ಗೀತೆ – 95 : ಪಾಪಪುಣ್ಯಗಳಿದ್ದರೆ ಜನನಮರಣಾದಿ ರೂಪವಾದ ಸಂಸಾರವು ಅಂಟುಕೊಳ್ಳುವುದು?!

Gitacharya
Spread the love

ಶ್ರೀ ಮದ್ಭಗವದ್ಗೀತಾ – 95

21. ನಿರಾಶೀರ್ಯತ-ಚಿತ್ತಾತ್ಮಾ ತ್ಯಕ್ತ ಸರ್ವಪರಿಗ್ರಹಃ।
ಶಾರೀರಂ ಕೇವಲಂ ಕರ್ಮ ಕುರ್ವನ್ ನಾಪ್ನೋತಿ ಕಿಲ್ಬಿಷಮ್‌॥

ನಿರಾಶೀಃ = ಯಾವ ತರಹದ ಕಾಮನೆಗಳೂ ಇಲ್ಲದವನೂ, ಯತ ಚಿತ್ತಾತ್ಮಾ = ತನ್ನ ಮನಸ್ಸನ್ನು, ದೇಹೇಂದ್ರಿಯಾದಿಗಳನ್ನು, ಹತೋಟಿಯಲ್ಲಿ ಇಟ್ಟುಕೊಂಡವನೂ, ತ್ಯಕ್ತ ಸರ್ವಪರಿಗ್ರಹಃ = ಮಮಕಾರಬುದ್ಧಿಯಿಂದ ಯಾವ ವಸ್ತುವನ್ನೂ ಸ್ವೀಕರಿಸದವನೂ ಆದ ಮಾನವನು, ಕೇವಲಂ = ಕರ್ತೃತ್ವಾಭಿಮಾನವಿಲ್ಲದ, ಶಾರೀರಂ = ಶರೀರ ರಕ್ಷಣೆಗೋಸ್ಕರವಿರುವ, ಕರ್ಮ = ಕರ್ಮವನ್ನು, ಕುರ್ವನ್‌ = ಮಾಡುತ್ತಿರುವವನಾದರೂ, ಕಿಲ್ಬಿಷಂ = ಪುಣ್ಯಪಾಪ ರೂಪವಾದ ಸಂಸಾರವನ್ನು, ನ-ಆಪ್ನೋತಿ = ಹೊಂದುವುದಿಲ್ಲ.

ಅರ್ಜುನನೆ! ಜೀವನ್ಮುಕ್ತರಲ್ಲಿ ಕೆಲವರಿಗೆ ಲೋಕಸಂಗ್ರಹಾರ್ಥವಾಗಿ ಸತ್ಕರ್ಮವನ್ನು ಮಾಡಬೇಕಾದ ಪ್ರಾರಬ್ಧವು ಉಳಿದಿರುತ್ತದೆ. ಅಂತಹವನಿಗೆ ಪ್ರಧಾನ ಲಕ್ಷಣಗಳು ಮೂರು –

  1. 1. ಆತನಿಗೆ ಯಾವ ವಿಧವಾದ ಕಾಮನೆಯೂ ಇರದು.
    2. ಆತನು ಯಾವ ಪದಾರ್ಥವನ್ನೂ “”ನನ್ನದು” ಎಂಬ
    ಮಮಕಾರದಿಂದ ಸ್ವೀಕರಿಸನು. ಆದ್ದರಿಂದ ಈತನಿಗೆ “”ನಾನು
    ಕರ್ತನು” ಎಂಬ ಅಹಂಕಾರವು ಕೂಡ ಇರುವ ಅವಕಾಶವಿಲ್ಲ.
    3. ಆತನ ಮನಸ್ಸಾಗಲಿ, ಜ್ಞಾನೇಂದ್ರಿಯ ಕರ್ಮೇಂದ್ರಿಯಗಳಿಂದ
    ಕೂಡಿದ ಶರೀರವಾಗಲಿ, ಆತನ ನಿಯಂತ್ರಣದಿಂದ ತಪ್ಪಿಹೋಗವು.

ಇಂತಹವನು ಯಾವುದಾದರೂ ಕೆಲಸವನ್ನು ಮಾಡಿದ್ದಾನೆಂದರೆ ಅದು ಪೂರ್ವಾಭ್ಯಾಸಬಲದಿಂದ ಶರೀರಧಾರಣೆಗೋಸ್ಕರ ನಡೆಯುತ್ತದೆಯೇ ಹೊರತು, ಬೇರೆ ವಿಧವಾದ ಕರ್ಮವು ಯಾವುದೂ ಆತನಿಗೆ ಇರುವುದಿಲ್ಲ. ಅಹಂಕಾರವು, ಮಮಕಾರವು, ಫಲಾಸಕ್ತಿಯು ಆತನಿಗೆ ಇಲ್ಲವಾದ್ದರಿಂದ ದೇಹಪೋಷಣಾರ್ಥವಾಗಿ ಆತನು ಮಾಡುವ ಕೆಲಸಗಳಿಂದ ಆತನಿಗೆ ಪಾಪವಾಗಲೀ, ಪುಣ್ಯವಾಗಲೀ ಅಂಟಿಕೊಳ್ಳುವ ಅವಕಾಶವಿಲ್ಲ. ಪಾಪಪುಣ್ಯಗಳಿದ್ದರೆ ಅಲ್ಲವೇ ಜನನಮರಣಾದಿ ರೂಪವಾದ ಸಂಸಾರವು ಅಂಟುಕೊಳ್ಳುವುದು?! ಆದ್ದರಿಂದ ಆತನಿಗೆ ಯಾವ ವಿಧವಾದ ಸಂಸಾರಬಂಧವೂ ಇರದು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ