ಗೀತೆ – 98 : ಜಗತ್ತಿನ ಭಾಗಗಳೆಲ್ಲವೂ ಪರಮಾತ್ಮನ ರೂಪವೇ

Gitacharya
Spread the love

ಗೀತೆ : 98

24. ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್‌।
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ-ಸಮಾಧಿನಾ॥

ಅರ್ಪಣಂ = ಹೋಮಸಾಧನವಾದ ಸೌಟು ಮೊದಲಾದದ್ದು, ಬ್ರಹ್ಮ = ಬ್ರಹ್ಮಸ್ವರೂಪವೇ. ಹವಿಃ = ಹೋಮವು ಮಾಡಲ್ಪಡುವ ತುಪ್ಪ ಮೊದಲಾದವು, ಬ್ರಹ್ಮ = ಬ್ರಹ್ಮಸ್ವರೂಪವೇ. ಬ್ರಹ್ಮಾಗ್ನೌ = ಬ್ರಹ್ಮಸ್ವರೂಪವಾದ ಅಗ್ನಿಯಲ್ಲಿ ಬ್ರಹ್ಮಣಾ = ಬ್ರಹ್ಮಸ್ವರೂಪನಾದ ಹೋಮಕರ್ತನಿಂದ ಹೋಮವು ಮಾಡಲ್ಪಡುತ್ತಿದೆ. ಹುತಂ = ಹೋಮಕ್ರಿಯೆ ಕೂಡ (ಬ್ರಹ್ಮ = ಬ್ರಹ್ಮಸ್ವರೂಪವೇ), ಬ್ರಹ್ಮಕರ್ಮಸಮಾಧಿನಾ = (ಈ ವಿಧವಾಗಿ) ಕರ್ಮವೆಲ್ಲವೂ ಬ್ರಹ್ಮಸ್ವರೂಪವೇ ಎಂಬ ಏಕಾಗ್ರಬುದ್ಧಿಯುಳ್ಳ, ತೇನ = ಆ ಮಾನವನಿಂದ, ಗಂತವ್ಯಂ = ಹೊಂದಲ್ಪಡತಕ್ಕ ಫಲಿತವು ಕೂಡ, ಬ್ರಹ್ಮ-ಏವ = ಬ್ರಹ್ಮಸ್ವರೂಪವೇ.

ಅರ್ಜುನನೆ! ಒಬ್ಬ ಜೀವನ್ಮುಕ್ತನು ಸೌಟಿನಿಂದ ತುಪ್ಪವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹೋಮ ಮಾಡುತ್ತಿದ್ದಾನೆ ಎಂದುಕೊಳ್ಳೋಣ. ಈಗ ಆ ಹೋಮಕರ್ತನ ದೃಷ್ಟಿಯಲ್ಲಿ ತಾನು ಯಾರು? ತಾನು ಬ್ರಹ್ಮವೇ (ಅಂದರೆ ಪರಮಾತ್ಮನೇ). ತನ್ನ ಸುತ್ತಲೂ ಇರುವ ಪ್ರಪಂಚವೋ? ಅದು ಕೂಡಾ ಆತನ ದೃಷ್ಟಿಯಲ್ಲಿ ಪರಮಾತ್ಮನ ರೂಪಾಂತರವೇ ಆಗಿದೆ. ಆದ್ದರಿಂದ ಆತನ ಎದುರಿಗೆ ಇರುವ ಅಗ್ನಿಜ್ವಾಲೆಯು, ಆತನ ಕೈಯಲ್ಲಿರುವ ಸೌಟು, ಅದರೊಳಗಿಂದ ಬೀಳುತ್ತಿರುವ ತುಪ್ಪ, ಇವೆಲ್ಲವೂ ಪರಮಾತ್ಮನ ರೂಪಾಂತರಗಳೇ ಆಗಿವೆ. ಇನ್ನು “”ಹೋಮ ಮಾಡುವುದು” ಎಂಬ ಕ್ರಿಯೆ ಇದೆಯಲ್ಲವೇ? ಅದರ ಕಥೆ ಏನು? ಕ್ರಿಯೆಯೆಂದರೆ ಶರೀರೇಂದ್ರಿಯಾದಿಗಳ ಚಲನವೇ ಆಗಿದೆ. ಶರೀರೇಂದ್ರಿಯಾದಿಗಳು ಎಲ್ಲವೂ ಜಗತ್ತಿನಲ್ಲಿ ಭಾಗಗಳೇ ಆಗಿವೆ. ಆದ್ದರಿಂದ ಅವೆಲ್ಲವೂ ಪರಮಾತ್ಮನ ರೂಪಾಂತರಗಳೇ ಆಗಿವೆ. ಆದ್ದರಿಂದ ಅವುಗಳ ಮುಖಾಂತರ ನಡೆಯುವ ಹೋಮಕ್ರಿಯೆಯು ಕೂಡ ಪರಮಾತ್ಮನ ರೂಪಾಂತರವೇ ಆಗಿದೆ. ಹೀಗೆ ಕರ್ತನು, ಕರ್ಮವು, ಕ್ರಿಯೆಯು, ಸಾಧನಸಂಪತ್ತಿಯು – ಎಲ್ಲವೂ ಕೂಡ ಪರಮಾತ್ಮನ ರೂಪಾಂತರಗಳೇ ಎಂಬ ಭಾವನೆಗೆ ಮತ್ತೊಂದು ಹೆಸರು ಸಮ್ಯಗ್ದರ್ಶನವು. ಅಂದರೆ, ಅಂತಹ ಸಮ್ಯಗ್ದರ್ಶನವು ಹೋಮಕರ್ತೃವಿನ ಮನಸ್ಸಿನಲ್ಲಿ ಸುಸ್ಥಿರವಾಗಿ
ನೆಲೆಸಿರುವಾಗ, ಅಂತಹ ಹೋಮಕರ್ತನು ಪಡೆಯತಕ್ಕ ಫಲಿತವು ಪರಮಾತ್ಮನೇ ಆಗಿರುತ್ತದೆ ಹೊರತು ಮತ್ತೊಂದು ಆಗಿರಲು ಸಾಧ್ಯವಿಲ್ಲ.
ವಿವರಣೆ:
“”ಕರ್ಮಣ್ಯಕರ್ಮ ಯಃ ಪಶ್ಯೇತ್” (4-18) ಎನ್ನುತ್ತಾ, ಕರ್ಮಾಕರ್ಮಗಳ ಏಕತ್ವವನ್ನು ಕುರಿತು ಹೇಳಿದ ಸಿದ್ಧಾಂತದಲ್ಲಿ ಅಪಾರ್ಥಗಳಿಗೆ ಅವಕಾಶವಿಲ್ಲದೇ ಇರುವುದಕ್ಕಾಗಿ, ಜೀವನ್ಮುಕ್ತನಾದವನು ಮಾಡುವ ಕರ್ಮದಲ್ಲಿನ ಕರ್ತೃತ್ವವು ಹೇಗೆ ನಾಶವಾಗಿಬಿಡುತ್ತದೆಯೋ ವಿವರಿಸುವುದಕ್ಕಾಗಿ, ಭಗವಂತನು ಲೋಕಪ್ರಸಿದ್ಧವಾದ ಹೋಮರೂಪವಾದ ಯಜ್ಞಕ್ರಿಯೆಯನ್ನು ಉದಾಹರಣೆಯಾಗಿ ತೆಗೆದುಕೊಂಡು, ತನ್ನ ಸಿದ್ಧಾಂತವನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ