ಶ್ರೀ ಮದ್ಭಗವದ್ಗೀತಾ : 89
15. ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ ಕುರು ಕರ್ಮೈವ ತಸ್ಮಾತ್ ತ್ವಂ ಪೂರ್ವೈಃ ಪೂರ್ವತರಂ ಕೃತಮ್॥
ಏವಂ = ಪರಮಾತ್ಮನು ಈ ವಿಧವಾಗಿ ಮಾಡಿದ್ದಾನೆಂದು, ಜ್ಞಾತ್ವಾ = ತಿಳಿದುಕೊಂಡು, ಪೂರ್ವೈಃ = ಪೂರ್ವಕಾಲದಲ್ಲಿ, ಮುಮುಕ್ಷುಭಿಃ = ಮೋಕ್ಷಾರ್ಥಿಗಳಿಂದ, ಅಪಿ = ಕೂಡ, ಕರ್ಮ = ಶಾಸ್ತ್ರವಿಹಿತವಾದ ಕರ್ಮವು, ಕೃತಂ = ಅದೇ ವಿಧವಾಗಿ ಆಚರಿಸಲ್ಪಟ್ಟಿದೆ. ತಸ್ಮಾತ್ = ಆದ್ದರಿಂದ, ತ್ವಂ = ನೀನು, ಪೂರ್ವೈಃ = ಹಳಬರಿಂದ, ಕೃತಂ = ಆಚರಿಸಲ್ಪಟ್ಟಿರುವುದೂ, ಪೂರ್ವತರಂ = ಬಹಳ ಪ್ರಾಚೀನವಾದದ್ದು ಆದ, ಕರ್ಮ ಏವ = ಕರ್ಮ ವಿಧಾನವನ್ನೇ, ಕುರು= ಆಚರಿಸು.
ಅರ್ಜುನನೆ! “”ಪರಮಾತ್ಮನು ಕರ್ತೃತ್ವರಹಿತವಾಗಿಯೂ, ಫಲಾಪೇಕ್ಷಾರಹಿತವಾಗಿಯೂ, ಕರ್ಮಾಚರಣೆಯನ್ನು ಮಾಡಿ ಕರ್ಮಬಂಧಗಳಿಲ್ಲದೆ, ಆನಂದಸ್ವರೂಪನಾಗಿ ಇದ್ದಾನೆ” ಎಂಬ ವಿಷಯವನ್ನು ಪೂರ್ವಕಾಲದಲ್ಲಿರುವ ಸೂರ್ಯನು, ಇಕ್ಷ್ವಾಕುವು, ಮನುವು ಮೊದಲಾದ ಮೋಕ್ಷಕಾಮಿಗಳು ಅರ್ಥಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ, ಅವರು ಕೂಡ ಅದೇ ಪದ್ಧತಿಯಲ್ಲಿ ಕರ್ತೃತ್ವ, ಭೋಕ್ತೃತ್ವಾಭಿಮಾನ ರಹಿತರಾಗಿ, ವಿಹಿತಕರ್ಮಾಚರಣೆಯನ್ನು ಮಾಡಿದ್ದಾರೆ. ಆದ್ದರಿಂದ ಇದು ಹೊಸ ಪದ್ಧತಿಯಲ್ಲ. ಪರಂಪರೆಯಾಗಿ ಬರುತ್ತಿರುವ ಹಳೆಯ ಪದ್ಧತಿಯೇ. ಆದ್ದರಿಂದ ನೀನು ಕೂಡಾ ಯಾವ ಸಂದೇಹವೂ ಇಲ್ಲದೆಯೇ, ವಿಹಿತಕರ್ಮಾಚರಣೆಯಲ್ಲಿಯೇ ಮುಂದಾಗು. ಒಂದುವೇಳೆ ನಿನಗೆ ಈ ಹೊತ್ತಿಗೇ ಜ್ಞಾನಸಿದ್ಧಿಯು ಲಭಿಸಿದ್ದರೆ, ಜನಕಾದಿಗಳಂತೆ ಲೋಕಸಂಗ್ರಹಕ್ಕಾಗಿ ಕರ್ಮಾಚರಣೆಯನ್ನು ಮಾಡು (ನೋಡು 3-20). ಒಂದು ವೇಳೆ ನಿನಗಿನ್ನೂ ಜ್ಞಾನಸಿದ್ಧಿಯು ಲಭಿಸದಿದ್ದರೆ, ಫಲಾಸಕ್ತಿರಹಿತನಾಗಿ ಕರ್ಮಯೋಗಾನುಷ್ಠಾನವನ್ನು ಮಾಡು (ನೋಡು 3-19). ಅಷ್ಟೇ ಹೊರತು ಯಾವ ಕರ್ಮವನ್ನೂ ಮಾಡದ ಸ್ತಬ್ಧನಂತೆ ಬಿದ್ದಿರಬೇಡ. ವನವಾಸಿಯಂತೆ ಕರ್ಮಸಂನ್ಯಾಸವನ್ನು ಕೂಡಾ ಮಾಡಬೇಡ.-
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ