ಶ್ರೀ ಮದ್ಭಗವದ್ಗೀತಾ : 33
28. ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ!।
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ॥
ಭಾರತ = ಎಲೈ ಅರ್ಜುನನೆ!, ಭೂತಾನಿ = ಶರೀರ ಮತ್ತು ಇಂದ್ರಿಯಗಳ ರೂಪಗಳಲ್ಲಿ ಇರುವ ಈ ಜೀವಿಗಳೆಲ್ಲರೂ, ಅವ್ಯಕ್ತಾದೀನಿ = ಅಸ್ಪಷ್ಟವಾದ ಪ್ರಾರಂಭವುಳ್ಳ, ವ್ಯಕ್ತಮಧ್ಯಾನಿ = ಸ್ಪಷ್ಟವಾದ ಮಧ್ಯಭಾಗವುಳ್ಳವುಗಳು. ಅವ್ಯಕ್ತನಿಧನಾನಿ-ಏವ = ಸತ್ತ ಮೇಲೆ ಕಾಣಿಸದೆ ಹೋಗುವಂಥವುಗಳೇ. ತತ್ರ = ಆ ತರಹದ ವಿಷಯದಲ್ಲಿ, ಪರಿದೇವನಾ = ಅಳುಕು, ಕಾ = ಏನು?
ಎಲೈ ಅರ್ಜುನನೆ!, ಬಂಧುಮಿತ್ರಾದಿ ರೂಪಗಳಲ್ಲಿ ನಿನಗೆ ಕೆಲವರು ಜೀವಿಗಳು ಕಾಣಿಸುತ್ತಿದ್ದಾರೆ. ಅಂದರೆ, ಆ ಜೀವಿಗಳು ಧರಿಸಿರುವ ದೇಹೇಂದ್ರಿಯಾದಿಗಳು ಕಾಣಿಸುತ್ತಿವೆ. ಹುಟ್ಟುವುದಕ್ಕೆ ಮೊದಲು ಇವೆಲ್ಲವೂ ಎಲ್ಲಿದ್ದವು? ತಿಳಿಯದು. ಸತ್ತ ಮೇಲೆ ಮತ್ತೆ ಎಲ್ಲಿಗೆ ಹೋಗುತ್ತಿವೆ? ಅದೂ ತಿಳಿಯದು. ಮಧ್ಯದಲ್ಲಿ ಸ್ವಲ್ಪಕಾಲ ಮಾತ್ರ ಇವುಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಕನಸಿನಲ್ಲಿನ ರೂಪಗಳಂತೆ ಸ್ವಲ್ಪಕಾಲ ಕಾಣಿಸಿ, ಮಾಯವಾಗಿ ಹೋಗುವ ಈ ದೇಹೇಂದ್ರಿಯಾದಿಗಳನ್ನು ಕುರಿತು ದುಃಖಿಸುವುದರಲ್ಲಿ ಏನು ಅರ್ಥವುಂಟು?
ವಿವರಣೆ:
“”ಜೀವಾತ್ಮನಿಗೆ ವಿನಾಶವು ಇಲ್ಲದೇ ಇರಬಹುದು. ಪ್ರತ್ಯಕ್ಷವಾಗಿ ಕಾಣಿಸುತ್ತಿರುವ ಪಾಂಚಭೌತಿಕ ಶರೀರವು ನಶಿಸಿ ಹೋಗುತ್ತಿದೆ ತಾನೆ! ಅದಕ್ಕಾಗಿ ದುಃಖಿಸದೇ ಇರುವುದಾದರೂ ಹೇಗೆ?” ಎಂಬ ಪ್ರಶ್ನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು “”ಅದೂ ಸಹ ಸರಿಯಲ್ಲ” ಎಂದು ಭಗವಂತನು ಇಲ್ಲಿ ವಿವರಿಸುತ್ತಿದ್ದಾನೆ.
29. ಆಶ್ಚರ್ಯವತ್ಪಶ್ಯತಿ ಕಶ್ಚಿದೇನಂ
ಆಶ್ಚರ್ಯವದ್ವದತಿ ತಥೈವ ಚಾನ್ಯಃ।
ಆಶ್ಚರ್ಯ ವಚ್ಚೈನ ಮನ್ಯಶ್ಶೃಣೋತಿ
ಶ್ರುತ್ವಾಽಪ್ಯೇನಂ ವೇದ ನ ಚೈವ ಕಶ್ಚಿತ್॥
ಕಶ್ಚಿತ್ = ಒಬ್ಬಾತನು, ಏನಂ = ಈ ಆತ್ಮನನ್ನು, ಆಶ್ಚರ್ಯವತ್ = ಎಂದಿಗೂ ನೋಡದ ಆಶ್ಚರ್ಯಕರವಾದ ವಸ್ತುವಿನಂತೆ, ಪಶ್ಯತಿ = ನೋಡುತ್ತಿದ್ದಾನೆ. ತಥಾ-ಏವ = ಹಾಗೆಯೇ, ಅನ್ಯಃ-ಚ = ಮತ್ತೊಬ್ಬನು (ಏನಂ = ಈ ಆತ್ಮನನ್ನು ಕುರಿತು), ಆಶ್ಚರ್ಯವತ್ = ಆಶ್ಚರ್ಯಕರವಾದ ವಸ್ತುವನ್ನು ಕುರಿತಂತೆ, ವದತಿ = ಹೇಳುತ್ತಿದ್ದಾನೆ. ಚ = ಮತ್ತು, ಅನ್ಯಃ = ಮತ್ತೊಬ್ಬನು, ಏನಂ = ಈ ಆತ್ಮನನ್ನು ಕುರಿತು, ಆಶ್ಚರ್ಯವತ್= ಆಶ್ಚರ್ಯಕರವಾದ ವಸ್ತುವನ್ನು ಕುರಿತಂತೆ, ಶ್ರುಣೋತಿ = ಕೇಳುತ್ತಿದ್ದಾನೆ. ಚ = ಮತ್ತು, ಕಶ್ಚಿತ್ = ಒಬ್ಬಾತನು, ಏನಂ = ಈ ಆತ್ಮನನ್ನು ಕುರಿತು, ಶ್ರುತ್ವಾ-ಅಪಿ = ಕೇಳಿಯಾದರೂ, ನ-ಏವ-ವೇದ = ತಿಳಿದುಕೊಳ್ಳುತ್ತಲೇ ಇಲ್ಲ.
ಅರ್ಜುನನೆ! ಆತ್ಮಪದಾರ್ಥವು ಬಹಳ ಸುಸೂಕ್ಷ್ಮವಾದದ್ದು. ಆದ್ದರಿಂದಲೇ, ಇದನ್ನು ಎಷ್ಟೋ ಮಂದಿ ಗುರುತಿಸಲಾರರು. ನೂರಕ್ಕೋ, ಕೋಟಿಗೋ ಯಾವನೋ ಒಬ್ಬನು ಗುರುತಿಸಿದರೂ, ಇದಕ್ಕೆ ಮುಂಚೆ ಯಾವಾಗಲೂ ನೋಡದ ವಸ್ತುವನ್ನು ಹೊಸದಾಗಿ ಇದ್ದಕ್ಕಿದ್ದಂತೆ ನೋಡಿದ ಹಾಗೆ ಆಶ್ಚರ್ಯವಾಗಿ ನೋಡುವನು. ಹಾಗೆ ನೋಡಿದ್ದನ್ನು ಇತರರಿಗೆ ಹೇಳಬೇಕಾಗಿ ಬಂದಾಗ ಆಶ್ಚರ್ಯಕರವಾದ ವಸ್ತುವನ್ನು ಕುರಿತು ಹೇಳಿದ ಹಾಗೆಯೇ ಹೇಳುವನು. ಕೇಳುವವನು ಕೂಡ ಆಶ್ಚರ್ಯದಿಂದಲೇ ಕೇಳುವನು. ಹಾಗೆ ಕೇಳಿದವರಲ್ಲಿಯೂ ಹೆಚ್ಚು ಮಂದಿ ಇದನ್ನು ಕುರಿತು ತಿಳಿದುಕೊಳ್ಳಲಾರರು. ಇನ್ನೊಂದು ವಿಧವಾಗಿ ಹೇಳಬೇಕೆಂದರೆ, ಈ ಆತ್ಮ ಪದಾರ್ಥವನ್ನು ಗುರುತಿಸಬಲ್ಲವನೇ ಒಬ್ಬ ಆಶ್ಚರ್ಯಕರ ವ್ಯಕ್ತಿಯಾಗಿರುವನು. ಹಾಗೆ ಗುರುತಿಸಿ ಅದನ್ನು ಇತರರಿಗೆ ಹೇಳುವವನು, ಹೇಳಿದಾಗ ಕೇಳುವವನು, ಕೇಳಿ ಅರ್ಥಮಾಡಿಕೊಳ್ಳುವವನು, ಇನ್ನೂ ಹೆಚ್ಚಿನ ಆಶ್ಚರ್ಯಕರರಾದ ವ್ಯಕ್ತಿಗಳೇ ಆಗಿದ್ದಾರೆ.
30. ದೇಹೀ ನಿತ್ಯಮವಧ್ಯೋಽಯಂ ದೇಹೇ ಸರ್ವಸ್ಯ ಭಾರತ!।
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ॥
ಭಾರತ = ಎಲೈ ಅರ್ಜುನನೆ!, ಸರ್ವಸ್ಯ = ಎಲ್ಲ ಜೀವಿಗಳ, ದೇಹೇ = ದೇಹಗಳಲ್ಲಿರುವ, ಅಯಂ = ಈ, ದೇಹೀ = ದೇಹಧಾರಿಯಾದ ಆತ್ಮನು, ನಿತ್ಯಂ = ಯಾವತ್ತಿಗೂ, ಅವಧ್ಯಃ = ಕೊಲ್ಲಲು ಸಾಧ್ಯವಾಗುವವನಲ್ಲ. ತಸ್ಮಾತ್ = ಹಾಗಾಗಿ, ಸರ್ವಾಣಿ = ಎಲ್ಲ, ಭೂತಾನಿ = ಜೀವಿಗಳನ್ನು ಕುರಿತು, ತ್ವಂ = ನೀನು, ಶೋಚಿತುಂ = ಶೋಕಿಸಲು, ನ-ಅರ್ಹಸಿ = ಅರ್ಹನಾಗಿಲ್ಲ.
ಎಲೈ ಅರ್ಜುನನೆ! ಮನುಷ್ಯ, ಪಶು ಪಕ್ಷಿ, ಕ್ರಿಮಿ, ಕೀಟ, ವೃಕ್ಷ, ಲತಾದಿ ರೂಪಗಳಲ್ಲಿ ಇರುವ ಜೀವಿಗಳೆಲ್ಲರ ಶರೀರಗಳಲ್ಲಿಯೂ, ಶರೀರಧಾರಿಯಾಗಿ ವ್ಯಾಪಿಸಿರುವ ಆತ್ಮ ಅವಯವರಹಿತವೆಂದು, ಸರ್ವವ್ಯಾಪಿ ಎಂದು, ನಾಶರಹಿತವೆಂದು ನಿನಗೆ ಬೇಕಾದಷ್ಟು ಯುಕ್ತಿಗಳಿಂದ ನಿರೂಪಿಸಿ ಹೇಳಿದ್ದೇನೆ. ಅಂದರೆ ಈ ಜೀವಿಗಳೆಲ್ಲರ ಶರೀರಗಳೆಲ್ಲವನ್ನೂ ಕತ್ತರಿಸಿ ಹಾಕಿದರೂ ಕೂಡ ಆ ಶರೀರಗಳನ್ನು ಧರಿಸಿರುವ ಆತ್ಮವು ಮರಣಿಸುವ ಅವಕಾಶವೇ ಇಲ್ಲ ಎಂದು ನಿರೂಪಿಸಿದ್ದೇನೆ. ಆದ್ದರಿಂದ ಪ್ರಪಂಚದಲ್ಲಿ ಯಾವ ಪ್ರಾಣಿಯ ಮರಣಕ್ಕೋಸ್ಕರವೂ ಕೂಡ ನೀನು ದುಃಖಿಸುವ ಅವಶ್ಯಕತೆ ಇಲ್ಲವೇ ಇಲ್ಲ. ಆದ್ದರಿಂದ ನೀನು ಬಂಧುಗಳಾದ ಭೀಷ್ಮಾದಿಗಳಿಗೋಸ್ಕರ ಅಳಲು ಅರ್ಹನಲ್ಲ.
ವಿವರಣೆ:
ಈ ಅಧ್ಯಾಯದಲ್ಲಿ 12ನೆಯ ಶ್ಲೋಕದಿಂದ ಇಲ್ಲಿಯವರೆಗೂ ಹೇಳಿದ ವಿಷಯಗಳೆಲ್ಲಕ್ಕೂ ಸೇರಿಸಿ ಒಂದು ಚಿಕ್ಕ ಸಿಂಹಾವಲೋಕನದಂತೆ ಭಗವಂತನು ಈ ಶ್ಲೋಕವನ್ನು ಹೇಳಿದ್ದಾನೆಂದು ನಾವು ಗಮನಿಸಬೇಕು.
ಅವತಾರಿಕೆ:
ಇಲ್ಲಿಯವರೆಗೂ ತತ್ತ್ವಶಾಸ್ತ್ರ ದೃಷ್ಟಿಯಿಂದ ಕರ್ತವ್ಯಬೋಧೆ ಮಾಡಿದ ಭಗವಂತನು, ಇನ್ನು ಸಾಧಾರಣ ಧರ್ಮಶಾಸ್ತ್ರ ದೃಷ್ಟಿಯಿಂದ ಕರ್ತವ್ಯಬೋಧೆಯನ್ನು ಮಾಡಲಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ