ಶ್ರೀ ಮದ್ಭಗವದ್ಗೀತಾ 91
17. ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ।
ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ॥
ಕರ್ಮಣಃ = ಶಾಸ್ತ್ರವಿಹಿತವಾದ ಕರ್ಮದ, ಅಪಿ = ತತ್ತ್ವವು ಕೂಡ, ಬೋದ್ಧವ್ಯಂ = ತಿಳಿದುಕೊಳ್ಳತಕ್ಕದ್ದಾಗಿದೆ. ಚ = ಮತ್ತು, ವಿಕರ್ಮಣಃ = ಶಾಸ್ತ್ರನಿಷಿದ್ಧ ಕರ್ಮದ
(ಅಪಿ = ತತ್ತ್ವವು ಕೂಡ), ಬೋದ್ಧವ್ಯಂ = ತಿಳಿದುಕೊಳ್ಳತಕ್ಕದ್ದಾಗಿದೆ. ಚ = ಮತ್ತು, ಅಕರ್ಮಣಃ = ಏನೂ ಮಾಡದೆ ಸುಮ್ಮನಿರುವುದರ (ಅಪಿ = ತತ್ತ್ವವು ಕೂಡ), ಬೋದ್ಧವ್ಯಂ = ತಿಳಿದುಕೊಳ್ಳತಕ್ಕದ್ದಾಗಿದೆ. ಹಿ = ಏಕೆಂದರೆ, ಕರ್ಮಣಃ = ಕರ್ಮ-ಅಕರ್ಮ-ವಿಕರ್ಮಗಳ, ಗತಿಃ = ನಡಿಗೆ (ಯಥಾರ್ಥಸ್ಥಿತಿಯು), ಗಹನಾ = ಸಂಕ್ಲಿಷ್ಟವಾದದ್ದು.
ಅರ್ಜುನನೆ! “”ಇಂದ್ರಿಯಗಳು ಕದಲುವುದರ ಹೆಸರು ಕರ್ಮವು. ಅವುಗಳು ಕದಲದಿರುವುದು ಅಕರ್ಮವು. ಅವು ವಿಕಟವಾಗಿ ಕದಲುವುದು ವಿಕರ್ಮವು. ಇಷ್ಟೇ ತಾನೆ! ಇದನ್ನು ಕುರಿತು ಪ್ರತ್ಯೇಕವಾಗಿ ತಿಳಿದುಕೊಳ್ಳುವುದೇನಿದೆ?” ಎಂದುಕೊಳ್ಳುವೆಯೇನೋ! ಅದು ತಪ್ಪು. ಇಲ್ಲಿ ಕರ್ಮವೆಂದರೆ ಶಾಸ್ತ್ರವಿಹಿತವಾದ ಕರ್ಮವು. ಇದು ಕೂಡ ಸ್ವಧರ್ಮ ಪರಧರ್ಮಾದಿರೂಪಗಳಲ್ಲಿ ಬೇರೆ ಬೇರೆಯಾಗಿ ಇರುತ್ತದೆ (ನೋಡು 3-31). ವಿಕರ್ಮವೆಂದರೆ ಶಾಸ್ತ್ರನಿಷಿದ್ಧವಾದ ಕರ್ಮವು. ಇದು ಕೂಡ ಸಂಕಟ ಪರಿಸ್ಥಿತಿಗಳನ್ನು ಅನುಸರಿಸಿ ಬೇರೆ ಬೇರೆಯಾಗಿ ಬದಲಾಗುತ್ತಾ ಇರುತ್ತದೆ. ಅಕರ್ಮವೆಂದರೆ, ಸುಮ್ಮನೆ ಸ್ತಬ್ಧವಾಗಿ ಬಿದ್ದಿರುವುದು. ಇದು ಕೂಡ ಅನೇಕ ವಿಧವಾಗಿ ಇದೆ. ತಮೋಗುಣದ ಪ್ರಾಬಲ್ಯದಿಂದ, ಮನಸ್ಸಿನಲ್ಲಿ ಕೋರಿಕೆಗಳು ಹೆಚ್ಚಾಗುತ್ತಾ ಇದ್ದರೂ, ಕರ್ಮೇಂದ್ರಿಯಗಳು ಕದಲದೇ ಬಿದ್ದಿರುವುದು ಒಂದು. ಸಮಾಧಿಯಿಂದ ಮನಸ್ಸೇ ಕದಲದೇ ಹೋಗುವುದರಿಂದ ಇಂದ್ರಿಯಗಳು ಕದಲದೇ ಬಿದ್ದಿರುವುದು ಒಂದು. ಜ್ಞಾನಸಿದ್ಧಿಯಿಂದ ಯಾವ ಕರ್ಮಗಳೂ ಮನಸ್ಸಿಗೆ ಅಂಟಿಕೊಳ್ಳದೇ ಇರುವುದು ಒಂದು. ಹೀಗೆ ಕರ್ಮ- ವಿಕರ್ಮ – ಅಕರ್ಮಗಳ ನಡೆಗಳು ಬಗೆಬಗೆಯಾಗಿ ಇವೆ. ಆದ್ದರಿಂದ, ಕರ್ಮಯೋಗದಲ್ಲಿ ಪ್ರಶ್ನಿಸುವವನಿಗೆ ಈ ಮೂರರ ಯಥಾರ್ಥಸ್ವರೂಪವನ್ನು ತಿಳಿದುಕೊಳ್ಳುವುದು ಬಹಳ ಕಷ್ಟವಾದ ಕೆಲಸ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ