ಗೀತೆ – 96 : ಜ್ಞಾನ ಸಿದ್ಧಿ ಹೊಂದಿದವನ ಲಕ್ಷಣಗಳೇನು ?

Gitacharya
Spread the love

ಗೀತೆ : 96

22. ಯದೃಚ್ಛಾ ಲಾಭಸಂತುಷ್ಟಃ ದ್ವಂದ್ವಾತೀತೋ ವಿಮತ್ಸರಃ।
ಸಮಸ್ಸಿದ್ಧಾ-ವಸಿದ್ಧೌ ಚ ಕೃತ್ವಾಽಪಿ ನ ನಿಬಧ್ಯತೇ॥

ಯದೃಚ್ಛಾ ಲಾಭ ಸಂತುಷ್ಟಃ = ಅಂದುಕೊಳ್ಳದೇ ಲಭಿಸಿದವುಗಳಿಂದ ತೃಪ್ತಿ ಪಡೆಯುವನೂ, ದ್ವಂದ್ವಾತೀತಃ = ಶೀತೋಷ್ಣಾದಿ ದ್ವಂದ್ವಗಳು ಪೀಡಿಸುತ್ತಿದ್ದರೂ ಚಲಿಸದ ಮನಸ್ಸಿರುವವನೂ, ವಿಮತ್ಸರಃ = ಇತರರೊಂದಿಗೆ ಪೋಟಿ (ವೈರವು) ಇಲ್ಲದವನೂ, ಸಿದ್ಧೌ = ಬೇಕಾದದ್ದು ಲಭಿಸಿದರೂ, ಅಸಿದ್ಧೌ-ಚ = ಲಭಿಸದೇ ಹೋದರೂ ಕೂಡ, ಸಮಃ = ಸಮಾನವಾದ ಬುದ್ಧಿಯುಳ್ಳವನು, ಆದ ಮಾನವನು, ಕೃತ್ವಾ-ಅಪಿ = ಶರೀರವು ಉಳಿಯುವುದಕ್ಕೋಸ್ಕರ ಮಾಡುವ ಕೆಲಸಗಳನ್ನು ಮಾಡಿದರೂ ಕೂಡ, ನ- ನಿಬಧ್ಯತೇ = ಆ ಕರ್ಮಗಳಿಂದ ಬಂಧಿಸಲ್ಪಡನು.

ಅರ್ಜುನನೆ! ಜ್ಞಾನಸಿದ್ಧಿಯುಳ್ಳ ಜೀವನ್ಮುಕ್ತನಿಗೆ ಪ್ರಧಾನ ಲಕ್ಷಣಗಳು ನಾಲ್ಕು –
1. ತಾನು ಕೋರಿಕೊಳ್ಳದೇ ಯಾವುದು ಪ್ರಾಪ್ತಿಸಿದರೆ, ಅದರಿಂದಲೇ
ತೃಪ್ತಿಯಾಗಿ ಇರುವನು. ಅಂದರೆ “”ಇನ್ನು ಸಾಕು”
ಅಂದುಕೊಳ್ಳುವವನು.
2. ಶೀತೋಷ್ಣಗಳು, ಸುಖದುಃಖಗಳು, ಇಂತಹ ದ್ವಂದ್ವಗಳು
ಬಂದು ಮೇಲೆ ಬಿದ್ದು ಪೀಡಿಸುತ್ತಿದ್ದರೂ, ಮನಸ್ಸಿನಲ್ಲಿ
ಕಳವಳಪಡನು.
3. ಯಾರೊಂದಿಗೂ ಪೋಟಿಯಾಗಲಿ, ವೈರವಾಗಲಿ ಇಟ್ಟುಕೊಳ್ಳನು.
4. ತನಗೆ ಬೇಕಾದ್ದು ಅಯಾಚಿತವಾಗಿ ಲಭಿಸಿದರೂ, ಲಭಿಸದೇಹೋದರೂ ಕೂಡ ಹಿಗ್ಗುಕುಗ್ಗುಗಳು ಇಲ್ಲದೆ
ಸಮವಾಗಿ ಇರುವನು.
ಇಂತಹವನು ಪುಣ್ಯಪಾಪಗಳ ಪ್ರಾಪ್ತಿಗಾಗಿ ಯಾವುದಾದರೂ ಕೆಲಸಗಳನ್ನು ಮಾಡಬೇಕೆಂದು ಸಂಕಲ್ಪಿಸುವುದು ಸಾಧ್ಯವೇ? ಇಲ್ಲ. ಆದ್ದರಿಂದ ಆತನು ಯಾವುದನ್ನೂ ಸಂಕಲ್ಪಿಸಿ ಮಾಡುವುದಿಲ್ಲ. ಆ ಶರೀರಕ್ಕಿರುವ ಪೂರ್ವಾಭ್ಯಾಸಬಲದಿಂದ ಶರೀರವನ್ನು ನಿಲ್ಲಿಸಿಕೊಳ್ಳುವ ಯಾವುದೇ ಕೆಲಸಗಳನ್ನು ಆತನು ಮಾಡಿದರೂ, ಆ ಕೆಲಸಗಳ ಹಿಂದೆ ಕರ್ತೃತ್ವಬುದ್ಧಿಯಾಗಲಿ, ಫಲಾಕಾಂಕ್ಷೆಯಾಗಲಿ ಇರುವುದಿಲ್ಲವಾದ್ದರಿಂದ, ಆ ಕರ್ಮಗಳಲ್ಲಿರುವ ಬಂಧಕತ್ವ ಲಕ್ಷಣವು ನಿರ್ವೀರ್ಯವಾಗಿಹೋಗುತ್ತದೆ. ಆದ್ದರಿಂದ ಆ ಕರ್ಮಗಳು ಯಾವುವೂ ಆತನನ್ನು ಎಳ್ಳಷ್ಟು ಕೂಡ ಬಂಧಿಸಲಾರವು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ