ಗೀತೆ : 90 – ಕರ್ಮಗಳಲ್ಲಿ ಮೂರು ವಿಧ – ಕರ್ಮ, ಅಕರ್ಮ, ವಿಕರ್ಮ

Gitacharya
Spread the love

ಶ್ರೀ ಮದ್ಭಗವದ್ಗೀತಾ : 90

16. ಕಿಂಕರ್ಮ ಕಿಮಕರ್ಮೇತಿ ಕವಯೋಽಪ್ಯತ್ರ ಮೋಹಿತಾಃ।
ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ ಜ್ಞಾತ್ವಾ ಮೋಕ್ಷ್ಯಸೇಽಶುಭಾತ್‌॥

ಕರ್ಮ = ಆಚರಿಸತಕ್ಕ ಕೆಲಸವು, ಕಿಂ = ಯಾವುದು?, ಅಕರ್ಮ = ಅದಕ್ಕೆ ಭಿನ್ನವಾದದ್ದು, ಕಿಂ = ಯಾವುದು?, ಇತಿ-ಅತ್ರ = ಎಂಬೀ ವಿಷಯದಲ್ಲಿ, ಕವಯಃ-ಅಪಿ = ಮೇಧಾವಿಗಳು ಕೂಡ, ಮೋಹಿತಾಃ = ಗೊಂದಲದಲ್ಲಿ ಬಿದ್ದುಬಿಡುತ್ತಿದ್ದಾರೆ. ಯತ್‌ = (ಆದ್ದರಿಂದ) ಯಾವುದನ್ನು, ಜ್ಞಾತ್ವಾ = ತಿಳಿದುಕೊಂಡು, ಅಶುಭಾತ್‌ = ಸಂಸಾರರೂಪವಾದ ಅಶುಭದಿಂದ, ಮೋಕ್ಷ್ಯಸೇ= ವಿಮುಕ್ತಿಯನ್ನು ಹೊಂದುವೆಯೋ, ತತ್‌ = ಅಂತಹ, ಕರ್ಮ = ಕರ್ಮವನ್ನು ಕುರಿತು, ಅಕರ್ಮವನ್ನು ಕುರಿತು ಕೂಡ, ತೇ = ನಿನಗೆ, ಪ್ರವಕ್ಷ್ಯಾಮಿ = ವಿವರಿಸಿ ಹೇಳುತ್ತೇನೆ.

ಅರ್ಜುನನೆ! ಕರ್ಮ-ಅಕರ್ಮಗಳೆಂಬುವುವು ಸಂಕ್ಲಿಷ್ಟವಾದ ವಿಷಯಗಳು. ಆದ್ದರಿಂದಲೇ, ಅವುಗಳ ವಿಷಯದಲ್ಲಿ ಕೆಲವರು ಪೂರ್ವದ ಮೇಧಾವಿಗಳು ಕೂಡ ಗೊಂದಲದಲ್ಲಿ ಬಿದ್ದು ತಪ್ಪುಗಳನ್ನು ಮಾಡಿದ್ದಾರೆ. ಆದರೆ, ಅಶುಭರೂಪವಾದ ಸಂಸಾರಬಂಧಗಳಿಂದ ಹೊರಬೀಳಬೇಕಾದರೆ, ಅವುಗಳ ಯಥಾರ್ಥ ಸ್ವರೂಪವನ್ನು ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಕರ್ಮ-ಅಕರ್ಮಗಳ ತತ್ತ್ವವನ್ನು ನಿನಗೆ ವಿವರಿಸಿ ಹೇಳುತ್ತೇನೆ, ಕೇಳು.
ವಿವರಣೆ:
“”ಈ ಕರ್ಮಾಚರಣೆಯ ವಿಧಾನವು ಅನೂಚಾನ ಪರಂಪರಾಪ್ರಾಪ್ತವಾದದ್ದು. ಆದ್ದರಿಂದ, ಹಿಂದಿನವರು ಆಚರಿಸಿದ ಪದ್ಧತಿಯಲ್ಲಿಯೇ ನೀನು ಕೂಡ ಆಚರಿಸು” ಎಂದು ಭಗವಂತನು ಪ್ರತ್ಯೇಕವಾಗಿ ಹೇಳಿರುವುದರಿಂದ, “”ಇದೇನಿದು? ಕರ್ಮಯೋಗದಲ್ಲಿ ಅನೇಕ ಪದ್ಧತಿಗಳಿವೆಯೇ? ಕರ್ಮಕ್ಕೆ ಭಿನ್ನವಾದ ಅಕರ್ಮವು ಕೂಡ ಇದೆಯೇ? ಈ ಕರ್ಮಯೋಗವು ಕೊನೆಗೆ ಹೇಗೆ ಮೋಕ್ಷಕ್ಕೆ ತೆಗೆದುಕೊಂಡು ಹೋಗುತ್ತದೆ?” ಎಂಬ ಪ್ರಶ್ನೆಗಳು ಉದಯಿಸುತ್ತವೆ. ಇವುಗಳಿಗೆ ಭಗವಂತನು ವಿಸ್ತಾರವಾಗಿ ಸಮಾಧಾನವನ್ನು ಹೇಳಲಿದ್ದಾನೆ. ಅದರ ಭಾಗವಾಗಿ, ಕರ್ಮ – ಅಕರ್ಮ – ವಿಕರ್ಮ ಎಂದು ಕರ್ಮವನ್ನು ಮೂರು ವಿಭಾಗಗಳನ್ನಾಗಿ ಮಾಡಿ, ಅದನ್ನು ಕುರಿತು 16ರಿಂದ 18ರವರೆಗೆ ಇರುವ ಶ್ಲೋಕಗಳಲ್ಲಿ ವಿವರಿಸಿ, ಆಮೇಲೆ 32ನೆಯ ಶ್ಲೋಕದವರೆಗೂ ವಿವಿಧ ಕರ್ಮವಿಧಾನಗಳನ್ನು ಪ್ರಸ್ತಾಪಿಸಿ, ಆಮೇಲೆ 41ನೆಯ ಶ್ಲೋಕದವರೆಗೂ ಕರ್ಮಯೋಗವು ಜ್ಞಾನವಾಗಿ ಹೇಗೆ ಪರಿಣತಿಯಾಗುವುದೋ ವಿವರಿಸಿ, ಆನಂತರ 42ನೆಯ ಶ್ಲೋಕದಲ್ಲಿ, ಅಂದರೆ ಈ ಅಧ್ಯಾಯದ ಕೊನೆಯ ಶ್ಲೋಕದಲ್ಲಿ, ಜ್ಞಾನಸ್ಥಿತಿಯಲ್ಲಿ ಇರುತ್ತಾ ಕರ್ಮಯೋಗವನ್ನು ಆಚರಿಸಬೇಕೆಂದು ಭಗವಂತನು ಉಪದೇಶಿಸಲಿದ್ದಾನೆ. ಈ ಪ್ರಣಾಳಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಈ ಶ್ಲೋಕಗಳನ್ನು ಅರ್ಥ ಮಾಡಿಕೊಳ್ಳೋಣ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ