ಗೀತೆ – 32 : ಅರ್ಜುನನು ದುಃಖಿಸುವುದು ಯಾವ ರೀತಿಯಲ್ಲು ಸರಿಯಲ್ಲ

Gitacharya
Spread the love

[12/8, 7:15 PM] Bhagya Lakshmi Raman: (ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ
[12/10, 11:00 PM] Bhagya Lakshmi Raman: ಶ್ರೀಮದ್ಭಗವದ್ಗೀತಾ : 32

26. ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್‌।
ತಥಾಽಪಿ ತ್ವಂ ಮಹಾಬಾಹೋ! ನೈವಂ ಶೋಚಿತುಮರ್ಹಸಿ॥

ಮಹಾಬಾಹೋ = ಎಲೈ ದೊಡ್ಡ ಬಾಹುಬಲವುಳ್ಳವನೇ! ಅಥ-ಚ = ಒಂದು ವೇಳೆ, ತ್ವಂ = ನೀನು, ಏನಂ = ಈ ಜೀವಾತ್ಮನನ್ನು, ನಿತ್ಯಜಾತಂ = ಮತ್ತೆ ಮತ್ತೆ ಹುಟ್ಟುತ್ತಿರುವವನಾಗಿಯೂ, ವಾ = ಮತ್ತು, ನಿತ್ಯಂ = ಮತ್ತೆ ಮತ್ತೆ, ಮೃತಂ = ಸಾಯುತ್ತಿರುವವನಂತೆಯೂ, ಮನ್ಯಸೇ = ಭಾವಿಸುತ್ತಿದ್ದರೆ, ತಥಾ-ಅಪಿ = ಹಾಗಾದರೂ ಕೂಡ, ಏವಂ = ಈ ವಿಧವಾಗಿ, ಶೋಚಿತುಂ = ದುಃಖಿಸಲು, ನ-ಅರ್ಹಸಿ = ತಕ್ಕವನು ನೀನಲ್ಲ.

ಎಲೈ! ಮಹಾವೀರನೆ! ಅರ್ಜುನನೆ! ಒಂದು ವೇಳೆ ಜೀವಾತ್ಮ ಎಂಬುದು ಹೊಸ ಶರೀರವು ಬಂದಾಗಲೆಲ್ಲ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತದೆ ಎಂದಾಗಲಿ; ಇರುವ ಶರೀರವು ಹೋದಾಗಲೆಲ್ಲ ಮತ್ತೆ ಮತ್ತೆ ಮರಣಿಸುತ್ತಲೇ ಇರುತ್ತದೆ ಎಂದಾಗಲಿ; ನೀನು ಭಾವಿಸುತ್ತಿರುವೆಯಾ? ಹಾಗಾದರೂ ಕೂಡ ಬಂಧುಗಳ ವಧೆಗಾಗಿ ನೀನು ಹೀಗೆ ದುಃಖಿಸುವುದು ಯೋಗ್ಯವಲ್ಲ.

27. ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ।
ತಸ್ಮಾದಪರಿಹಾರ್ಯೇಽರ್ಥೇ ನ ತ್ವಂ ಶೋಚಿತುಮರ್ಹಸಿ॥

ಜಾತಸ್ಯ = ಹುಟ್ಟಿದವನಿಗೆ, ಮೃತ್ಯುಃ = ಮರಣವು, ಧ್ರುವಃ-ಹಿ = ನಿಶ್ಚಯವಾಗಿರುವುದು ಅಲ್ಲವೆ! ಚ = ಮತ್ತು, ಮೃತಸ್ಯ = ಮರಣಿಸಿದವನಿಗೆ, ಜನ್ಮ = ಮತ್ತೆ ಹುಟ್ಟುವುದು, ಧ್ರುವಂ = ತಪ್ಪದೇ ಇರುವುದಲ್ಲವೆ. ತಸ್ಮಾತ್‌ = ಆದ್ದರಿಂದ, ಅಪರಿಹಾರ್ಯೇ = ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದ, ಅರ್ಥೇ = ಈ ವಿಷಯದಲ್ಲಿ, ಶೋಚಿತುಂ = ದುಃಖಿಸಲು, ತ್ವಂ = ನೀನು, ನ-ಅರ್ಹಸಿ = ಅರ್ಹನಲ್ಲ.

ಎಲೈ ಅರ್ಜುನನೆ! ಹುಟ್ಟಿದವನು ಹೋಗಲೇಬೇಕು. ಸತ್ತವನು ಮತ್ತೆ ಹುಟ್ಟಲೇಬೇಕು. ಇದು ಯಾರಿಂದಲೂ ತಡೆಯಲಾಗದ ವಿಷಯವು. ಆದ್ದರಿಂದ ಇದಕ್ಕಾಗಿ ನೀನು ದುಃಖಿಸುವುದು ಯೋಗ್ಯವಲ್ಲ.
ವಿವರಣೆ:
ಎಷ್ಟೇ ಆದರೂ ಅರ್ಜುನನು ಅಷ್ಟಿಷ್ಟು ಯೋಗವಿದ್ಯೆಯಲ್ಲಿ ಪ್ರವೇಶ ಉಳ್ಳವನು. ಸೂಕ್ಷ್ಮಶರೀರದ ಅಸ್ತಿತ್ವವನ್ನು ಗುರುತಿಸಿದವನು. ಆದ್ದರಿಂದ ಅರ್ಜುನನು ಹಿಂದಿನ ಶ್ಲೋಕದಲ್ಲಿ ಹೇಳಿದ ಎರಡು ಪಕ್ಷಗಳಲ್ಲಿ ಯಾವುದಾದರೊಂದನ್ನು ಸ್ವೀಕರಿಸುವ ಅವಕಾಶವಿಲ್ಲ. ಜೀವಾತ್ಮವೆಂಬುದು ಒಂದು ಇರುವುದೆಂದೂ, ಅದು ಹುಟ್ಟುತ್ತಾ, ಸಾಯುತ್ತಾ ಇರುತ್ತದೆಂದೂ, ಭಾವಿಸುವ ಅವಕಾಶವುಂಟು. ಆದ್ದರಿಂದಲೇ, ಅರ್ಜುನನು ಪಾಪಪುಣ್ಯಗಳ ಕುರಿತು, ನರಕಲೋಕ ನಿವಾಸವನ್ನು ಕುರಿತು, ಹೇಳುತ್ತಾ ಇದ್ದಿರಬಹುದು. ಆ ಪಕ್ಷವನ್ನು ಸ್ವೀಕರಿಸಿದರೂ ಕೂಡ ಅರ್ಜುನನ ದುಃಖದಲ್ಲಿ ಹೇತುಬದ್ಧತೆಯು ಇಲ್ಲವೆಂದು ಭಗವಂತನು ಇನ್ನು ಮುಂದೆ ವಿಶ್ಲೇಷಿಸಿ ತೋರಿಸಿಕೊಡುತ್ತಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ