ಶ್ರೀ ಮದ್ಭಗವದ್ಗೀತಾ : 85
11. ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ! ಸರ್ವಶಃ॥
ಪಾರ್ಥ = ಎಲೈ ಅರ್ಜುನನೆ, ಯೇ = ಯಾರು, ಯಥಾ = ಯಾವ ಸಾಧನಾವಿಧಾನದಿಂದ, ಮಾಂ = ನನ್ನನ್ನು, ಪ್ರಪದ್ಯಂತೇ = ಉಪಾಸಿಸುತ್ತಾರೋ, ತಾನ್ = ಅವರನ್ನು, ತಥಾ-ಏವ = ಅದೇ ವಿಧಾನದಿಂದ, ಅಹಂ = ನಾನು, ಭಜಾಮಿ = ಸೇರುತ್ತಿದ್ದೇನೆ. (ಅನುಗ್ರಹಿಸುತ್ತಿದ್ದೇನೆ.) ಮನುಷ್ಯಾಃ = ಮಾನವರು, ಸರ್ವಶಃ = ಎಲ್ಲ ವಿಧಾನಗಳಿಂದಲೂ, ಮಮ = ನನ್ನ, ವರ್ತ್ಮ = ಮಾರ್ಗವನ್ನು, ಅನುವರ್ತಂತೇ = ಅನುಸರಿಸುತ್ತಿದ್ದಾರೆ.
ಅರ್ಜುನನೆ! ಉಪಾಸನೆಯ ವಿಧಾನಗಳು ಬಗೆಬಗೆಯಾಗಿವೆ. ಅವುಗಳನ್ನು ಅನುಸರಿಸಿಯೇ ಸಾಧಕರ ಅಂತರ್ಗತ ಆಕಾಂಕ್ಷೆಗಳು ಕೂಡ ಬಗೆಬಗೆಯಾಗಿ ಇರುತ್ತಿವೆ. ಇವರಲ್ಲಿ ಬೇರೆಯ ಕೋರಿಕೆಗಳು ಇರುವವರಿಗೆ ಮೋಕ್ಷದ ಬಯಕೆ ತೀವ್ರವಾಗಿ ಇರಲು ಅವಕಾಶವಿಲ್ಲ. ಇಂತಹ ಸಾಧಕರೆಲ್ಲರಿಗೂ ನಾನು ಒಂದೇ ತರಹದ ಫಲಿತವನ್ನು ಪ್ರಸಾದಿಸಿದರೆ, ನಾನು ಪಕ್ಷಪಾತಿಯೇ ಆಗುತ್ತೇನೆ. ಆದ್ದರಿಂದ ನಾನು ಆ ಕೆಲಸವನ್ನು ಮಾಡಲಾರೆ. ಯಾರ ಉಪಾಸನಾ ವಿಧಾನವು ಹೇಗೆ ಇದೆಯೋ, ಅದರ ಹಿಂದೆ ಇರುವ ಉದ್ದೇಶಗಳು ಹೇಗೆ ಇವೆಯೋ ಗಮನಿಸಿಕೊಂಡು, ಯಾರಿಗೆ ತಕ್ಕ ಫಲಿತಗಳನ್ನು ಅವರಿಗೆ ಪ್ರಸಾದಿಸುತ್ತಾ ಇರುತ್ತೇನೆ. ನಾನು ಯಾರನ್ನೂ ಕಡಿಮೆ ಮಾಡಿ ನೋಡುವುದಿಲ್ಲ. ಏಕೆಂದರೆ, ಎಲ್ಲ ವಿಧದ ಮಾನವರೂ ಕೂಡ ಯಾವುದೋ ಒಂದು ವಿಧಾನದಿಂದ ನನ್ನ ಮಾರ್ಗವನ್ನೇ, ಅಂದರೆ ಪರತತ್ತ್ವದ ಮಾರ್ಗವನ್ನೇ, ಅನುಸರಿಸುತ್ತಿದ್ದಾರೆ. ಆದರೆ, ಕೆಲವರು ನೇರ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಕೆಲವರು ಸುತ್ತಿಬಳಸಿದ ದಾರಿಯಲ್ಲಿ ನಡೆಯುತ್ತಿದ್ದಾರೆ. ಅಷ್ಟೇ ವ್ಯತ್ಯಾಸವು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ