್ನು ನೇರವಾಗಿ ಉಪದೇಶ ಮಾಡಲಿದ್ದಾನೆ.
19. ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್। ಉಭೌ ತೌ ನ ವಿಜಾನೀತಃ ನಾಯಂ ಹಂತಿ ನ ಹನ್ಯತೇ॥
ಯಃ = ಯಾವನಾದರೆ, ಏನಂ = ಈಗ ನಾವು ಹೇಳಿಕೊಂಡ ದೇಹಧಾರಿಯಾದ ಜೀವಾತ್ಮನನ್ನು, ಹಂತಾರಂ = ಹತ್ಯೆಗೈಯ್ಯುವವನಂತೆ, ವೇತ್ತಿ = ಭಾವಿಸುತ್ತಾನೆಯೋ, ಚ = ಮತ್ತು, ಯಃ = ಯಾವನಾದರೆ, ಏನಂ = ಈ ಜೀವಾತ್ಮನನ್ನು, ಹತಂ = ಹತ್ಯೆ ಮಾಡಲ್ಪಟ್ಟವನಾಗಿಯೂ, ಮನ್ಯತೇ = ಭಾವಿಸುತ್ತಾನೆಯೋ, ತೌ-ಉಭೌ = ಅವರಿಬ್ಬರೂ, ನ-ವಿಜಾನೀತಃ = ತಿಳಿದವರಲ್ಲ. ಅಯಂ = ಈ ದೇಹಧಾರಿಯು (ದೇಹಿ), ನ-ಹಂತಿ = ಕೊಲ್ಲುವವನಲ್ಲ. ನ-ಹನ್ಯತೇ= ಕೊಲ್ಲಲ್ಪಡುವವನೂ ಅಲ್ಲ.
ಈ ದೇಹಧಾರಿಗಳಲ್ಲಿ ಕೆಲವರು “”ನಾನು ಕೊಲ್ಲುತ್ತಿದ್ದೇನೆ” ಎಂದುಕೊಳ್ಳುತ್ತಿರುವರು. ಇನ್ನು ಕೆಲವರು “”ನಾನು ಕೊಲ್ಲಲ್ಪಡುತ್ತಿದ್ದೇನೆ” ಎಂದುಕೊಳ್ಳುತ್ತಿರುವರು. ಹೀಗೆ ಅಂದುಕೊಳ್ಳುವವರಿಬ್ಬರೂ ಅಜ್ಞಾನಿಗಳೇ ಆಗಿದ್ದಾರೆ. ಏಕೆಂದರೆ, ದೇಹಧಾರಿಯಾದ ಆತ್ಮನು ಕೊಲ್ಲುವುದೆಂಬ ಕ್ರಿಯೆಗೆ ಕರ್ತನಾಗಲಿ, ಇಲ್ಲವೇ ಕೊಲ್ಲಲ್ಪಡುವುದೆಂಬ ಕ್ರಿಯೆಗೆ ಗುರಿ (ಕರ್ಮ) ಆಗಲಾಗಲಿ ಅವಕಾಶವೇ ಇಲ್ಲ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ