ಶ್ರೀ ಮದ್ಭಗವದ್ಗೀತಾ : 88
14. ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ;
ಇತಿ ಮಾಂ ಯೋಽಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ॥
ಕರ್ಮಾಣಿ = ಕರ್ಮಗಳು, ಮಾಂ = ಪರಮಾತ್ಮನಾದ ನನ್ನನ್ನು, ನ-ಲಿಂಪಂತಿ = ಅಂಟಿಕೊಳ್ಳುವುದಿಲ್ಲ. ಮೇ = ಪರಮಾತ್ಮನಾದ ನನಗೆ, ಕರ್ಮಫಲೇ = ಕರ್ಮಗಳ ಫಲದ ಮೇಲೆ, ಸ್ಪೃಹಾ = ಆಸಕ್ತಿಯು, ನ = ಇಲ್ಲ, ಇತಿ = ಎಂದು ಈ ವಿಧವಾಗಿ, ಯಃ = ಯಾವನಾದರೆ, ಮಾಂ = ಪರಮಾತ್ಮನಾದ ನನ್ನನ್ನು ಕುರಿತು, ಅಭಿಜಾನಾತಿ = ಅರ್ಥ ಮಾಡಿಕೊಳ್ಳುತ್ತಿದ್ದಾನೆಯೋ, ಸಃ = ಅಂತಹ ಸಾಧಕನು, ಕರ್ಮಭಿಃ = ಕರ್ಮಗಳಿಂದ, ನ-ಬಧ್ಯತೇ = ಬಂಧಿಸಲ್ಪಡನು.
ಅರ್ಜುನನೆ! ಪರಮಾತ್ಮನಿಗೆ ಕರ್ತೃತ್ವಾಹಂಕಾರವು ಇಲ್ಲವಾದ್ದರಿಂದ ಯಾವ ಕರ್ಮಗಳೂ ಆತನನ್ನು ಅಂಟಿಕೊಳ್ಳವು. ಅಂದರೆ, ಆ ಕರ್ಮಗಳ ಆಚರಣೆಯಿಂದ ಉಂಟಾಗುವ ಶಾರೀರಕ, ಮಾನಸಿಕ ಶ್ರಮಗಳು ಯಾವುವೂ ಆತನಿಗೆ ಅಂಟವು. ಆತನಿಗೆ ಕರ್ಮಫಲಗಳ ಮೇಲೆ ಅಪೇಕ್ಷೆಯೂ ಇಲ್ಲ. ಮೇಲಾಗಿ ಆತನು ಪೂರ್ಣಕಾಮನು. ಅಂದರೆ, ಎಲ್ಲ ಕೋರಿಕೆಗಳೂ ತೀರಿಹೋದವನು. ಆದ್ದರಿಂದ, ಹೊಸ ಕೋರಿಕೆಗಳು ಯಾವುವೂ ಆತನಿಗೆ ಹುಟ್ಟವು. ಅದಕ್ಕಾಗಿಯೇ, ಯಾವ ಫಲಿತಗಳೂ ಕೂಡ ಆತನಿಗೆ ಅಂಟಿಕೊಳ್ಳುವುದಿಲ್ಲ. ಆದ್ದರಿಂದಲೇ, ಪರಮಾತ್ಮನು ಶರೀರಧಾರಿಯಾಗಿ ಇರುವ ಸಮಯದಲ್ಲಿ ಮಾಡಿದ ಪಾಪಪುಣ್ಯಗಳಿಂದ ಆತನಿಗೆ ಹೊಸದಾಗಿ ಹೊಸದಾದ ಶರೀರಪ್ರಾಪ್ತಿ ಮೊದಲಾದ ಬಂಧಗಳು ಯಾವುವೂ ಉಂಟಾಗವು. “”ಪರಮಾತ್ಮನು ಇಂತಹವನು” ಎಂದು ಯಾವನು ಅರ್ಥಮಾಡಿಕೊಳ್ಳುವನೋ ಅಂತಹ ಸಾಧಕನಿಗೆ ಕೂಡ ಕರ್ಮಗಳಿಂದಾಗುವ ಕರ್ತೃತ್ವವಾಗಲೀ, ಅವುಗಳ ಫಲಿತಗಳಿಂದುಂಟಾಗುವ ಭೋಕ್ತೃತ್ವವಾಗಲೀ ಅಂಟಿಕೊಳ್ಳುವುದಿಲ್ಲ. ಅಂದರೆ, ಆತನು ಕರ್ಮಗಳಿಂದ ಬಂಧಿಸಲ್ಪಡನು
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ