ಶ್ರೀ ಮದ್ಭಗವದ್ಗೀತಾ : 97
23. ಗತ ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತ ಚೇತಸಃ।
ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ॥
ಗತಸಂಗಸ್ಯ = ಫಲಾಸಕ್ತಿ ತೊಲಗಿಹೋದವನೂ, ಮುಕ್ತಸ್ಯ = ಕರ್ತೃತ್ವಾದಿ ರೂಪವಾದ ಅಜ್ಞಾನದಿಂದ ಬಿಡುಗಡೆ ಹೊಂದಿದವನೂ, ಜ್ಞಾನಾವಸ್ಥಿತಚೇತಸಃ = ಜ್ಞಾನದಲ್ಲಿ ಸ್ಥಿರವಾಗಿ ನೆಲೆಸಿದ ಮನಸ್ಸುಳ್ಳವನೂ, ಯಜ್ಞಾಯ = ಈಶ್ವರಾರ್ಪಣೆಗೋಸ್ಕರ (ಲೋಕಸಂಗ್ರಹಾರ್ಥವಾಗಿ), ಆಚರತಃ = ಕರ್ಮಾಚರಣೆ ಮಾಡುತ್ತಿರುವವನೂ, ಆದ ಮಾನವನ, ಕರ್ಮ = ಕರ್ಮವೆಲ್ಲವೂ, ಸಮಗ್ರಂ = ಫಲದೊಂದಿಗೆ ಸೇರಿ, ಪ್ರವಿಲೀಯತೇ= ನಶಿಸಿಹೋಗುತ್ತಿದೆ.
ಅರ್ಜುನನೆ! ಪ್ರಾರಬ್ಧಶೇಷವು ಅಧಿಕವಾಗಿ ಇರುವ ಜೀವನ್ಮುಕ್ತನ ಸ್ಥಿತಿಯನ್ನು ಮತ್ತೊಂದು ಸಲ ವಿವರಿಸುತ್ತೇನೆ, ಕೇಳು. ಈತನಿಗೆ ಪ್ರಧಾನ ಲಕ್ಷಣಗಳು ನಾಲ್ಕು –
1. ಈತನಿಗೆ ಫಲಾಸಕ್ತಿಯು ಸ್ವಲ್ಪವೂ ಇರುವುದಿಲ್ಲ.
2. ಅಹಂಕಾರ ಮಮಕಾರಾದಿ ಸಂಸಾರಬಂಧಗಳು ಯಾವುವೂ
ಇರವು.
3. ಆತನ ಮನಸ್ಸು ಪರಮಾತ್ಮ ಜ್ಞಾನದಲ್ಲಿ ನಿತ್ಯವೂ ಸುಸ್ಥಿರವಾಗಿ
ಇರುತ್ತದೆ.
4. ಪ್ರಾರಬ್ಧಶೇಷದಿಂದ ಆತನು ಯಾವುದಾದರೂ ಕರ್ಮಗಳನ್ನು
ಮಾಡಿದರೆ, ಯಜ್ಞಾರ್ಥ ಕರ್ಮಗಳನ್ನೇ ಮಾಡುತ್ತಾನೆ
(ಯಜ್ಞಾರ್ಥಕರ್ಮವೆಂದರೆ ಏನೆಂದು ನಿನಗೆ 3ನೆಯ ಅಧ್ಯಾಯದ
9ನೆಯ ಶ್ಲೋಕದಲ್ಲಿಯೇ ವಿವರಿಸಿದ್ದೇನೆ).
ಹೀಗೆ ಲೋಕಸಂಗ್ರಹಾರ್ಥ ಕರ್ಮಗಳನ್ನು ಮಾಡುವ ಜೀವನ್ಮುಕ್ತನು ಕರ್ಮಾಕರ್ಮಗಳ ಏಕತ್ವಜ್ಞಾನವನ್ನು ಅನುಭವಕ್ಕೆ ತಂದುಕೊಂಡಿರುವವನಾದ್ದರಿಂದ, ಈತನ ಕರ್ಮಗಳಲ್ಲಿ ಕರ್ತೃತ್ವವು ಉಳಿದಿರುವ ಅವಕಾಶವೇ ಇಲ್ಲ. ಅದಕ್ಕಾಗಿಯೇ ಈತನ ಕರ್ಮಗಳು, ಅವುಗಳ ಫಲಿತಗಳೂ ಕೂಡ, ಅಕರ್ಮಸ್ವರೂಪವಾದ ಪರಮಾತ್ಮನಲ್ಲಿ ವಿಲೀನವಾಗಿಬಿಡುತ್ತವೆ.
ವಿವರಣೆ:
20, 21 ಶ್ಲೋಕಗಳಲ್ಲಿ ಜೀವನ್ಮುಕ್ತರಲ್ಲಿಯೇ ಎರಡು ಬಗೆಯ ವ್ಯಕ್ತಿಗಳನ್ನು ಕುರಿತು ಪ್ರಸ್ತಾಪಿಸಲಾಗಿದೆ. ಇವರಿಬ್ಬರ ಮಧ್ಯದಲ್ಲಿ ಇರುವ ಅಡ್ಡಗೆರೆಯು ಬಹಳ ತೆಳುವಾದದ್ದು. ಆದ್ದರಿಂದ ಇವರಿಬ್ಬರನ್ನೂ ಬೇರ್ಪಡಿಸಿ ಗುರುತಿಸುವುದು ಕಷ್ಟ. ತಾನು ಯಾವ ಸ್ಥಾಯಿಯಲ್ಲಿ ಇರುವನೋ ಸಾಧಕನು ಗುರುತಿಸಿಕೊಳ್ಳುವುದೂ ಕಷ್ಟವೇ. ಅದಕ್ಕಾಗಿಯೇ ಭಗವಂತನು ಇದೇ ವಿಷಯವನ್ನು 22, 23ನೇ ಶ್ಲೋಕಗಳಲ್ಲಿ ಇನ್ನಷ್ಟು ವಿವರಿಸಿ ಹೇಳಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ