ಶ್ರೀ ಮದ್ಭಾಗವತಾ : 92
18. ಕರ್ಮಣ್ಯಕರ್ಮ ಯಃ ಪಶ್ಯೇತ್ ಅಕರ್ಮಣಿ ಚ ಕರ್ಮ ಯಃ।
ಸ ಬುದ್ಧಿಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್॥
ಯಃ = ಯಾವನಾದರೆ, ಕರ್ಮಣಿ = ಕರ್ಮದಲ್ಲಿ, ಅಕರ್ಮ = ಕರ್ಮವಿಲ್ಲದಿರುವುದನ್ನೂ, ಚ = ಮತ್ತು, ಯಃ = ಯಾವನಾದರೆ, ಅಕರ್ಮಣಿ = ಕರ್ಮವಿಲ್ಲದಿರುವುದರಲ್ಲಿ, ಕರ್ಮ = ನಿಜವಾದ ಕರ್ಮವನ್ನೂ, ಪಶ್ಯೇತ್ = ನೋಡುತ್ತಾನೆಯೋ, ಸಃ = ಅವನು, ಮನುಷ್ಯೇಷು = ಮನುಷ್ಯರಲ್ಲಿ, ಬುದ್ಧಿಮಾನ್ = ಬುದ್ಧಿಮಂತನು. ಸಃ = ಆತನು, ಯುಕ್ತಃ = ಯೋಗಿಯು, ಮತ್ತು, ಕೃತ್ಸ್ನಕರ್ಮಕೃತ್ = ಕರ್ತವ್ಯಗಳೆಲ್ಲವನ್ನೂ ನೆರವೇರಿಸಿದ ಮುಕ್ತಪುರುಷನು.
ಅರ್ಜುನನೆ! ಕರ್ಮದಲ್ಲಿ ಕರ್ಮವಿಲ್ಲದಿರುವುದನ್ನು ನೋಡಬೇಕು. ಕರ್ಮವಿಲ್ಲದಿರುವುದರಲ್ಲಿ ಕರ್ಮವನ್ನು ದರ್ಶಿಸಬೇಕು. ಅದೇ ನಿಜವಾದ ತಿಳಿವಳಿಕೆ. ಅದು ಇರುವವನೇ ಯೋಗಿಯು. ಆತನೇ ಮುಕ್ತಪುರುಷನು.
ವಿವರಣೆ:
ಕರ್ಮಾಕರ್ಮಗಳ ಏಕತ್ವಸೂತ್ರವು ಅರ್ಜುನನಿಗೆ ಸರಿಯಾಗಿ ಅರ್ಥವಾಗಿದೆಯೋ, ಇಲ್ಲವೋ ಎಂಬ ಸಂದೇಹವು ಬಾರದಿರಲು ಸಾಧಕರಿಗೆ ವಿವಿಧ ಕರ್ಮಗಳನ್ನು ಯಜ್ಞಕರ್ಮಗಳನ್ನಾಗಿ ಬದಲಿಸಿಕೊಳ್ಳುವ ವಿಧಾನಗಳನ್ನು ಸೂಚಿಸಲು, ಇನ್ನು 19ನೆಯ ಶ್ಲೋಕದಿಂದ 32ನೆಯ ಶ್ಲೋಕದವರೆಗೂ ವಿವಿಧ ಯಜ್ಞಕರ್ಮ ವಿಧಾನಗಳನ್ನು ಭಗವಂತನು ಹೇಳಲಿದ್ದಾನೆ. ಅದಕ್ಕೆ ಪೂರ್ವರಂಗವಾಗಿ ಯಜ್ಞಕರ್ಮವನ್ನು ಬ್ರಹ್ಮಕರ್ಮವನ್ನಾಗಿ ವಿಕಸಗೊಳಿಸಿಕೊಳ್ಳುವ ವಿಧಾನಗಳನ್ನು ಇಲ್ಲಿಂದ 6 ಶ್ಲೋಕಗಳಲ್ಲಿ ವಿವರಿಸಲಿದ್ದಾನೆ. ಈ ಬ್ರಹ್ಮಕರ್ಮ ಸಾಧನೆಗೆ ಮೂಲಸ್ತಂಭವಾದದ್ದು ಜ್ಞಾನವಾದ್ದರಿಂದ, ಮೊಟ್ಟಮೊದಲು 19ನೆಯ ಶ್ಲೋಕದಲ್ಲಿ ಜ್ಞಾನಪ್ರಾಶಸ್ತ್ಯವನ್ನು ಪ್ರಶಂಸಿಸಿದ್ದಾನೆ. ಇನ್ನು ಉಳಿದ ಶ್ಲೋಕಗಳನ್ನು ಈ ಪ್ರಣಾಳಿಕೆ ಪ್ರಕಾರ ಅವಗಾಹನೆ ಮಾಡಿಕೊಳ್ಳೋಣ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ