ಗೀತೆ – 26 : ಅರ್ಜುನನನ್ನು ನೋಡಿ ಶ್ರೀ ಕೃಷ್ಣನು ನಗುತ್ತಾನೆ

Gita
Spread the love

ಶ್ರೀ ಮದ್ಭಗವದ್ಗೀತಾ : 26

8.ನ ಹಿ ಪ್ರಪಶ್ಯಾಮಿ ಮಮಾಪನುದ್ಯಾತ್
ಯಚ್ಛೋಕ ಮುಚ್ಛೋಷಣ ಮಿಂದ್ರಿಯಾಣಾಮ್‌ ।
ಅವಾಪ್ಯ ಭೂಮಾವಸಪತ್ನಮೃದ್ಧಂ
ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್‌॥

ಭೂಮೌ = ಈ ಭೂಲೋಕದಲ್ಲಿ, ಅಸಪತ್ನಂ = ಶತ್ರುಗಳಿಲ್ಲದಿರುವುದೂ, ಋದ್ಧಂ = ಸಮೃದ್ಧಿಯಿಂದ ಕೂಡಿರುವುದೂ ಆದ, ರಾಜ್ಯಂ = ರಾಜ್ಯವನ್ನು, ಅವಾಪ್ಯ (ಅಪಿ)= ಹೊಂದಿದರೂ (ಕೂಡ), ಚ = ಮತ್ತು, ಸುರಾಣಾಂ = ದೇವತೆಗಳ ಮೇಲೆ, ಆಧಿಪತ್ಯಂ = ಒಡೆಯತನವನ್ನು, ಅವಾಪ್ಯ-ಅಪಿ = ಪಡೆದರೂ, ಮಮ = ನನ್ನ, ಇಂದ್ರಿಯಾಣಾಂ= ಇಂದ್ರಿಯಗಳಿಗೆ, ಉಚ್ಛೋಷಣಂ = ಶೋಷವನ್ನುಂಟುಮಾಡುತ್ತಿರುವ, ಶೋಕಂ = ಈ ದುಃಖವನ್ನು, ಯತ್‌ = ಯಾವುದು, ಅಪನುದ್ಯಾತ್‌ = ಹೋಗಲಾಡಿಸುವುದೋ, (ತತ್‌ = ಅಂತಹದನ್ನು), ನ-ಪ್ರಪಶ್ಯಾಮಿ ಹಿ = ನಾನು ಕಾಣುತ್ತಿಲ್ಲವಲ್ಲವೆ!

ಓ ಶ್ರೀಕೃಷ್ಣನೇ! ಈಗ ನನ್ನನ್ನು ಆವರಿಸಿ, ನನ್ನ ಇಂದ್ರಿಯಗಳು ಸೊರಗುವಂತೆ ಮಾಡುತ್ತಿರುವುದೂ, ನನ್ನನ್ನು ನಿಶ್ಶಕ್ತತೆಯಲ್ಲಿ ತಳ್ಳುತ್ತಿರುವುದೂ ಆದ ಈ ದುಃಖವು ಎಷ್ಟು ತೀವ್ರವಾಗಿ ಇದೆಯೆಂದರೆ, ಅದು, ಈ ಭೂಲೋಕ ಸಾಮ್ರಾಜ್ಯವೆಲ್ಲವೂ ನನಗೆ ಸಿಕ್ಕಿದರೂ ಹೋಗುವಂತಹುದಲ್ಲ. ಅಷ್ಟುಮಾತ್ರವಲ್ಲ, ಸ್ವರ್ಗಲೋಕ ಸಾಮ್ರಾಜ್ಯವು ಲಭಿಸಿದರೂ ಹೋಗುವಂತಹುದಲ್ಲ. ನನ್ನ ದುಃಖವನ್ನು ಹೋಗಲಾಡಿಸಬಲ್ಲ ಉಪಾಯವು ನನಗೆ ಕಾಣಿಸುತ್ತಲೇ ಇಲ್ಲ.
(ಇಲ್ಲಿ ತನಗೆ ಶ್ರೇಯಸ್ಸಿನ ವಿಚಾರದಲ್ಲಿರುವ ಆಸಕ್ತಿಯನ್ನು (ಮೋಕ್ಷಾಸಕ್ತಿಯನ್ನು) ವ್ಯಕ್ತಪಡಿಸಿದ ಅರ್ಜುನನು ತನಗಿರುವ ಇಹಾಮುತ್ರ ಫಲಭೋಗ ವಿರಾಗವನ್ನು ವಿನಯದಿಂದ ವ್ಯಕ್ತಪಡಿಸುತ್ತಿದ್ದಾನೆ ಎಂದು ಅರಿಯಬೇಕು.)

ಸಂಜಯ ಉವಾಚ:
9. ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ।
ನ ಯೋತ್ಸ್ಯ ಇತಿ ಗೋವಿಂದಂ ಉಕ್ತ್ವಾ ತೂಷ್ಣೀಂ ಬಭೂವ ಹ॥

ಸಂಜಯಃ ಉವಾಚ = ಸಂಜಯನು ಹೇಳಿದನು. ಪರಂತಪಃ = ಶತ್ರುಗಳು ತಪಿಸುವಂತೆ ಮಾಡುವ, ಗುಡಾಕೇಶಃ = ಅರ್ಜುನನು, ಹೃಷೀಕೇಶಂ = ಇಂದ್ರಿಯಗಳ ಒಡೆಯನಾದ, ಗೋವಿಂದಂ = ಶ್ರೀಕೃಷ್ಣನನ್ನು ಕುರಿತು, ಏವಂ = ಹೀಗೆ, ಉಕ್ತ್ವಾ = ನುಡಿದು, ನ-ಯೋತ್ಸ್ಯೇ = ಯುದ್ಧ ಮಾಡುವುದಿಲ್ಲ, ಇತಿ = ಎಂದು, ಉಕ್ತ್ವಾ = ಹೇಳಿ, ತೂಷ್ಣೀಂ = ಮೌನವಾಗಿ, ಬಭೂವ ಹ = ಇದ್ದುಬಿಟ್ಟನು.
ಸಂಜಯನು ಹೇಳಿದನು:-
ಅರ್ಜುನನು ಶ್ರೀಕೃಷ್ಣನನ್ನು ಕುರಿತು ಹೀಗೆ ಹೇಳಿ, ಮತ್ತೆ ಇದ್ದಕ್ಕಿದ್ದಂತೆ “”ನಾನು ಯುದ್ಧ ಮಾಡೆನು” ಎಂದು ಪ್ರಕಟಿಸಿ ಮೌನವಾಗಿ ಇದ್ದುಬಿಟ್ಟನು.

10. ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ!।
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ॥

ಭಾರತ = ಎಲೈ ಧೃತರಾಷ್ಟ್ರ ಮಹಾರಾಜನೇ!, ಉಭಯೋಃ = ಎರಡು, ಸೇನಯೋಃ = ಸೇನೆಗಳ, ಮಧ್ಯೆ = ಮಧ್ಯದಲ್ಲಿ, ವಿಷೀದಂತಂ = ಈ ವಿಧವಾಗಿ ವಿಷಾದಪಡುತ್ತಿರುವ ತಂ = ಆ ಅರ್ಜುನನನ್ನು ಕುರಿತು, ಹೃಷೀಕೇಶಃ = ಶ್ರೀಕೃಷ್ಣನು, ಪ್ರಹಸನ್‌-ಇವ = ಪರಿಹಾಸ ಮಾಡುತ್ತಿರುವವನಂತೆ, ಇದಂ-ವಚಃ = ಈ ಮಾತನ್ನು, ಉವಾಚ = ಹೇಳಿದನು.

ಎಲೈ ಧೃತರಾಷ್ಟ್ರ ಮಹಾರಾಜನೆ! ಆ ವಿಧವಾಗಿ ಎರಡು ಸೈನ್ಯಗಳ ನಡುವೆ ವಿಷಾದಿಸುತ್ತಾ ಕುಳಿತಿರುವ ಅರ್ಜುನನನ್ನು ನೋಡಿ, ಶ್ರೀಕೃಷ್ಣನು ಸ್ವಲ್ಪ ನಗುತ್ತಿರುವವನಂತೆ ಮುಖಮಾಡಿ, ಸರಸವಾಡುತ್ತಿರುವವನಂತೆ ಹೀಗೆ ಅಂದನು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ