ಗೀತೆ – 93 : ಜ್ಞಾನಿ ಮಾಡುವ ಕೆಲಸಗಳ ಹಿಂದೆ ಕಾಮವಾಗಲೀ, ಸಂಕಲ್ಪವಾಗಲಿ ಇರುವುದಿಲ್ಲ

Gitacharya
Spread the love

ಶ್ರೀ ಮದ್ಭಗವದ್ಗೀತಾ : 93

19. ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪ ವರ್ಜಿತಾಃ।
ಜ್ಞಾನಾಗ್ನಿ ದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ॥

ಯಸ್ಯ = ಯಾವನ, ಸರ್ವೇ = ಸಮಸ್ತವಾದ, ಸಮಾರಂಭಾಃ = ಕರ್ಮಗಳೂ ಕೂಡ, ಕಾಮ-ಸಂಕಲ್ಪ-ವರ್ಜಿತಾಃ = ಫಲಾಸಕ್ತಿಯಿಂದಲೂ, ಕರ್ತೃತ್ವಾಹಂಕಾರದಿಂದಲೂ, ಬಿಡಲ್ಪಟ್ಟಿರುವುವೋ, ತಂ = ಅಂತಹ, ಜ್ಞಾನಾಗ್ನಿ ದಗ್ಧಕರ್ಮಾಣಂ = ಜ್ಞಾನವೆಂಬ ಅಗ್ನಿಯಿಂದ ದಹಿಸಲ್ಪಟ್ಟ ಕರ್ಮಗಳುಳ್ಳ ಮಾನವನನ್ನು, ಪಂಡಿತಂ = ಪಂಡಿತನೆಂದು, ಬುಧಾಃ = ಆತ್ಮಜ್ಞಾನಿಗಳಾದವರು, ಆಹುಃ = ಹೇಳುತ್ತಿದ್ದಾರೆ.

ಅರ್ಜುನನೆ! ಸಾಮಾನ್ಯವಾಗಿ ಲೋಕದಲ್ಲಿ ಯಾರು ಯಾವ ಕೆಲಸ ಮಾಡಿದರೂ ಅದರ ಹಿಂದೆ, “”ಇದರಿಂದ ನನಗೆ ಈ ಫಲವು ಬರಬೇಕು” ಎಂಬ ಕಾಮವು ಇರುತ್ತದೆ. ಅದರೊಂದಿಗೆ, “”ಈ ಕೆಲಸಕ್ಕೆ ನಾನು ಕರ್ತನು” ಎಂಬ ಕರ್ತೃತ್ವರೂಪವಾದ ಸಂಕಲ್ಪವಿರುತ್ತದೆ. ಆದರೆ, ಪರಮಾತ್ಮಜ್ಞಾನವಿರುವವನು ಮಾಡುವ ಕರ್ಮಗಳು ಇದಕ್ಕೆ ಭಿನ್ನವಾಗಿ ನಡೆಯುತ್ತಿರುತ್ತವೆ. ಆತನು ಎಷ್ಟು ವಿಧವಾದ ಕೆಲಸಗಳನ್ನು ಮಾಡಿದರೂ ಅವುಗಳಲ್ಲಿ ಯಾವೊಂದರ ಹಿಂದೆಯೂ ಕೂಡ ಕಾಮವಾಗಲೀ, ಸಂಕಲ್ಪವಾಗಲೀ ಇರವು. ನಾನು ಇದಕ್ಕೆ ಮುಂಚೆ ಹೇಳಿದ ಕರ್ಮಾಕರ್ಮಗಳ ಏಕತ್ವಸೂತ್ರವನ್ನು ಹಿಡಿದುಕೊಳ್ಳುವುದರಿಂದ ಉಂಟಾಗುವ ಜ್ಞಾನವಿರುವಾಗ ಮಾತ್ರವೇ, ಹೀಗೆ ಕರ್ಮಗಳನ್ನು ಮಾಡುವುದು ಸಾಧ್ಯವಾಗುತ್ತದೆ. ಆ ವಿಧವಾಗಿ ಕಾಮಸಂಕಲ್ಪರಹಿತವಾಗಿ ಪಾಪಕರ್ಮಗಳನ್ನು ಮಾಡಿದರೂ, ಪುಣ್ಯಕರ್ಮಗಳನ್ನು ಮಾಡಿದರೂ ಕೂಡ, ಆ ಜ್ಞಾನಿಗೆ ಯಾವ ವಿಧವಾದ ಸುಖದುಃಖಗಳೂ ಅಂಟುವುದಿಲ್ಲ. ಏಕೆಂದರೆ, ಆತನಲ್ಲಿ ಇರುವ ಜ್ಞಾನವೆಂಬ ಅಗ್ನಿಯು ಆತನು ಮಾಡುವ ಕರ್ಮಗಳಲ್ಲಿನ ಕರ್ತೃತ್ವವನ್ನು ದಹಿಸಿಹಾಕಿಬಿಡುತ್ತದೆ. ಅಂದರೆ, ತವದಲ್ಲಿ ಹುರಿದ ಬೀಜವು ಬಿತ್ತನೆಯ ಬೀಜವಾಗದಂತೆ ಅವನ ಕರ್ಮವು ಕರ್ಮವೇ ಆಗದೇ ಹೋಗುತ್ತದೆ. ಇಂತಹ ಜ್ಞಾನವನ್ನು ಸಂಪಾದಿಸಿದವನನ್ನೇ “ಪಂಡಿತನು’ (ಮೇಧಾವಿಯು, ಜ್ಞಾನಿಯು, ತಿಳಿವಳಿಕೆ ಇರುವವನು) ಎಂದು ಬ್ರಹ್ಮವೇತ್ತರು ಹೇಳುತ್ತಿದ್ದಾರೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ