ಗೀತೆ – 84 : ಮೋಕ್ಷದ ಸ್ಥಿತಿ ತಲುಪುವುದು ಹೇಗೆ ?

Gitacharya
Spread the love

ಶ್ರೀ ಮದ್ಭಗವದ್ಗೀತಾ : 84

10. ವೀತರಾಗಭಯಕ್ರೋಧಾಃ ಮನ್ಮಯಾ ಮಾಮುಪಾಶ್ರಿತಾಃ।
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ॥

ವೀತರಾಗಭಯಕ್ರೋಧಾಃ = ಕೋರಿಕೆಯು, ಭಯವು, ಕೋಪವು, ಎಂಬುವು ತೊಲಗಿಹೋದವರೂ, ಮನ್ಮಯಾಃ = ನನ್ನಲ್ಲಿಯೇ ತನ್ಮಯತ್ವ ಉಳ್ಳವರೂ, ಮಾಂ = ನನ್ನನ್ನು, ಉಪಾಶ್ರಿತಾಃ = ಶರಣುಹೊಂದಿದವರೂ, ಆದ, ಬಹವಃ = ಎಷ್ಟೋ ಮಂದಿ, ಜ್ಞಾನತಪಸಾ = ಜ್ಞಾನರೂಪವಾದ ತಪಸ್ಸಿನಿಂದ, ಪೂತಾಃ = ಪರಿಶುದ್ಧರಾಗಿ, ಮದ್ಭಾವಂ = ಪರಮಾತ್ಮತ್ವವನ್ನು, ಆಗತಾಃ = ಹೊಂದಿದ್ದಾರೆ.

ಅರ್ಜುನನೆ! ಈ ಹೊತ್ತೇ ಅಲ್ಲ, ಪೂರ್ವಕಾಲದಲ್ಲಿಯೂ ಕೂಡ,
ಹಿಂದಿನ ಶ್ಲೋಕದಲ್ಲಿ ನಾನು ಹೇಳಿದ ರೀತಿಯಲ್ಲಿ ಸಾಕ್ಷಾತ್ತಾಗಿ ಪರಮಾತ್ಮತ್ವಸ್ಥಿತಿಯನ್ನು, ಅಂದರೆ ಮೋಕ್ಷವನ್ನು, ಕೆಲವರು ಹೊಂದಿದ್ದಾರೆ. ಆದರೆ, ಅಂತಹ ಸ್ಥಿತಿ ಬರಬೇಕಾದರೆ, ಯಾವನಾದರೂ ಸರಿಯೇ, ಕೋರಿಕೆಯು, ಭಯವು, ಕ್ರೋಧವು, ಎಂಬವುಗಳನ್ನು ಪೂರ್ತಿಯಾಗಿ ಬಿಡಬೇಕು. ಅನಂತರ ಪರಮಾತ್ಮನನ್ನೇ ಭಾವನೆಮಾಡುತ್ತಾ ಇರಬೇಕು. ಆಗ ಸಂಗೀತದಲ್ಲಿ ಆಸಕ್ತಿಯುಳ್ಳವನ ಮನಸ್ಸು ಸಂಗೀತದಲ್ಲಿ ತನ್ಮಯವಾಗಿಹೋದಹಾಗೆ ಈ ಸಾಧಕನ ಮನಸ್ಸು ಪರಮಾತ್ಮನಲ್ಲಿ ತನ್ಮಯವಾಗಿ ಹೋಗಬೇಕು. ಅಂದರೆ ಆತನ ಮನಸ್ಸು ತುಂಬ ಪರಮಾತ್ಮನೇ ತುಂಬಿರಬೇಕು. ಅಷ್ಟೇ ಅಲ್ಲದೆ, ಅದು ಪರಮಾತ್ಮನೊಬ್ಬನನ್ನೇ ಶರಣಾಗತಿ ಹೊಂದಿರಬೇಕು. ಇವುಗಳನ್ನು ಸಾಧಿಸುತ್ತಾ ಆತನು ಜ್ಞಾನರೂಪವಾದ ತಪಸ್ಸನ್ನು ಮಾಡಬೇಕು. ಹಾಗೆ ಮಾಡಿದರೆ ಆತನಿಗಿರುವ ಪಾಪಪುಣ್ಯಗಳ ರೂಪವಾದ ಕರ್ಮಬಂಧಗಳೆಲ್ಲವೂ ಪ್ರಕ್ಷಾಳನೆ ಆಗಿಹೋಗಿ, ಆತನು ಪವಿತ್ರನಾಗುತ್ತಾನೆ. ಆಗ ಆತನಿಗೆ ಪರಮಾತ್ಮ ಸ್ವರೂಪಸ್ಥಿತಿಯು ಬರುತ್ತದೆ. ಅಂದರೆ ಮೋಕ್ಷವು ಬರುತ್ತದೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ