ಗೀತೆ 17 : ಅರ್ಜುನನು ಎರೆಡೂ ಕಡೆಯು ಬಂಧುಗಳನ್ನೇ ನೋಡಿದನು

Gita
Spread the love

ಶ್ರೀ ಮದ್ಭಗವದ್ಗೀತಾ : 17

26.ತತ್ರಾಪಶ್ಯತ್ ಸ್ಥಿತಾನ್ ಪಾರ್ಥ:
ಪಿತ್ಥನಾಥ ಪಿತಾಮಹಾನ್ ।
ಆಚಾರ್ಯಾನ್ ಮಾತುಲಾನ್ ಭ್ರಾತೃನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ।।

27.ಶ್ವಶುರಾನ್ ಸುಹೃದಶ್ಚಿವ ಸೇನಯೋ ರುಭಯೋ ರಪಿ ।

ಅಥ = ಆ ವಿಧವಾಗಿ, ( ಶ್ರೀಕೃಷ್ಣನು ರಥವನ್ನು ನಿಲ್ಲಿಸಿದ ಮೇಲೆ), ಪಾರ್ಥ! ” ಅರ್ಜುನನು, ತತ್ರ = ಅಲ್ಲಿ, ಉಭಯೋಃ-ಸೇನಯೋ-ಅಪಿ = ಎರಡು ಸೈನ್ಯಗಳಲ್ಲಿಯೂ, ಸ್ಥಿತಾನ್ = ಇರುವಂತಹ, ಪಿತೃನ್ = ಚಿಕ್ಕಪ್ಪ ದೊಡ್ಡಪ್ಪಂದಿರನ್ನೂ (ಪಿತೃಸಮರನ್ನೂ), ಪಿತಾಮಹಾನ್ = ಅಜ್ಜಂದಿರನ್ನೂ, ಆಚಾರ್ಯಾನ್ = ಗುರುಗಳನ್ನೂ, ಮಾತುಲಾನ್ ಸೋದರಮಾವಂದಿರನ್ನೂ, ಭ್ರಾತೃನ್ = ಸೋದರರನ್ನೂ, ಪುತ್ರಾನ್ = ಮಕ್ಕಳನ್ನೂ (ಮಕ್ಕಳಸಮರನ್ನೂ), ಪೌತ್ರಾನ್ = ಮುಮ್ಮಕ್ಕಳನ್ನೂ (ತತ್ಸಮರನ್ನೂ), ತಥಾ = ಹಾಗೆಯೇ, ಸಖೀನ್ = ಸ್ನೇಹಿತರನ್ನೂ, ಶ್ವಶುರಾನ್ = ಹೆಣ್ಣು ಕೊಟ್ಟ ಮಾವಂದಿರನ್ನೂ, ಸುಹೃದಃ ಚ ಏವ = ಒಳ್ಳೆಯ ಮನಸ್ಸಿನ ಮಿತ್ರರನ್ನೂ, ಅಪಶ್ಯತ್ = ನೋಡಿದನು.

ಎರಡು ಸೇನೆಗಳ ಕಡೆಯೂ ಅರ್ಜುನನು ಪರಿಶೀಲಿಸಿ ನೋಡಿದನು. ನೋಡುನೋಡುತ್ತಿದ್ದ ಹಾಗೆ ಅರ್ಜುನನಿಗೆ ಅಲ್ಲಿ ವೀರರಾಗಲಿ, ಶತ್ರುಗಳಾಗಲಿ ಕಾಣಲಿಲ್ಲ. ಎಲ್ಲರೂ ನೆಂಟರೇ ಕಾಣಿಸಿದರು. ತಂದೆಯ ವರಸೆಯವರು, ತಾತನ ವರಸೆಯವರು, ಗುರುಗಳು, ಗುರುತುಲ್ಯರು, ಸೋದರಮಾವಂದಿರು, ಹೆಣ್ಣು ಕೊಟ್ಟ ಮಾವಂದಿರು, ಅಣ್ಣ ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳು, ರಾಜಕೀಯ ಮಿತ್ರರು, ವೈಯಕ್ತಿಕ ಸ್ನೇಹಿತರು, ಎಲ್ಲರೂ ಈ ತರಹದವರೇ ಕಾಣಿಸಿದರು. (ದುರ್ಯೋಧನನು ತನ್ನ ಎದುರಿಗೆ ಇರುವವರಲ್ಲಿ ಶತ್ರುಗಳನ್ನು, ಸ್ವಪಕ್ಷೀಯರನ್ನು ಮಾತ್ರವೇ ಕಂಡನು. ಆದರೆ ಅರ್ಜುನನು ಮಾತ್ರ ಎರಡೂ ಪಕ್ಷಗಳಲ್ಲಿಯೂ ಕೂಡ ಬಂಧುಗಳನ್ನೇ ನೋಡುತ್ತಿದ್ದಾನೆಂಬುದನ್ನು ನಾವು ಗಮನಿಸಬೇಕು.)

ತಾನ್ ಸಮೀಕ್ಷ ಸ ಕೌಂತೇಯಃ
ಸರ್ವಾನ್ ಬಂಧೂನವಸ್ಥಿತಾನ್||
28.ಕೃಪಯಾ ಪರಯಾವಿಷ್ಟ: ವಿಷೀದನ್ನಿದಮಬ್ರವೀತ್ |

ಸಃ = ಆ, ಕೌಂತೇಯಃ = ಅರ್ಜುನನು, ಅವಸ್ಥಿತಾನ್ = ಅಲ್ಲಿ ನಿಂತಿರುವ, ತಾನ್-ಸರ್ವಾನ್-ಬಂಧೂನ್ = ಆ ಬಂಧುಗಳೆಲ್ಲರನ್ನೂ, ಸಮೀಕ್ಷ = ಚೆನ್ನಾಗಿ ನೋಡಿ, ಪರಯಾ = ಹೆಚ್ಚಿನ, ಕೃಪಯಾ = ಕನಿಕರದಿಂದ, ಆವಿಷ್ಟಃ = ತುಂಬಿದವನಾಗಿ, ವಿಷೀದನ್ = ದುಃಖಿಸುತ್ತಾ, ಇದಂ = ಈ ಮಾತನ್ನು, ಅಬ್ರವೀತ್ = ನುಡಿದನು.

ಅರ್ಜುನನು ಆ ಬಂಧುವರ್ಗವನ್ನು ಚೆನ್ನಾಗಿ ನೋಡಿ, ಹೆಚ್ಚಿನ ಕನಿಕರಕ್ಕೆ ಒಳಗಾಗಿ ವಿಷಾದದಲ್ಲಿ ಮುಳುಗಿದವನಾಗಿ, ದೀನವಾಗಿ ಈ ಮಾತನ್ನು ನುಡಿದನು.

ಅರ್ಜುನ ಉವಾಚ :

ದೃಷ್ಟೇಮಂ ಸ್ವಜನಂ ಕೃಷ್ಣ ! ಯುಯುತ್ಸುಂ ಸಮುಪಸ್ಥಿತಮ್ ।।
29.ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ। ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ।।

ಅರ್ಜುನ ಉವಾಚ = ಅರ್ಜುನನಿಂತೆಂದನು. ಕೃಷ್ಣ – ಓ ಶ್ರೀಕೃಷ್ಣನೆ!, ಸಮುಪಸ್ಥಿತಂ= ಇಲ್ಲಿಗೆ ಬಂದಿರುವ, ಯುಯುತ್ಸುಂ = ಯುದ್ಧ ಮಾಡಬಯಸುತ್ತಿರುವ,
ಇಮಂ = ಈ, ಸೃಜನಂ ಬಂಧುಜನರನ್ನು, ದೃಷ್ಟ್ವಾ = ನೋಡಿ, ಮಮ ನನ್ನ ಗಾತ್ರಾಣಿ = ಅವಯವಗಳು, ಸೀದಂತಿ = ಸೊರಗುತ್ತಿವೆ, ಮುಖಂಚ ಬಾಯಿಯೂ ಪರಿಶುಷ್ಯತಿ ಒಣಗುತ್ತಿದೆ, ಮೇ = ನನ್ನ, ಶರೀರೇ – ಶರೀರದಲ್ಲಿ, ನಡುಕವೂ, ರೋಮಹರ್ಷ:ಚ- ರೋಮಾಂಚವೂ, ಜಾಯತೇ – ಉಂಟಾಗುತ್ತಿದೆ.

ಅರ್ಜುನನು ಹೇಳಿದನು:-

ಓ ಶ್ರೀಕೃಷ್ಣನೆ! ಇಲ್ಲಿಗೆ ಬಂದಿರುವವರೆಲ್ಲರೂ ನನ್ನ ಸ್ವಜನರು. ಆದರೂ ಇಲ್ಲಿಗೆ ಯುದ್ಧಕ್ಕಾಗಿ ಬಂದಿರುವರು. (ನಾನು ಮನಸ್ಸು ಮಾಡಿದರೆ, ಇವರಲ್ಲಿ ಯಾವೊಬ್ಬನೂ ಉಳಿಯಲಾರ. ಇದನ್ನು ನೆನೆಸಿಕೊಂಡರೆ) ನನ್ನ ಕೈ ಕಾಲುಗಳು ಜಾರಿಹೋಗುತ್ತಿವೆ. ಬಾಯಿ ಒಣಗಿಹೋಗುತ್ತಿದೆ. ಮೈಯಲ್ಲಿ ನಡುಕ ಉಂಟಾಗುತ್ತಿದೆ. ಮೈಯೆಲ್ಲಾ ರೋಮಾಂಚಿತವಾಗುತ್ತಿದೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ